ಬೆಳಂದೂರು: ಕುದ್ಮಾರು ಗ್ರಾಮದಲ್ಲಿ 800 ವರ್ಷಗಳ ಇತಿಹಾಸವಿರುವ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಕೇಪುಳೇಶ್ವರ ದೇವಸ್ಥಾನವು ಶಿಥಿಲಾವಸ್ಥೆಗೆ ತಲುಪಿದ್ದು, ಜೀರ್ಣೋದ್ಧಾರಕ್ಕೆ ಕಾಯುತ್ತಿದೆ.
ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣಗೊಂಡ ಈ ದೇವಸ್ಥಾನದಲ್ಲಿ ಹಳೆಗನ್ನಡದಲ್ಲಿ ಬರೆದಿರುವ ಶಿಲಾಶಾಸನಗಳಿವೆ. ಪಾಂಡವರು ವನವಾಸದ ಸಂದರ್ಭದಲ್ಲಿ ಈ ಊರಿಗೆ ಬಂದಾಗ ನಿತ್ಯಾರಾಧನೆಗೆ ಐದು ಲಿಂಗಗಳ ಈ ದೇವಾಲಯವನ್ನು ಸ್ಥಾಪಿಸಿದ್ದರು. ಒಂದೇ ಅಂಗಣದಲ್ಲಿ ಶ್ರೀ ಪಂಚಲಿಂಗೇಶ್ವರ ಹಾಗೂ ಶ್ರೀ ಕೇಪುಳೇಶ್ವರ ದೇವಾಲಯಗಳು ಇರುವುದು ವಿಶೇಷ.
ಕೇಪುಳೇಶ್ವರ ದೇವಾಲಯದ ಮುಂಭಾಗದಲ್ಲಿ ತೀರ್ಥ ಬಾವಿಯಿದೆ. ಈ ಬಾವಿಯನ್ನು ಭೀಮಸೇನ ತನ್ನ ಕಿರು ಬೆರಳೂರಿ ನಿರ್ಮಿಸಿದನೆಂದು ಪ್ರತೀತಿ. ಕೇವಲ 10 ಅಡಿ ಆಳವಿರುವ ಈ ಬಾವಿಯಲ್ಲಿ ಕಾವೇರಿ ಸಂಕ್ರಮಣದಂದು ತಲಕಾವೇರಿಯಲ್ಲಿ ತೀಥೋìದ್ಭವ ಆಗುತ್ತಿದ್ದಂತೆಯೇ ಇಲ್ಲಿಯೂ ನೀರು ಚಿಮ್ಮುತ್ತದೆ. ಇಲ್ಲಿ ತೀರ್ಥ ಸ್ನಾನ ಮಾಡಿದರೆ ಕುದಿ ಜ್ವರ, ಕೆಡುಗಳು ಗುಣವಾಗುತ್ತವೆ ಎಂಬ ನಂಬಿಕೆ ಇದೆ. ಮಕ್ಕಳಿಲ್ಲದವರು ರಂಗಪೂಜೆ ಹರಕೆ ಹೇಳಿ ಸಂತಾನ ಪ್ರಾಪ್ತಿಯಾದ ನಿದರ್ಶನಗಳಿವೆ. ಇದು ಕುದ್ಮಾರಿನ ಗ್ರಾಮ ದೇವಸ್ಥಾನವಾಗಿದೆ.
ಇಲ್ಲಿ ನೆಲೆಸಿರುವ ಕೇಪುಲೇಶ್ವರ ದೇವರ ದೇವಸ್ಥಾನ ಈ ಮೊದಲು ತುಳಸಿಗುಡ್ಡೆಯಲ್ಲಿ ಇತ್ತಂತೆ. ಎರಡೂ ದೇವಸ್ಥಾನಗಳಲ್ಲಿ ಒಬ್ಬರೇ ಅರ್ಚಕರು ಪೂಜೆ ಮಾಡುತ್ತಿದ್ದು, ಅವರ ಪತ್ನಿ ಪೂಜಾ ಸಾಮಗ್ರಿ, ಹೂವು ಹಾಗೂ ಬಿಲ್ವಪತ್ರೆಗಳನ್ನು ಜೋಡಿಸಿಕೊಡುತ್ತಿದ್ದರು.
