Advertisement

ಬ್ಯಾರೇಜ್‌ ನಿರ್ಮಾಣ ಅನಿವಾರ್ಯ

02:58 PM Feb 22, 2020 | Suhan S |

ಕಾರವಾರ: ಬೇಸಿಗೆ ಆರಂಭಕ್ಕೆ ಇನ್ನೇನು 75 ದಿನ ಬಾಕಿಯಿದೆ. ಆದರೆ, ಕಾರವಾರ ನಗರದ ನಿವಾಸಿಗಳಿಗೆ ಈಗಲೇ ಕುಡಿಯುವ ನೀರಿನ ಬರ ಎದುರಾಗುವ ಆತಂಕ ಕಾಡುತ್ತಿದೆ. ಜೊತೆಗೆ ಕದಂಬ ನೌಕಾನೆಲೆ ಸಹ ನೀರು ಪೂರೈಕೆಗೆ ಬೇಡಿಕೆಯಿಟ್ಟಿದ್ದು, ಬ್ಯಾರೇಜ್‌ ನಿರ್ಮಾಣಕ್ಕೆ ಈಗಾಗಲೇ ತನ್ನ ಪಾಲಿನ ಹಣವನ್ನು ರಾಜ್ಯ ಸರ್ಕಾರಕ್ಕೆ ಸಂದಾಯ ಮಾಡಿದೆ.

Advertisement

ಗಂಗಾವಳಿ ನದಿಗೆ ಬ್ಯಾರೇಜ್‌ ನಿರ್ಮಿಸಿ ಅಥವಾ ಕಾಳಿ ನದಿಯಿಂದ ಪೈಪ್‌ ಲೈನ್‌ ಹಾಕಿ ನೀರು ಪೂರೈಸುವಂತೆ ನೆನಪಿಸಿದೆ. ದೇಶದ ಪಶ್ಚಿಮ ಕರಾವಳಿಯ ರಕ್ಷಣೆಯ ಅಂಗವಾಗಿರುವ ಐಎನ್‌ಎಸ್‌ ಕದಂಬ ನೌಕಾನೆಲೆಯ ನೇವಿ ಸಿಬ್ಬಂದಿ ನಿವಾಸಿಗಳ ಜೊತೆಗೆ ಸ್ಥಳೀಯರಿಗೆ ನೀರಿನ ಬವಣೆ ಎದುರಾಗುವ ಆತಂಕ ಶುರುವಾಗಿದೆ. ಕರಾವಳಿಯ ಕಾರವಾರ, ಅಂಕೋಲಾ ತಾಲೂಕುಗಳಿಗೆ ಪ್ರಮುಖ ನೀರಿನ ಮೂಲವಾಗಿದೆ ಗಂಗಾವಳಿ ನದಿ. ನೌಕಾನೆಲೆ ಪ್ರತ್ಯೇಕ ನೀರಿನ ಸರಬರಾಜು ವ್ಯವಸ್ಥೆ ಕಲ್ಪಿಸುವಂತೆ ರಾಜ್ಯ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದೆ. ಸದ್ಯ ಕಾರವಾರಕ್ಕೆ ಬರುವ ಪೈಪ್‌ ಲೈನ್‌ ನಿಂದಲೇ ನೌಕಾನೆಲೆಗೆ ನೀರು ಸರಬರಾಜು ನಡೆದಿದೆ.

