ದೇಹತೂಕ ಇಳಿಸಿಕೊಳ್ಳುವುದಕ್ಕಾಗಿ ನಡೆಸಲಾಗುವ ಶಸ್ತ್ರಚಿಕಿತ್ರೆಗಳನ್ನು ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಗಳೆನ್ನುತ್ತಾರೆ. ಅಪಾಯಕಾರಿಯಾದ ಬೊಜ್ಜು ಇರುವ ಸಂದರ್ಭದಲ್ಲಿ ಇದನ್ನು ನಡೆಸಲಾಗುತ್ತದೆ. ದೇಹದಲ್ಲಿ ಅತಿಯಾದ ಕೊಬ್ಬು ಸಂಗ್ರಹವಾಗುವ ವೈದ್ಯಕೀಯ ಸ್ಥಿತಿ ಬೊಜ್ಜು.
ಇದು ನಮ್ಮ ಸುತ್ತಮುತ್ತ ಸಾಮಾನ್ಯವಾಗಿ ಕಂಡುಬರುವ ಸ್ಥಿತಿ. ಆದರೆ ವ್ಯಕ್ತಿಯೊಬ್ಬ ಬೊಜ್ಜು ಹೊಂದಿದ್ದಾನೆಯೇ ಇಲ್ಲವೇ ಎಂಬುದನ್ನು ಲೆಕ್ಕ ಹಾಕಲು ಅವನ ಬಿಎಂಐ ಲೆಕ್ಕಾಚಾರ ಮಾಡಬೇಕಾಗುತ್ತದೆ. ಬಿಎಂಐ ಎಂದರೆ ಬಾಡಿ ಮಾಸ್ ಇಂಡೆಕ್ಸ್. ಕಿಲೊಗ್ರಾಂಗಳಲ್ಲಿ ದೇಹತೂಕವನ್ನು ಮೀಟರ್ ಗಳಲ್ಲಿ ಎತ್ತರದ ವರ್ಗದಿಂದ ಭಾಗಿಸಿದಾಗ ಬಿಎಂಐ ಸಿಗುತ್ತದೆ. ಈ ಮೌಲ್ಯವು 40 ಕಿ.ಗ್ರಾಂ/ಎಂ2 ಅಥವಾ 35 ಕಿ.ಗ್ರಾಂ/ ಎಂ2ಗಿಂತ ಹೆಚ್ಚಿದ್ದು, ವ್ಯಕ್ತಿಗೆ ಬೊಜ್ಜಿಗೆ ಸಂಬಂಧಿಸಿದ ಸಹ ಅನಾರೋಗ್ಯಗಳಿದ್ದಲ್ಲಿ ಅಂಥ ವ್ಯಕ್ತಿಯು ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಯೋಗ್ಯನೆನಿಸಿಕೊಳ್ಳುತ್ತಾನೆ. ಬೊಜ್ಜಿಗೆ ಸಂಬಂಧಿಸಿದ ಅನೇಕ ಸಹ ಅನಾರೋಗ್ಯಗಳಿವೆ: ಅಧಿಕ ರಕ್ತದೊತ್ತಡ, ಮೆಯೊಕಾರ್ಡಿಯಲ್ ಇನ್‌ಫ್ರಾಕ್ಷನ್, ಮಧುಮೇಹ (ಇನ್ಸುಲಿನ್ ಪ್ರತಿರೋಧಕ), ಹೈಪೊಥೈರಾಯಿಸಂ, ಪಿಸಿಒಎಸ್, ಸಂಧಿನೋವುಗಳು ಮತ್ತು ಆಥ್ರೆಟಿಸ್, ಒಬ್ ಸ್ಟ್ರಕ್ಟಿವ್ ಸ್ಲಿಪ್ ಅಪ್ನಿಯಾ ಸಿಂಡ್ರೋಮ್, ಗೆರ್ಡ್ ಮತ್ತು ಇವೆಲ್ಲವುಗಳ ಜತೆಗೆ ಬೊಜ್ಜು ಸಾಮಾಜಿಕ ತಾರತಮ್ಯ, ತೆಗಳಿಕೆ, ಹೀಯಾಳಿಕೆಗೆ ಕೂಡ ಕಾರಣವಾಗಬಹುದಾಗಿದ್ದು, ಖನ್ನತೆಗೆ ದಾರಿ ಮಾಡಿಕೊಡಬಲ್ಲುದು. ಹೀಗಾಗಿ ದೇಹತೂಕವನ್ನು ಪಥ್ಯಾಹಾರ ಅಥವಾ ವ್ಯಾಯಾಮದಿಂದ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗದೆ ಇದ್ದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಬೇಕಾಗುತ್ತದೆ.
ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ಬಹು ವಿಭಾಗೀಯ ತಜ್ಞ ವೈದ್ಯರ ತಂಡದ ಅಗತ್ಯವಿರುತ್ತದೆ. ಇದರಲ್ಲಿ ಶಸ್ತ್ರಚಿಕಿತ್ಸಾ ತಜ್ಞರು, ಪೌಷ್ಟಿಕಾಂಶ ತಜ್ಞರು, ಅರಿವಳಿಕೆ ಶಾಸ್ತ್ರಜ್ಞರು, ಮನೋಚಿಕಿತ್ಸಕರು ಮತ್ತು ಪರಿಣತ ವೈದ್ಯರಿರಬೇಕಾಗುತ್ತದೆ. ಶಸ್ತ್ರಚಿಕಿತ್ಸೆಗೆ ಮುನ್ನ ರೋಗಿಯನ್ನು ಆಮೂಲಾಗ್ರ ಶಸ್ತ್ರಚಿಕಿತ್ಸಾಪೂರ್ವ ವಿಶ್ಲೇಷಣೆ ಮತ್ತು ಆಪ್ತಸಮಾಲೋಚನೆಗೆ ಒಳಪಡಿಸಬೇಕಾಗುತ್ತದೆ. ಶಸ್ತ್ರಚಿಕಿತ್ಸಾಪೂರ್ವ, ಶಸ್ತ್ರಚಿಕಿತ್ಸೆಯ ಸಂದರ್ಭದ ಮತ್ತು ಶಸ್ತ್ರಚಿಕಿತ್ಸೆಯ ಬಳಿಕದ ಆರೈಕೆಯ ಬಗ್ಗೆ ರೋಗಿ ಮತ್ತು ಅವರ ಕುಟುಂಬದವರಿಗೆ ಸಮಗ್ರ ಅರಿವು ನೀಡಬೇಕಾಗುತ್ತದೆ. ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಯಲ್ಲಿ ಹಲವು ವಿಧಗಳಿವೆ. ಲ್ಯಾಪರೊಸ್ಕೊಪಿಕ್ ಸ್ಲೀವ್ ಗ್ಯಾಸ್ಟ್ರೆಕ್ಟೊಮಿ (ಸ್ಲೀವ್ ಆಪರೇಶನ್), ಮಿನಿ ಗ್ಯಾಸ್ಟ್ರಿಕ್ ಬೈಪಾಸ್, ಆರ್‌ವೈ ಗ್ಯಾಸ್ಟ್ರಿಗ್ ಬೈಪಾಸ್, ಬ್ಯಾಂಡೆಡ್ ಸ್ಲಿವ್ ಗ್ಯಾಸ್ಟ್ರೆಕ್ಟೊಮಿ, ಬಿಲಿಯೊಪ್ಯಾನ್‌ಕ್ರಿಯಾಟಿಕ್ ಡೈವರ್ಶನ್ ಹೀಗೆ ಹಲವು ವಿಧಗಳು. ಈ ಶಸ್ತ್ರಚಿಕಿತ್ಸೆಗಳು ಒಂದೋ ಸೇವಿಸುವ ಆಹಾರದ ಪ್ರಮಾಣವನ್ನು ತಗ್ಗಿಸುತ್ತವೆ ಅಥವಾ ಜೀರ್ಣಾಂಗಗಳ ಸತ್ವ ಹೀರುವಿಕೆಯ ಸಾಮರ್ಥ್ಯವನ್ನು ತಗ್ಗಿಸುತ್ತವೆ.
