Advertisement
ಮಾರ್ಸೆಲ್ಲೋ ಸಿನ್ಷಿಯೋ ಅವರ ಈ ಕೃತಿ ಸಮಕಾಲೀನ ಪ್ಯಾಲೆಸ್ತೀನಿ ಬದುಕನ್ನು ಅದರ ಸಾಹಿತ್ಯಕ- ಸಾಂಸ್ಕೃತಿಕ ಚಕ್ಷುಗಳ ಮೂಲಕ ನೋಡುವಂತೆ ಮಾಡುತ್ತದೆ. 1999ರಲ್ಲಿ ಸಿನ್ಷಿಯೋ ಪ್ಯಾಲೆಸ್ತೀನಿಗೆ ಭೇಟಿ ಕೊಡುತ್ತಾರೆ. ಅಲ್ಲಿನ ಕಥನಗಳೆಂದರೆ ಅಂತ್ಯವಿಲ್ಲದ ಸಂಘರ್ಷಗಳನ್ನು ನಿರೂಪಿಸುವಂಥವು. ಸಿನ್ಷಿಯೋ ಅಲ್ಲಿನ ಲೇಖಕರು, ಪುಸ್ತಕಗಳು ಮತ್ತು ಸಾಹಿತ್ಯಗಳ ಮೂಲಕ ಇನ್ನಷ್ಟು ಹೆಚ್ಚು ಸಂಕೀರ್ಣವಾದ ಕಥೆಯನ್ನು ಅನಾವರಣಗೊಳಿಸುತ್ತಾರೆ. ರಾಜಕೀಯ ಸಂಕಥನದ ಸ್ವರೂಪವನ್ನು ಬಳಸಿ ಆಧುನಿಕ ಪ್ಯಾಲೆಸ್ತೀನಿಯರ ದೃಷ್ಟಿಯಲ್ಲಿ ಸಾಹಿತ್ಯವೆಂದರೇನು ಎಂಬುದನ್ನು ಶೋಧಿಸುತ್ತ, ಒಂದು ಶ್ರೀಮಂತ ಸಾಂಸ್ಕೃತಿಕ ಬದುಕನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಲು ಅನವರತ ಶ್ರಮಿಸುವ ಅವರ ಸಂಘರ್ಷಮಯ ಬದುಕನ್ನು ಚಿತ್ರಿಸುತ್ತಾರೆ.
Related Articles
Advertisement
ಇದನ್ನೂ ಓದಿ : ಸಂವೇದನೆಗೆ ಧ್ವನಿಕೊಟ್ಟ ‘ಮನಸು ಅಭಿಸಾರಿಕೆ’
ಜೆರುಸಲೇಮಿನಲ್ಲಿ ಸಿನ್ಷಿಯೋ ಖಲೀದಿ ಕುಟುಂಬದವರು ೧೨ನೆಯ ಶತಮಾನದಲ್ಲಿ ಆರಂಭಿಸಿದ್ದ ಒಂದು ಅತಿ ಪುರಾತನ ಗ್ರಂಥಾಲಯಕ್ಕೆ ಭೇಟಿ ನೀಡುತ್ತಾರೆ. ಯುದ್ಧದಲ್ಲಿ ಹಾನಿಗೊಳಗಾದ ಕಟ್ಟಡದಿಂದ ಅಳಿದುಳಿದ ಪುಸ್ತಕಗಳನ್ನು ಒಟ್ಟು ಮಾಡಿ ಕುಟುಂಬದ ಸದಸ್ಯರಲ್ಲೊಬ್ಬರು ಜೆರುಸಲೇಮಿನ ಒಂದು ಕಟ್ಟಡದಲ್ಲಿ ಆ ಸಂಗ್ರಹವನ್ನಿಟ್ಟಿರುತ್ತಾರೆ .ಇಸ್ರೆಲ್ ಸರಕಾರವು ಪ್ಯಾಲೆಸ್ತೀನಿಯರ ಮೇಲೆ ಹೇರಿದ ನಿಷೇಧಗಳ ಹೊರತಾಗಿಯೂ ಆ ಗ್ರಂಥಾಲಯ ವಿಶೇಷವೆನ್ನುತ್ತಾರೆ ಸಿನ್ಷಿಯೋ. ಪ್ರವಾಸದ ಕೊನೆಯಲ್ಲಿ ಗಾಜಾದಲ್ಲಿ ಅವರು ಭೇಟಿಯಾಗುವ ಹಸಿರುಡುಗೆಯ ಪುಟ್ಟ ಹುಡುಗಿ ಮರಾಮ್ ಹಾನಿಗೊಳಗಾದ ಮಸೀದಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಖುರಾನಿನ ಹಾಳೆಗಳನ್ನು ಒಟ್ಟು ಮಾಡಿಡುವ ದೃಶ್ಯವು ನೆಲಸಮವಾದ ಮನೆಗಳ ಅವಶೇಷಗಳಿಂದ ಪುಸ್ತಕಗಳನ್ನು ಹೆಕ್ಕಿ ತೆಗೆದು ಜತನವಾಗಿಟ್ಟ ಪ್ಯಾಲೆಸ್ತೀನಿ ಬರಹಗಾರರನ್ನು ಮತ್ತು ಅವರ ಪುಸ್ತಕಗಳನ್ನು ಹುಡುಕಿಕೊಂಡು ಹೋಗಲು ಹೇಗೆ ಸ್ಫೂರ್ತಿಯಾಯಿತು ಅನ್ನುವುದನ್ನು ಹೇಳಿ ಓದುಗರನ್ನು ಭಾವುಕಗೊಳಿಸುತ್ತಾರೆ.