ಜಲಮಂಡಳಿಗೆ ಬೇಡಿಕೆ: ಜಿಲ್ಲೆಯ ಕರಾವಳಿಯಲ್ಲಿ ಹರಿಯುವ ಕಾಳಿ ಹಾಗೂ ಗಂಗಾವಳಿ ನದಿಗಳು ಕಾರವಾರ ಹಾಗೂ ಅಂಕೋಲಾ ತಾಲೂಕುಗಳ ಪ್ರದೇಶಗಳಿಗೆ ಕುಡಿಯುವ ನೀರಿನ ಪ್ರಮುಖ ಆಸರೆಯಾಗಿವೆ. ಅದರಲ್ಲೂ ಗಂಗಾವಳಿ ನದಿಯಿಂದ ಕಾರವಾರ ನಗರದ ಬಹುಪಾಲು ಪ್ರದೇಶಕ್ಕೆ ನೀರು ಪೂರೈಕೆಯಾಗುತ್ತದೆ. ಇದೇ ನದಿಯಿಂದ ಕದಂಬ ನೌಕಾನೆಲೆಗೂ ನೀರು ಪೂರೈಕೆ ಮಾಡುತ್ತಿದ್ದು, ಕಳೆದ ಬಾರಿ ಭೀಕರ ಬೇಸಿಗೆ ಎದುರಾದ ಪರಿಣಾಮ ಗಂಗಾವಳಿ ನದಿ ಬತ್ತಿದ್ದರಿಂದ ನೀರಿಗಾಗಿ ಹಾಹಾಕಾರ ಉಂಟಾಗಿತ್ತು.ಆದರೆ, ಈ ಬಾರಿ ನೌಕಾನೆಲೆಯ ಎರಡನೇ ಹಂತದ ಕಾಮಗಾರಿ ಪ್ರಗತಿಯಲ್ಲಿದ್ದು, ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಪ್ರತ್ಯೇಕ ನೀರಿನ ವ್ಯವಸ್ಥೆ ಮಾಡುವಂತೆ ಜಲಮಂಡಳಿಗೆ ನೌಕಾನೆಲೆ ಬೇಡಿಕೆ ಇಟ್ಟಿದೆ. ಇದರಿಂದ ಬೇಸಿಗೆಯಲ್ಲಿ ಮತ್ತೆ ನೀರಿನ ಸಮಸ್ಯೆ ಎದುರಾಗಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಉಪ್ಪು ನೀರು ಶುದ್ಧೀಕರಿಸಿಕೊಳ್ಳಲಿ: ಕಳೆದ ಬಾರಿ ಗಂಗಾವಳಿ ಬತ್ತಿದ ಪರಿಣಾಮ ಕಾರವಾರ ಭಾಗದ ಜನರು ನೀರಿಗಾಗಿ ಪರದಾಡು ವಂತಾಗಿತ್ತು. ಇದೀಗ ನೌಕಾನೆಲೆಗೆ ಪ್ರತ್ಯೇಕವಾಗಿ ನೀರು ಸರಬರಾಜಾಗುವುದರಿಂದ ಬೇಸಿಗೆಯಲ್ಲಿ ಮತ್ತೆ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ. ಅಲ್ಲದೇ ನೌಕಾನೆಲೆ ಕಾಮಗಾರಿಗಳಿಗೆ ಕುಡಿಯುವ ನೀರನ್ನು ಬಳಕೆ ಮಾಡುವುದು ಸರಿಯಲ್ಲವಾಗಿದ್ದು, ಮಂಗಳೂರಿನಲ್ಲಿರುವಂತೆ ಉಪ್ಪು ನೀರನ್ನು ಶುದ್ಧೀಕರಿಸಿ ಕಾಮಗಾರಿಗೆ ಬಳಸಿಕೊಳ್ಳಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.

ಕದಂಬ ನೌಕಾನೆಲೆಯಲ್ಲಿ ಎರಡನೇಯ ಹಂತದ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಹಿನ್ನಲೆ ಹೆಚ್ಚಿನ ನೀರಿನ ಅಗತ್ಯತೆ ಇದೆ. ಅಲ್ಲದೇ ಬೇಸಿಗೆಯಲ್ಲಿ ಕಾಮಗಾರಿ ಮುಂದುವರಿಸಲು ನೀರಿನ ಅಭಾವ ಎದುರಾಗುವ ಹಿನ್ನಲೆ ಕಾಳಿ ಅಥವಾ ಗಂಗಾವಳಿ ನದಿಯಿಂದ ಕಾಮಗಾರಿಗೂ ಸಾಕಾಗುವಷ್ಟು ನೀರನ್ನು ಪೂರೈಸುವಂತೆ ನೌಕಾನೆಲೆ ಬೇಡಿಕೆ ಇಟ್ಟಿದೆ. ಈ ನಿಟ್ಟಿನಲ್ಲಿ ಈಗಾಗಲೇ ಎರಡೂ ನದಿಗಳಿಂದ ನೀರನ್ನು ಪೂರೈಕೆ ಮಾಡುವ ಸಾಧ್ಯತೆಗಳ ಕುರಿತು ಜಲಮಂಡಳಿ ಕ್ರಿಯಾಯೋಜನೆಯನ್ನೂ ರೂಪಿಸಿ ಸಲ್ಲಿಕೆ ಮಾಡಿದ್ದು, ಇನ್ನೂ ಯೋಜನೆ ಅಂತಿಮವಾಗಿಲ್ಲ. ಆದರೆ, ಇದರಿಂದ ಕಾರವಾರ ನಗರಕ್ಕೆ ನೀರು ಪೂರೈಕೆ ಮಾಡಲು ಸಮಸ್ಯೆಯಾಗುವುದಿಲ್ಲ ಎಂದು ಜಲಮಂಡಳಿ ತಿಳಿಸಿದೆ.

