Advertisement

ಬಾರ್ಕೂರು ಚೌಳಿಕೆರೆ ಕಾರು ಅಪಘಾತ: ಅಪಾಯವನ್ನೂ ಲೆಕ್ಕಿಸದೇ ಕೆರೆಗೆ ಧುಮುಕಿದ ಅವಳಿ ವೀರರು!

08:25 PM Jun 23, 2020 | Hari Prasad |

ಬ್ರಹ್ಮಾವರ: ಯಾವುದೇ ಒಂದು ಅಪಘಾತ ನಡೆದ ಸಂದರ್ಭದಲ್ಲಿ ತಕ್ಷಣಕ್ಕೆ ಸ್ಪಂದಿಸುವವರೇ ಆಪದ್ಬಾಂಧವರಾಗುತ್ತಾರೆ.

Advertisement

ಮತ್ತು ಇಂತಹ ಆಪದ್ಬಾಂಧವರ ಕಾರಣದಿಂದಲೇ ಅಪಘಾತದ ಸಂದರ್ಭದಲ್ಲಿ ಹಲವಾರು ಜೀವಗಳು ಉಳಿದಿರುವ ಪ್ರಕರಣಗಳು ನಮ್ಮ ಕಣ್ಣಮುಂದಿವೆ.

ಇದೇ ರೀತಿಯಲ್ಲಿ ಮೊನ್ನೆ ರವಿವಾರದಂದು ಬಾರಕೂರಿನ ಸಮೀಪ ಚೌಳಿಕೆರೆಗೆ ಕಾರು ಉರುಳಿದ ಪ್ರಕರಣದಲ್ಲೂ ಹಲವರು ಆಪದ್ಬಾಂಧವರ ಸಕಾಲಿಕ ಪ್ರಯತ್ನದಿಂದ ಒಂದು ಜೀವ ಉಳಿದದೆ.

ಅದರಲ್ಲೂ ಹೂಳು ತುಂಬಿದ್ದ ಆ ಕೆರೆಗೆ ಉರುಳಿ ತಲೆಕೆಳಗಾಗಿದ್ದ ಕಾರಿನಿಂದ ಇಬ್ಬರನ್ನು ಹೊರಗೆಳೆದ ಯುವಕರಿಬ್ಬರ ಶೌರ್ಯ ಇದೀಗ ಸ್ಥಳೀಯವಾಗಿ ಭಾರೀ ಪ್ರಸಂಶೆಗೆ ಪಾತ್ರವಾಗುತ್ತಿದೆ.

ಬಾರ್ಕೂರಿನವರೇ ಆಗಿರುವ ಪ್ರವೀಣ್ ಪೂಜಾರಿ ಹಾಗೂ ಪ್ರದೀಪ್ ದೇವಾಡಿಗ ಎಂಬ ಇಬ್ಬರು ಯುವಕರೇ ಸಕಾಲಿಕ ಸಮಯಪ್ರಜ್ಞೆ ಮೆರೆದು ಅಮೂಲ್ಯ ಜೀವದ ಉಳಿವಿಗೆ ಕಾರಣರಾದವರು.

Advertisement

ಇದನ್ನೂ ಓದಿ: ಬಾರಕೂರು ಚೌಳಿಕೆರೆಗೆ ಬಿದ್ದ ಕಾರು ಓರ್ವ ಸಾವು, ಇನ್ನೋರ್ವ ಮಹಿಳೆ ಗಂಭೀರ

ಏನಿದು ಘಟನೆ:
ಜೂನ್ 21ರ ರವಿವಾರದಂದು ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಇಲ್ಲಿನ ಮುಖ್ಯ ರಸ್ತೆಯಲ್ಲಿ ಕಡಿದಾದ ತಿರುವಿನಂದ ಕೂಡಿರುವ ಜಾಗದಲ್ಲಿ ಅಪಾಯಕಾರಿ ಚೌಳಿಕೆರೆಗೆ ಉರುಳಿ ಬಿದ್ದಿತ್ತು. ಈ ಕಾರಿನಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರು.

ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಕೆರೆಗೆ ಉರುಳಿದ ತಕ್ಷಣವೇ ದೊಡ್ಡದಾದ ಶಬ್ದ ಉಂಟಾಗಿದೆ. ಕೂಡಲೇ ಅಲ್ಲಿದ್ದ ಕೆಲವರು ಘಟನಾ ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ. ಈ ಸಂದರ್ಭದಲ್ಲಿ ನೀರಿಗೆ ಉರುಳಿದ್ದ ಕಾರು ತಲೆಕೆಳಗಾಗಿ ಅರ್ಧ ಮುಳುಗಿದ ಸ್ಥಿತಿಯಲ್ಲಿತ್ತು.

