Advertisement
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿ ಪ್ರಕಟಗೊಳ್ಳುತ್ತಿರುವ ಅಂತರ್ಜಾಲ ಕನ್ನಡ ಜ್ಞಾನಕೋಶ “ಕಣಜ’ಕ್ಕೆ ಇತ್ತೀಚೆಗೆ ಶಾಲಾ ಪಠ್ಯಪುಸ್ತಕಗಳು ಮತ್ತು ಕರ್ನಾಟಕ ಗೆಜೆಟಿಯರ್ ಅನ್ನು ಅಳವಡಿಸಲಾಗಿದೆ. ಜತೆಗೆ “ಕಣಜ’ಕ್ಕೆ ಭೇಟಿ ನೀಡಿದವರು ಮಾಹಿತಿಯನ್ನು ಸುಲಭವಾಗಿ ಪಡೆಯುವಂತಾಗಲು ಈಗ ವೆಬ್‌ಸೈಟ್ ಅನ್ನು ಮರುವಿನ್ಯಾಸಗೊಳಿಸಲಾಗಿದೆ.
Related Articles
Advertisement
“ಇ-ದಿನ’ ವಿಶೇಷ: ಕನ್ನಡ ಜ್ಞಾನಕೋಶ ಇದೀಗ ವಿನೂತನವಾದ “ಇ-ದಿನ’ ಎಂಬ ವಿಭಾಗವನ್ನು ಓದುಗರಿಗಾಗಿ ಆರಂಭಿಸಿದೆ. ಜಗತ್ತಿನೆಲ್ಲೆಡೆ ಈ ದಿನದಂದು ನಡೆದ ವಿಚಾರಗಳನ್ನು ಒಂದು ಲೈನ್ ಸುದ್ದಿಯಂತೆ ಒಂದು ಪ್ಯಾರಾದಷ್ಟು ಮಾಹಿತಿಯನ್ನು ಒದಗಿಸಲಾಗುತ್ತಿದೆ. ಕ್ರಿಸ್ತಪೂರ್ವ, ಕ್ರಿಸ್ತ ಶಕದ ಸುದ್ದಿಗಳು ಇಲ್ಲಿ ಲಭ್ಯ. ವಿವಿಧ ಇಸವಿಗಳಲ್ಲಿ ಆಯಾ ದಿನದಂದು ನಡೆದ ಮಹತ್ವದ ಘಟನೆಗಳು, ಅನ್ವೇಷಣೆ, ಹಬ್ಬಗಳು, ಆಚರಣೆ, ಸಂಶೋಧನೆ, ಮಹಾತ್ಮರ ಜನ್ಮದಿನ ಹೀಗೆ ಪ್ರತಿಯೊಂದು ವಿಷಯಗಳನ್ನು ಈ ವಿಭಾಗದಲ್ಲಿ ಕಾಣಬಹುದು.
50 ಲಕ್ಷ ವೀಕ್ಷಕರು!: ವಿಶೇಷವೆಂದರೆ ಇದುವರೆಗೂ ವಿಶ್ವದಾದ್ಯಂತ ಇರುವ ಕನ್ನಡಿಗರಲ್ಲಿ ಸುಮಾರು 46,14,132 ಮಂದಿ ಈ “ಕಣಜ’ ವೆಬ್‌ಸೈಟ್ ವೀಕ್ಷಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಎಂಟು ಹೊಸ ವಿಭಾಗಗಳನ್ನು ಆರಂಭಿಸುವ ತಯಾರಿಯಲ್ಲಿರುವ ಕಣಜ ತಂಡವು ಪ್ರತಿ ತಿಂಗಳು ಕನಿಷ್ಠ ಐದು ಲಕ್ಷ ಮಂದಿಯಾದರೂ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆಯುವಂತಾಗಬೇಕು ಎಂಬ ಗುರಿ ಹೊಂದಿದೆ. ಅದಕ್ಕಾಗಿ ಟ್ವೀಟರ್, ಫೇಸ್ ಬುಕ್ ಇತ್ಯಾದಿ ಸಾಮಾಜಿಕ ಜಾಲತಾಣಗಳಿಗೆ ಲಿಂಕ್ ಮಾಡಲು ಉತ್ಸುಕವಾಗಿದೆ. ಶೀಘ್ರವೇ ಕಣಜ 50 ಲಕ್ಷ ವೀಕ್ಷಕರ ಗುರಿ ಮುಟ್ಟಲಿದೆ ಎಂಬುದಾಗಿ ಪ್ರಾಜೆಕ್ಟ್ ಮ್ಯಾನೇಜರ್ ರಾಧಾಕೃಷ್ಣ ಸಂತಸ ವ್ಯಕ್ತಪಡಿಸಿದ್ದಾರೆ.
ಕಣಜದ ಹಳೆ ವಿನ್ಯಾಸ ಮೊಬೈಲ್ ಮಾಧ್ಯಮಕ್ಕೆ ಸರಿ ಹೊಂದುತ್ತಿರಲಿಲ್ಲ. ಆದ್ದರಿಂದ ಹೊಸದಾಗಿ ಪೋರ್ಟಲ್ ಬಳಸಿ ಸುಲಭವಾಗಿ ಸರ್ಚ್ ಆಗುವಂತೆ, ಮೊಬೈಲ್ ಇತ್ಯಾದಿ ಮಾಧ್ಯಮಕ್ಕೆ ಹೊಂದಿಕೆ ಆಗುವಂತೆ ವಿನ್ಯಾಸ ಮಾಡಲಾಗಿದೆ. ಮುಖ್ಯವಾಗಿ ಎಲ್ಲ ವಿಭಾಗಗಳನ್ನು ಸುಲಭವಾಗಿ ಗುರುತಿಸಲಾಗುವಂತೆ ವಿಭಾಗಗಳನ್ನು ಮರು ವಿನ್ಯಾಸಗೊಳಿಸಲಾಗಿದೆ.– ಕೆ.ಎ.ದಯಾನಂದ್, ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ – ಸಂಪತ್ ತರೀಕೆರೆ