ಇದೊಂದು ಸಂಪೂರ್ಣ ಸುರಕ್ಷಿತ ಶಸ್ತ್ರಚಿಕಿತ್ಸೆಯಾಗಿದ್ದು, ಇದಾದ ಬಳಿಕ ಕ್ರಮೇಣ ದೇಹತೂಕ ಕಡಿಮೆಯಾಗುತ್ತದೆ ಹಾಗೂ ಬೊಜ್ಜಿನಿಂದಾಗಿ ಉಂಟಾಗಿದ್ದ ಅಧಿಕ ರಕ್ತದೊತ್ತಡ ಇಳಿಕೆ, ಮಧುಮೇಹ ಗುಣವಾಗುವುದು, ಸ್ಲಿಪ್ ಅಪ್ನಿಯಾ ಗುಣವಾಗುವುದು, ಸೊಂಟದ ಸುತ್ತ ಸಂಗ್ರಹವಾದ ಬೊಜ್ಜು ಕಡಿಮೆಯಾಗುವುದು ಇತ್ಯಾದಿ ಕಾರ್ಡಿಯೊವ್ಯಾಸ್ಕಾಲಾರ್ ಮತ್ತು ಇತರ ತೊಂದರೆಗಳು ಮಾಯವಾಗುತ್ತವೆ. ಮಧುಮೇಹಿಗಳಲ್ಲಿ ಸಕ್ಕರೆಯಂಶವನ್ನು ನಿಯಂತ್ರಿಸುವುದಕ್ಕೂ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಯು ಸಹಾಯ ಮಾಡುತ್ತದೆ. ಈ ಶಸ್ತ್ರಚಿಕಿತ್ಸೆಯನ್ನು ಲ್ಯಾಪರೊಸ್ಕೊಪಿ ವಿಧಾನದ ಮೂಲಕ ನಡೆಸಲಾಗುತ್ತಿದ್ದು, ಸಂಪೂರ್ಣ ಸುರಕ್ಷಿತವಾಗಿರುತ್ತವೆ. ಶಸ್ತ್ರಚಿಕಿತ್ಸೆಯ ಬಳಿಕ ರೋಗಿಯು ಅನುಸರಿಸಬೇಕಾದ ಆಹಾರ ಶೈಲಿ ಬದಲಾವಣೆಗಳ ಬಗ್ಗೆ ಆತನಿಗೆ ಮಾಹಿತಿ ನೀಡಲಾಗುತ್ತದೆ.
ಶಸ್ತ್ರಚಿಕಿತ್ಸೆಯ 3-4 ದಿನಗಳ ಬಳಿಕ ರೋಗಿಯು ಸಾಮಾನ್ಯವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಾನೆ. ಶಸ್ತ್ರಚಿಕಿತ್ಸೆಯ ಬಳಿಕ ರೋಗಿ ಎಷ್ಟು ದೇಹತೂಕವನ್ನು ಕಳೆದುಕೊಳ್ಳುತ್ತಾನೆ ಎಂಬುದನ್ನು ದಾಖಲಿಸಲಾಗುತ್ತದೆ. ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕವೂ ಕಾಲಕ್ರಮೇಣ ಕೆಲವು ವ್ಯಕ್ತಿಗಳು ಮರಳಿ ಬೊಜ್ಜು ಹೊಂದುತ್ತಾರೆ. ಕೆಲವರು ಆರೋಗ್ಯಕರ ಆಹಾರಶೈಲಿಯನ್ನು ಅನುಸರಿಸುವ ಬದಲಾಗಿ ಅಧಿಕ ಕ್ಯಾಲೊರಿಯ ಅಥವಾ ಅಧಿಕ ಕೊಬ್ಬು ಹೊಂದಿರುವ ಆಹಾರಗಳನ್ನು ಹೆಚ್ಚು ಸೇವಿಸುತ್ತಾರೆ, ಪದೇಪದೆ ಸೇವಿಸುತ್ತಾರೆ. ಕೆಲವರು ಐಸ್‌ಕ್ರೀಂ ಅಥವಾ ಮಿಲ್ಕ್ಶೇಕ್‌ಗಳಂತಹ ಆಹಾರಗಳನ್ನೇ ಅವಲಂಬಿಸಿರುತ್ತಾರೆ. ದೇಹವೇ ಸ್ವತಃ ಬದಲಾವಣೆಗೆ ಒಳಗಾಗಿ ತೂಕ ಗಳಿಸಿಕೊಳ್ಳಬಹುದು. ಜೀರ್ಣಾಂಗವ್ಯೂಹವು ಹೆಚ್ಚು ಕ್ಯಾಲೊರಿ ಹೀರಿಕೊಳ್ಳಲಾರಂಭಿಸಬಹುದು.