ತಕ್ಷಣವೇ ಅಪಾಯವನ್ನು ಲೆಕ್ಕಿಸದೇ ಕೆರೆಗೆ ಧುಮುಕಿದ ಪ್ರವೀಣ್ ಹಾಗೂ ಪ್ರದೀಪ್ ಕಾರಿನ ಡೋರನ್ನು ಒಡೆಯುವ ಸಾಹಸವನ್ನು ಮಾಡಿದ್ದಾರೆ.

ಮಾತ್ರವಲ್ಲದೇ ಅದರ ಒಳಗಿದ್ದವರನ್ನು ಹೊರಗೆಳೆಯುವ ಸಾಹಸಕ್ಕೂ ಕೈ ಹಾಕಿದ್ದಾರೆ. ನೀರು ಕುಡಿದು ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಯುವತಿಯನ್ನು ಹೊರಗೆಳೆದ ಈ ಇಬ್ಬರು ಯುವಕರು ಆಕೆಯನ್ನು ಇನ್ನೊಬ್ಬ ಯುವಕನ ಮೂಲಕ ಕೆರೆಯ ದಡಕ್ಕೆ ಸಾಗಿಸಿದ್ದಾರೆ.

ಅಲ್ಲಿ ಈ ಯುವತಿಗೆ ನಮನಾ ಎಂಬ ವಿದ್ಯಾರ್ಥಿನಿ ಸಹಿತ ಉಳಿದವರು ಪ್ರಥಮ ಚಿಕಿತ್ಸೆ ಮಾಡಿ ಆಕೆಯ ಹೊಟ್ಟೆಯಲ್ಲಿದ್ದ ನೀರನ್ನು ಹೊರ ಹಾಕಿ, ಮೈಯನ್ನು ಬೆಚ್ಚಗಾಗಿಸುವ ಮೂಲಕ ಆಕೆಯ ಜೀವವನ್ನು ಉಳಿಸುವ ಪ್ರಾಥಮಿಕ ಕೆಲಸವನ್ನು ಮಾಡಿದ್ದಾರೆ.

ಇದನ್ನೂ ಓದಿ: ಯುವತಿಗೆ ಬಾಲಕಿಯಿಂದ ಜೀವದಾನ

ಬಳಿಕ ಕಾರಿನಲ್ಲಿದ್ದ ವಕ್ವಾಡಿಯ ಉದ್ಯಮಿ ಸಂತೋಷ್ ಶೆಟ್ಟಿ ಅವರನ್ನೂ ಸಹ ಈ ಯುವಕರು ಕಷ್ಟಪಟ್ಟು ಕಾರಿನಿಂದ ಹೊರಗೆಳೆದರಾದರೂ ಸಂತೋಷ್ ಅವರು ಆಗಲೇ ತೀವ್ರ ಅಸ್ವಸ್ಥಗೊಂಡಿದ್ದರು ಮತ್ತು ಅವರನ್ನು ಉಳಿಸಿಕೊಳ್ಳುವ ಪ್ರಯತ್ನಗಳು ಫಲನೀಡಿಲ್ಲ.

ಪ್ರವೀಣ್ ಹಾಗೂ ಪ್ರದೀಪ್ ಅವರು ಅಪಾಯವನ್ನೂ ಲೆಕ್ಕಿಸದೇ ಮೇಲಕ್ಕೆತ್ತಿದ ಯುವತಿಗೆ ಬಳಿಕ ಹತ್ತನೇ ತರಗತಿ ವಿದ್ಯಾರ್ಥಿನಿ ನೀಡಿದ ಪ್ರಥಮ ಚಿಕಿತ್ಸೆಯ ವಿವರ ಮಾಧ್ಯಮಗಳಲ್ಲಿ ಪ್ರಕಟಗೊಂಡು ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಈ ಸಂದರ್ಭದಲ್ಲಿ ನಮನಾ ಅವರಿಗೆ ಅಲ್ಲಿದ್ದ ಇನ್ನೂ ಕೆಲವರು ಪ್ರಥಮ ಚಿಕಿತ್ಸೆಗೆ ಸಹಕಾರ ನೀಡಿದ್ದು ವಿಡಿಯೋದಲ್ಲಿ ದಾಖಲಾಗಿದೆ.

ಆದರೆ ಕೆಸರು ತುಂಬಿದ ಕೆರೆಗೆ ಧುಮುಕಿ ಕಾರಿನಲ್ಲಿದ್ದವರನ್ನು ಸಾಹಸದಿಂದ ಹೊರಗೆಳೆದ ಈ ಇಬ್ಬರು ಯುವಕರ ಕುರಿತಾದ ಮಾಹಿತಿ ಇಂದು ತಡವಾಗಿ ಬೆಳಕಿಗೆ ಬಂದಿದೆ ಮತ್ತು ಈ ಇಬ್ಬರು ಯುವಕರ ಸಮಯಪ್ರಜ್ಞೆ ಹಾಗೂ ಸಾಹಸ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ಲಭಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next