ಹೊಸದಿಲ್ಲಿ : ದಿಲ್ಲಿ ಕಾಂಗ್ರೆಸ್ ಹಾಗೂ ಅದರ ಅಧ್ಯಕ್ಷ ಅಜಯ್ ಮಾಕನ್ ಅವರಿಗೆ ಬಹುದೊಡ್ಡ ಹಿನ್ನಡೆ ಎನ್ನುವ ರೀತಿಯಲ್ಲಿ ದಿಲ್ಲಿ ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ಬರ್ಖಾ ಶುಕ್ಲಾ ಸಿಂಗ್ ಅವರು ಇಂದು ಗುರುವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
‘ಪಕ್ಷದ ಅತ್ಯಂತ ಹಿರಿಯ ನಾಯಕರ ದೃಷ್ಟಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಲು 45ರ ಹರೆಯದ ರಾಹುಲ್ ಮಾನಸಿಕವಾಗಿ ಅನರ್ಹರಾಗಿದ್ದಾರೆ (ಮೆಂಟಲೀ ಅನ್‌ಫಿಟ್)’ ಎಂದು ಬರ್ಖಾ ಆರೋಪಿಸಿದ್ದಾರೆ.
ಇಂದು ಬಿಡುಗಡೆ ಮಾಡಲಾದ ಬಹಿರಂಗ ರಾಜೀನಾಮೆ ಪತ್ರದಲ್ಲಿ ಬರ್ಖಾ ಸಿಂಗ್ ಅವರು “ಮಾಕನ್ ಪಕ್ಷದ ಮಹಿಳಾ ಕಾರ್ಯಕರ್ತರನ್ನು ದುರುಪಯೋಗಿಸುವುದು,ಬೆದರಿಕೆ ಹಾಕುವುದು ಮುಂತಾದ ಅನಪೇಕ್ಷೀತ ಕೃತ್ಯಗಳನ್ನು ಎಸಗುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
ಪಕ್ಷದ ಮಹಿಳಾ ಕಾರ್ಯಕರ್ತರಿಗೆ ನೀಡಲಾಗುತ್ತಿರುವ ಕಿರುಕುಳವನ್ನು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕಡೆಗಣಿಸುತ್ತಿದ್ದಾರೆ ಅಥವಾ ನಿರ್ಲಕ್ಷಿಸುತ್ತಿದ್ದಾರೆ ಎಂದು ಬರ್ಖಾ ಆರೋಪಿಸಿದ್ದಾರೆ.
“ಮಾರ್ಚ್ 28ರ ನವರಾತ್ರಾ ಶುಭದಿನದಂದು ನಾವು ಇತರ ಅನೇಕ ಉಪವಾಸ ವ್ರತಧಾರಿ ಪಕ್ಷದ ಕಾರ್ಯಕರ್ತೆಯರೊಂದಿಗೆ ರಾಹುಲ್ ಗಾಂಧಿಯವರನ್ನು ಕಾಣಲು ಪ್ರಯತ್ನಿಸಿದೆವು. ಆಗ ನಮಗೆ, “ನಿಮ್ಮ ನವರಾತ್ರಾ ವ್ರತದಲ್ಲಿ ರಾಹುಲ್‌ಗೇನೂ ಆಸಕ್ತಿ ಇಲ್ಲ; ನೀವು ಇಲ್ಲಿಂದ ತೊಲಗಬಹುದು’ ಎಂದು ಅತ್ಯಂತ ನಿಷ್ಠುರವಾಗಿ ಅಗೌರವದಿಂದ ಹೇಳಲಾಯಿತು’ ಎಂದು ಬರ್ಖಾ ಸುದ್ದಿಗೋಷ್ಠಿಯಲ್ಲಿ ಹೇಳಿರುವುದನ್ನು ಉಲ್ಲೇಖೀಸಿ ಇಂಡಿಯಾ ಟುಡೇ ವರದಿಮಾಡಿದೆ.
ಇದೇ ಎಪ್ರಿಲ್ 23ರಂದು ಎಂಸಿಡಿ ಚುನಾವಣೆಗಳು ನಡೆಯಲಿದ್ದು ಅದಕ್ಕೆ ಮುನ್ನವೇ ಮೊನ್ನೆ ಮಂಗಳವಾರ ದಿಲ್ಲಿ ಕಾಂಗ್ರೆಸ್ ಮುಖ್ಯಸ್ಥ ಅರವೀಂದರ್ ಸಿಂಗ್ ಲವ್‌ಲೀ ಮತ್ತು ಮಾಜಿ ಯೂತ್ ಕಾಂಗ್ರೆಸ್ ನಾಯಕ ಅಮಿತ್ ಮಲಿಕ್ ಅವರು ಪಕ್ಷವನ್ನು ತೊರೆದು ಬಿಜೆಪಿಗೆ ಸೇರಿರುವುದು ಹಾಗೂ ಇದೀಗ ಡಿಸಿಡಬ್ಲ್ಯು ಮುಖ್ಯಸ್ಥೆ ಬರ್ಖಾ ಸಿಂಗ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದು ಕಾಂಗ್ರೆಸ್‌ಗೆ ಬಹಳ ದೊಡ್ಡ ಆಘಾತಕಾರಿ ಹಿನ್ನಡೆ ಎಂದು ತಿಳಿಯಲಾಗಿದೆ.