ಜೆರುಸಲೇಮಿನಿಂದ ಸಿನ್ಷಿಯೋ ಇಸ್ರೇಲಿಗೆ ಹೋಗುತ್ತಾರೆ. ಓರ್ವ ನಗರವಾಸಿ ಪ್ಯಾಲೆಸ್ತೀನಿ ಗೆ ತನ್ನ ಮೂಲಸ್ಥಳದ ವಾಸ್ತುಶಿಲ್ಪ, ಚೆಕ್ ಪಾಯಿಂಟುಗಳು, ವಸಾಹತುಗಳು, ರಸ್ತೆ ತಡೆಗಳು, ಗುಡ್ಡ ಬೆಟ್ಟ ಹಳ್ಳಿಗಳಿಂದ ದೂರವಿದ್ದು ಇಸ್ರೇಲಿನ ಅಲ್ಪಸಂಖ್ಯಾತ ಪ್ರಜೆಯಾಗಿರುವುದೆಂದರೆ ಹೇಗನ್ನಿಸಬಹುದು ಎಂದು ಅಚ್ಚರಿ ಪಡುತ್ತಾರೆ. ಇಸ್ರೇಲಿ ಲೇಖಕರಿಗಿರುವ ಯಾವ ಸ್ವಾತಂತ್ರ್ಯವೂ ಪ್ಯಾಲೆಸ್ತೀನಿಯರಿಗಿಲ್ಲ. ಸರಕಾರದಿಂದ ಯಾವುದೇ ಅನುದಾನಗಳಿಲ್ಲ. ಆದರೆ ಅವರು ತಮ್ಮ ಸ್ವಾಭಿಮಾನ ಬಿಟ್ಟು ತಾವು ಇಸ್ರೇಲಿಗಳು ಎಂದು ಒಪ್ಪಿಕೊಂಡರೆ ಎಲ್ಲವೂ ಇದೆ. ಇದು ಅವರ ಪರಿಸ್ಥಿತಿಯ ವ್ಯಂಗ್ಯ.
ಪ್ರಸಕ್ತ ಪ್ಯಾಲೆಸ್ತೀನಿ ಸಾಹಿತ್ಯ ಬದುಕಿನ ವಸ್ತುನಿಷ್ಠ ಚಿತ್ರಣವನ್ನು ನೀಡುವಲ್ಲಿ ಸಿನ್ಷಿಯೋ ಅವರ ಈ ಯಾತ್ರೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಎರಡು ಜನಾಂಗಗಳ ಘರ್ಷಣೆಯ ವಿಚಾರದಲ್ಲಿ ಅವರು ಯಾವುದೇ ಪಕ್ಷವನ್ನು ವಹಿಸಿಕೊಂಡು ಮಾತನಾಡುವುದಿಲ್ಲ. ಆತ್ಮಹತ್ಯಾ ಬಾಂಬರುಗಳನ್ನೂ ಆಕ್ರಮಣಕಾರಿ ಯಹೂದಿಗಳನ್ನೂ ಒಂದೇ ರೀತಿಯ ಉಗ್ರಗಾಮಿಗಳೆಂದು ಅವರು ಕರೆಯುತ್ತಾರೆ. ಅವರು ವಿಸ್ತಾರವಾಗಿ ನೀಡುವ ಪ್ಯಾಲೆಸ್ತೀನಿ ಬದುಕಿನ ವಿವರಣೆಗಳೇ ಅವರ ಬದುಕನ್ನು ಅರ್ಥ ಮಾಡಿಕೊಳ್ಳಲು ಸಾಕು. ಆಕ್ರಮಣವಾಗದೇ ಇರುವ ಕಾಲದಲ್ಲಿ ಗಾಜಾದಂತಹ ನಗರಗಳಲ್ಲಿ ಬದುಕು ಯಥಾಸ್ಥಿಯಲ್ಲಿದ್ದು ಅಸ್ತಿತ್ವಕ್ಕಾಗಿ ನಡೆಸುವ ಹೋರಾಟವನ್ನು ಬಿಟ್ಟರೆ ವಿಶೇಷವಾಗಿ ಏನೂ ಸಂಭವಿಸುವುದಿಲ್ಲ.