Advertisement

40 ಮಿಲಿಯನ್‌ ಲೀಟರ್‌ ನೀರು ಅಗತ್ಯ : ನೌಕಾನೆಲೆಯಲ್ಲಿ 2024ರವರೆಗೆ ಎರಡನೇ ಹಂತದ ಕಾಮಗಾರಿ ನಡೆಯುವುದರಿಂದ 40 ಮಿಲಿಯನ್‌ ಲೀಟರ್‌ಗಳಷ್ಟು ನೀರಿನ ಅಗತ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಪ್ರತ್ಯೇಕ ನೀರಿನ ವ್ಯವಸ್ಥೆಗೆ ನೌಕಾನೆಲೆ ಬೇಡಿಕೆ ಇಟ್ಟಿದೆ. ಅಲ್ಲದೇ ನದಿಗೆ ಬ್ಯಾರೇಜ್‌ ನಿರ್ಮಾಣಕ್ಕೆ ಬೇಕಾಗುವ ತನ್ನ ಪಾಲಿನ ಹಣ ಅಂದಾಜು 70 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರಕ್ಕೆ ಸಂದಾಯ ಮಾಡಿದೆ ಎನ್ನಲಾಗಿದೆ. ಹಾಗಾಗಿ ಗಂಗಾವಳಿ ನದಿಗೆ ಅಡ್ಡಲಾಗಿ ಬ್ಯಾರೇಜ್‌ ನಿರ್ಮಾಣ ಮಾಡಿದಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾಗುವುದನ್ನು ತಪ್ಪಿಸಬಹುದು ಎನ್ನುವುದು ಜಲಮಂಡಳಿ ಅಧಿಕಾರಿಗಳ ಅಭಿಪ್ರಾಯವಾಗಿದೆ. ಬ್ಯಾರೇಜ್‌ ನಿರ್ಮಾಣಕ್ಕೆ ಕಂದಾಯ ಭೂಮಿಯೂ ಲಭ್ಯವಿದೆ.

ಹತ್ತಿಪ್ಪತ್ತು ಹೆಕ್ಟೇರ್‌ ಭೂಮಿ ಅರಣ್ಯ ಇಲಾಖೆಯದಾಗಿದ್ದು, ಅದರ ಬಳಕೆಗೆ ಕೇಂದ್ರ ಅರಣ್ಯ ಪರಿಸರ ಇಲಾಖೆಯ ಅನುಮತಿ ಪಡೆಯುವ ಕೆಲಸ ಮಾತ್ರ ಬಾಕಿಯಿತ್ತು. ಇದಕ್ಕೆ ಕಳೆದ 2 ವರ್ಷದಿಂದ ಪ್ರಯತ್ನ ಸಾಗಿತ್ತು. ಆದರೆ ಜಲ ಮಂಡಳಿ ಈ ವಿಷಯಕ್ಕೆ ಹೆಚ್ಚು ಆಸಕ್ತಿ ತಾಳದ ಕಾರಣ ಯೋಜನಾ ಮೊತ್ತ ಸಹ ಹೆಚ್ಚತೊಡಗಿದೆ. ಈಗಾಗಲೇ ರಾಜ್ಯ ಸರ್ಕಾರಕ್ಕೆ ಹಣ ನೀಡಿರುವ ರಕ್ಷಣಾ ಇಲಾಖೆ ಬ್ಯಾರೇಜ್‌ ಕಟ್ಟಿ ನೀರು ಕೊಡುವಂತೆ ಕೇಳತೊಡಗಿದೆ. ಇನ್ನೊಂದೆಡೆ ಈ ಬಾರಿ ಉತ್ತಮ ಮಳೆಯಾಗಿದ್ದರೂ ಸಹ ಹರಿವ ನದಿ ನೀರನ್ನು ಸಂಗ್ರಹಿಸಿ ಇಡುವ ಕೆಲಸವಾಗಿಲ್ಲ. ಹೀಗಿರುವಾಗ ನೌಕಾನೆಲೆಗೆ ಪ್ರತ್ಯೇಕವಾಗಿ ನೀರನ್ನು ಸರಬರಾಜು ಮಾಡಿದ ಬಳಿಕ, ಜನಸಾಮಾನ್ಯರ ಬಳಕೆಗೆ ಸಾಕಾಗುವಷ್ಟು ನೀರು ಇರಲಿದೆಯೇ ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ.

ಗಂಗಾವಳಿಯಿಂದ ನೀರು ಸರಬರಾಜು ಮಾಡಲು ಫೆಬ್ರುವರಿ ಕೊನೆಯವರೆಗೂ ಸಮಸ್ಯೆ ಇಲ್ಲ. ಆ ಬಳಿಕ ಬೇಸಿಗೆಯಲ್ಲಿ ನೀರಿನ ಹರಿವು ಕಡಿಮೆಯಾಗುವುದರಿಂದ ನೀರನ್ನು ತಡೆದು ನಿಲ್ಲಿಸಿ, ಕಾರವಾರ ನಗರ, ಗ್ರಾಮೀಣ ಭಾಗಗಳಿಗೆ ಪೂರೈಕೆ ಮಾಡಲಾಗುತ್ತಿತ್ತು. ಇದೀಗ ಗಂಗಾವಳಿಯಿಂದ ನೌಕಾನೆಲೆಗೆ ಪ್ರತ್ಯೇಕವಾಗಿ ನೀರು ಪೂರೈಕೆ ಮಾಡಲು ಬ್ಯಾರೇಜ್‌ ನಿರ್ಮಾಣಕ್ಕೆ ಯೋಜನೆರೂಪಿಸಿದ್ದು, ನೀರು ಪೂರೈಕೆಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. – ಸುರೇಶ್‌, ಜಲಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌

 

-ನಾಗರಾಜ ಹರಪನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next