ಕಾಲಾಂತರದಲ್ಲಿ ಶಸ್ತ್ರಚಿಕಿತ್ಸೆಗೀಡಾದ ಹೊಟ್ಟೆ ದೊಡ್ಡದಾಗಬಹುದು. ತೂಕವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ನಾವು ಆ ಬಗ್ಗೆ ಕೆಲಸ ಮಾಡಬೇಕಾಗುತ್ತದೆ. ಅಲ್ಪ ಪ್ರಮಾಣದಲ್ಲಿ ಆಹಾರ ಸೇವನೆ, ಪೌಷ್ಟಿಕಾಂಶ ಪೂರೈಕೆಯನ್ನೇ ಆದ್ಯತೆಯನ್ನಾಗಿ ಇರಿಸಿಕೊಳ್ಳುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು ಇತ್ಯಾದಿ ಇದಕ್ಕೆ ಪರಿಹಾರೋಪಾಯಗಳು. ಗ್ಯಾಸ್ಟ್ರಿಕ್ ಬೈಪಾಸ್ ಶಸ್ತ್ರಚಿಕಿತ್ಸೆಗೊಳಗಾದ ಬಳಿಕ ಬಹುತೇಕ ಮಂದಿ ತಮ್ಮ ದೇಹದಲ್ಲಿದ್ದ ಹೆಚ್ಚುವರಿ ತೂಕದಲ್ಲಿ ಶೇ. 66ರಿಂದ ಶೇ. 80ರಷ್ಟನ್ನು ಕಳೆದುಕೊಳ್ಳುತ್ತಾರೆ. ಇದರಲ್ಲಿ ಬಹುತೇಕ ತೂಕ ಮೊದಲ ಎರಡು ವರ್ಷಗಳಲ್ಲಿ ಕಡಿಮೆಯಾಗುತ್ತದೆ.
ಕೆಲವು ವಿಧದ ತೂಕ ಇಳಿಕ ಶಸ್ತ್ರಚಿಕಿತ್ಸೆಗಳ ಬಳಿಕ ದೇಹಕ್ಕೆ ಕಬ್ಬಿಣಾಂಶ, ವಿಟಮಿನ್ ಬಿ-12, ಫೊಲೇಟ್, ಕ್ಯಾಲ್ಸಿಯಂ, ವಿಟಮಿನ್ ಡಿಯಂತಹ ಕೆಲವು ಮುಖ್ಯ ಪೌಷ್ಟಿಕಾಂಶಗಳನ್ನು ಹೀರಿಕೊಳ್ಳುವುದಕ್ಕೆ ಕಷ್ಟವಾಗುತ್ತದೆ. ಆದರೆ ಇವುಗಳ ಕೊರತೆಯಾಗದಂತೆ ದಿನವೂ ಮಲ್ಟಿವಿಟಮಿನ್ ಗಳು ಮತ್ತು ಇತರ ಪೂರಕ ಆಹಾರಗಳನ್ನು ತೆಗೆದುಕೊಂಡಾಗ ಇವುಗಳ ಕೊರತೆಯಾಗದಂತೆ ತಡೆಯಬಹುದಾಗಿದೆ.
ಡಾ| ವಿದ್ಯಾ ಶಾರದಾ ಭಟ್ ಸರ್ಜಿಕಲ್ ಗ್ಯಾಸ್ಟ್ರೊಎಂಟರಾಲಜಿ ಕೆಎಂಸಿ ಆಸ್ಪತ್ರೆ, ಮಂಗಳೂರು