Advertisement
ಆಗುಂಬೆ ಎಂದರೆ ಸಾಕು ಸಾಲು – ಸಾಲು ಜಲಪಾತಗಳು ನಮ್ಮನ್ನು ಕೈ ಬೀಸಿ ಕರೆಯುತ್ತವೆ. ಬರ್ಕಣಾ, ಒನಕಿ ಅಬ್ಬಿ, ಜೋಗಿ ಗುಂಡಿ, ಕುಂಚಿಕಲ್ ಹೀಗೆ ಮುಂದುವರಿಯುತ್ತದೆ. ಅದರಲ್ಲೂ ಡಾ| ರಾಜಕುಮಾರ್ ಅಭಿನಯದ ಆಕಸ್ಮಿಕ ಸಿನೆಮಾ ಚಿತ್ರೀಕರಣಗೊಂಡ ಬರ್ಕಣಾ ಜಲಪಾತವಂತೂ ನೋಡುಗರ ಕಣ್ಮನ ಸೆಳೆಯುತ್ತದೆ. ಮಳೆಗಾಲದಲ್ಲಂತೂ ಬಂಡೆಗಳ ಮೇಲಿನಿಂದ ಜುಳು – ಜುಳು ನಿನಾದಗೈಯ್ಯುತ್ತಾ, ಧುಮ್ಮಿಕ್ಕೋ ಜಲಧಾರೆಗಳು ಕ್ಷೀರಧಾರೆಯಂತೆ ಭಾಸವಾಗುತ್ತವೆ. ಆಗಾಗ ಬರುವ ಮಳೆಗೆ ಬೆಟ್ಟಗಳ ಸಾಲು ಹಸಿರೊದ್ದು ಝೇಂಕರಿಸುತ್ತಿದ್ದರೆ, ಮಂಜಿನ ಕಣ್ಣಮುಚ್ಚಾಲೆ ಆಟವು ನಿಸರ್ಗದ ನೈಜ ಸಂಪತ್ತನ್ನು ಪ್ರವಾಸಿಗರಿಗೆ ಉಣಬಡಿಸುತ್ತದೆ.
Related Articles
Advertisement
ನರಸಿಂಹ ಪರ್ವತದಲ್ಲಿ ಹುಟ್ಟಿ, ಆಗುಂಬೆಯನ್ನು ದಾಟಿಕೊಂಡು, ಸೋಮೇಶ್ವರದಲ್ಲಿ ಹರಿದು, ಉಡುಪಿಯಲ್ಲಿ ಸಮುದ್ರ ಸೇರುವ ಸೀತಾ ನದಿಯು ಈ ಬರ್ಕಣಾ ಜಲಪಾತವನ್ನು ದಾಟಿಯೇ ಮುನ್ನಡೆಯುವುದು ವಿಶೇಷ.
ಈ ಬರ್ಕಣಾ ಜಲಪಾತವು ಕುದುರೆಮುಖ ವನ್ಯಜೀವಿ ವಿಭಾಗ, ಸೋಮೇಶ್ವರ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುವುದರಿಂದ ಅರಣ್ಯ ಇಲಾಖೆಯವರ ಅನುಮತಿ ತೆಗೆದುಕೊಂಡೇ ಹೋಗುವುದು ಸೂಕ್ತ.
ಯಾವಾಗ ಸೂಕ್ತ?:
ಇಲ್ಲಿಗೆ ವರ್ಷದ ಎಲ್ಲ ದಿನಗಳಲ್ಲೂ ಭೇಟಿ ನೀಡಬಹುದಾದರೂ, ಸಪ್ಟೆಂಬರ್, ಡಿಸೆಂಬರ್, ಜನವರಿ ತಿಂಗಳಲ್ಲಿ ಇಲ್ಲಿಗೆ ಬಂದಲ್ಲಿ ಅತ್ಯದ್ಭುತ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು. ಬೇಸಿಗೆಯಲ್ಲಿ ಜಲಪಾತದಲ್ಲಿ ಅಷ್ಟೇನು ನೀರಿನ ಹರಿವು ಇರುವುದಿಲ್ಲ. ಅಷ್ಟೊಂದು ಆಕರ್ಷಕವಾಗಿಯೂ ಇರುವುದಿಲ್ಲ.
ದಾರಿ ಹೇಗೆ?:
ಬರ್ಕಣಾ ಜಲಪಾತವು ಆಗುಂಬೆಯಿಂದ 8 ಕಿ.ಮೀ. ದೂರದಲ್ಲಿದ್ದು, ಅಲ್ಲಿಂದ ಶೃಂಗೇರಿಗೆ ಹೋಗುವ ಮಾರ್ಗದ ಕಡೆಗೆ ಬರುವಾಗ ಮಲ್ಲಂದೂರು ಗ್ರಾಮದ ಕಡೆಗೆ ಸಂಚರಿಸುವ ರಸ್ತೆ ಸಿಗುತ್ತದೆ. ಆ ಮಾರ್ಗದಲ್ಲಿ ಸುಮಾರು 3 ಕಿ.ಮೀ. ಪರ್ವತ ಹಾದಿಗಳ ಮಧ್ಯೆ, ಚಾರಣ ಮಾಡಿಕೊಂಡು ಬರ್ಕಣಾ ಜಲಪಾತವನ್ನು ತಲುಪಬಹುದು. ಈ ಜಲಪಾತವನ್ನು ತಲುಪಲು ಸುಮಾರು 5 ಕಿ.ಮೀ.ವರೆಗೆ ದಾರಿಯಿದ್ದು, ಅಲ್ಲಿಂದ ಮುಂದಕ್ಕೆ 3 ಕಿ.ಮೀ. ಕಾಲ್ನಡಿಗೆಯಿಂದಲೇ ಸಂಚರಿಸಬೇಕು. ಇನ್ನು ಉಡುಪಿಯಿಂದ 60 ಕಿ.ಮೀ., ಮಂಗಳೂರಿನಿಂದ 105 ಕಿ.ಮೀ., ಶಿವಮೊಗ್ಗದಿಂದ 100 ಕಿ.ಮೀ., ತೀರ್ಥಹಳ್ಳಿಯಿಂದ 38 ಕಿ.ಮೀ., ಬೆಂಗಳೂರಿನಿಂದ 352 ಕಿ.ಮೀ. ದೂರದಲ್ಲಿದೆ. ಟ್ರೆಕ್ಕಿಂಗ್ ಮಾಡುವವರಿಗೆ ಇದು ಒಳ್ಳೆಯ ಪ್ರವಾಸಿ ತಾಣ.
ಸಿಂಚನಾ ಎಂ.ಆರ್.
ಆಗುಂಬೆ