ಅರ್ಚಕರ ಪತ್ನಿ ತುಂಬು ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ತುಳಸಿಗುಡ್ಡೆ ಏರಿ ಕೇಪುಲೇಶ್ವರ ದೇವರ ಸನ್ನಿಧಿಗೆ ಹೋಗಲು ಕಷ್ಟವಾಗುತ್ತಿತ್ತು. ದೇವರೆ, ನೀನು ಕೆಳಗೆ ಇರುತ್ತಿದ್ದರೆ ನಾನು ನಿನ್ನ ಪೂಜೆಯಲ್ಲೂ ಪಾಲ್ಗೊಳ್ಳಬಹುದಿತ್ತು ಎಂದು ಅರ್ಚಕರ ಪತ್ನಿ ಆಸೆಪಟ್ಟರಂತೆ. ಮರುದಿನ ನೋಡಿದರೆ ಕೇಪುಳ ಗಿಡದ ಬುಡದಲ್ಲಿ ದೇವರ ಉದ್ಭವವಾಗಿತ್ತೆಂದು ಪ್ರತೀತಿ. ತುಳಸಿಗುಡ್ಡದ ಮೇಲ್ಭಾಗದಲ್ಲಿ ದೇವರ ಗುಡ್ಡೆ ಇದೆ. ಭೀಮನು ದಾರಂದ ಕೆರೆ ನಿರ್ಮಾಣ ಮಾಡುತ್ತಿದ್ದಾಗ ಒಂದು ಹಾರೆ ಮಣ್ಣು ಬಿದ್ದು ದೇವರ ಗುಡ್ಡೆ, ಅದರಲ್ಲೇ ಸ್ವಲ್ಪ ಮಣ್ಣು ಬಿದ್ದ ಜಾಗ ತುಳಸಿಗುಡ್ಡೆ ಆಯಿತೆಂದು ಹೇಳುತ್ತಾರೆ. ಈಗಲೂ ದಾರಂದ ಕೆರೆ ಇದೆ. ಪಕ್ಕದಲ್ಲೇ ಕುದುರೆ ಕಟ್ಟುವ ಕಲ್ಲೂ ಗೋಚರಿಸುತ್ತಿದೆ.
ಈ ದೇವಸ್ಥಾನದ ಸುತ್ತುಪೌಳಿ, ನಮಸ್ಕಾರ ಮಂಟಪ, ಎರಡೂ ದೇವರ ಗರ್ಭಗುಡಿ ಶಿಥಿಲಾವಸ್ಥೆ ತಲುಪಿವೆ. ದೇವಸ್ಥಾನದ ಆನುವಂಶೀಯ ಮೊಕ್ತೇಸರ ಜನೇಶ್ ಭಟ್ ಅವರೇ ನಿತ್ಯ ಪೂಜೆ ಮಾಡುತ್ತಿದ್ದಾರೆ. ಈ ದೇವಸ್ಥಾನಲ್ಲಿ 20 ವರ್ಷಗಳಿಂದ ಸಾಮೂಹಿಕ ಶಿವರಾತ್ರಿ ಉತ್ಸವ ನಡೆಯುತ್ತಿದೆ. ಉಪದೇವರಾದ ಶಾಸ್ತಾರ, ವೀರಭದ್ರ ಗುಡಿ ಇವೆ.ವ್ಯಾಘ್ರ ಚಾಮುಂಡಿ, ರಾಜನ್ ದೈವ, ಕಾಸ್ಪಾಡಿ ದೈವಗಳ ಸಾನ್ನಿಧ್ಯವಿದೆ.
ಫೆ. 21: ಜೀರ್ಣೋದ್ಧಾರ ಸಂಕಲ್ಪ ವಿಧಿ
ಐತಿಹಾಸಿಕ ಹಿನ್ನೆಲೆಯುಳ್ಳ ದೇವಸ್ಥಾನದ ಜೀರ್ಣೋದ್ದಾರಕ್ಕೆ ಊರವರು ಚಿಂತನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಫೆ. 21ರಂದು ಶಿವರಾತ್ರಿ ದಿನ ಜೀರ್ಣೋದ್ಧಾರ ಸಂಕಲ್ಪ ವಿಧಿ ನಡೆಯಲಿದೆ ಎಂದು ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಜನೇಶ್ ಭಟ್ ಬರೆಪ್ಪಾಡಿ ತಿಳಿಸಿದ್ದಾರೆ.
– ಪ್ರವೀಣ್ ಚೆನ್ನಾವರ