ಕೆಲವರಿಗೆ ಸಿನ್ಷಿಯೋ ಉಗ್ರಗಾಮಿಗಳ ಪರವಾಗಿದ್ದಾರೇನೋ ಅನ್ನಿಸಬಹುದು. ಅವರ ಮಾತುಗಳ ಒಳಧ್ವನಿ ಕೆಲವರಿಗೆ ಅರ್ಥವಾಗದೇ ಇರಬಹುದು. ಆದರೆ ಸೂಕ್ಷ್ಮವಾಗಿ ನೋಡಿದರೆ ಅವರಲ್ಲಿರುವ ಮಾನವೀಯ ಕಾಳಜಿ ಮತ್ತು ಮನುಷ್ಯರ ಬಗೆಗಿನ ಸಹಾನುಭೂತಿ ಗೋಚರವಾಗದೇ ಇರದು.
ಇದನ್ನೂ ಓದಿ : ಅದು ಬಿಸಿಲು ಚುಚ್ಚುವ ‘ನೆರಳು ಮರಗಳಿಲ್ಲದ ದಾರಿ’
ಕೃತಿಯೊಳಗಿನ ವಿಚಾರಗಳು ಒಂದು ಭಿನ್ನ ಸಂಸ್ಕೃತಿಗೆ ಮತ್ತು ಭಿನ್ನ ಪರಿಸ್ಥಿತಿಯನ್ನೆದುರಿಸುತ್ತಿರುವವರ ದುರಂತಮಯ ಬದುಕಿಗೆ ಒಳಪಟ್ಟಿರುವುದರಿಂದ-ಮುಖ್ಯವಾಗಿ ವ್ಯಕ್ತಿಗಳ ಮತ್ತು ಸ್ಥಳಗಳ ಹೆಸರುಗಳನ್ನು ನೆನಪಿಟ್ಟುಕೊಳ್ಳುವ ಸಮಸ್ಯೆ ಮತ್ತು ತಮ್ಮದಾಗಿರುವ ಎಲ್ಲವನ್ನೂ ಕಳೆದುಕೊಂಡು ಅನಾಥ ಪ್ರಜ್ಞೆಯನ್ನು ಅನುಭವಿಸುತ್ತಿರುವವರ ಕೊರಗುಗಳಿಂದ ತುಂಬಿರುವುದರಿಂದ-ಇದರ ಅನುವಾದವೂ ಒಂದು ಸವಾಲು. ಓದುವುದೂ ಕಷ್ಟ. ಇಲ್ಲಿ ಅನೇಕ ಕವಿತೆಗಳನ್ನು ಅನುವಾದಕರು ಅವುಗಳೊಳಗಿನ ಭಾವುಕತೆಯ ಸಾರಸತ್ವವನ್ನು ತಮ್ಮದಾಗಿಸಿಕೊಂಡು ಬಹಳ ಸುಂದರವಾಗಿ ಮನಮುಟ್ಟುವಂತೆ ಅನುವಾದಿಸಿದ್ದಾರೆ. ಇಂಥ ಒಂದು ವಿಶಿಷ್ಟ ಕೃತಿಯನ್ನು ಅನುವಾದಕ್ಕಾಗಿ ಆಯ್ದುಕೊಂಡ ಆಕರ್ಷ ಅವರ ಅಭಿರುಚಿಯೂ ವಿಶಿಷ್ಟವಾದದ್ದೇ. ಇಂಥ ಅಮೂಲ್ಯ ಕೃತಿಯನ್ನು ಕನ್ನಡಕ್ಕೆ ನೀಡಿದ ಆಕರ್ಷ್ ರಮೇಶ್ ಕಮಲ ಅಭಿನಂದನಾರ್ಹರು.