Advertisement

ಪತ್ನಿಯನ್ನು ಓದಿಸಿ ಅಧಿಕಾರಿಯನ್ನಾಗಿ ಮಾಡಿದ ಪತಿ: ಅಧಿಕಾರಕ್ಕೇರಿ ಮತ್ತೊಬ್ಬನ ಜೊತೆ ಸಂಬಂಧ

05:50 PM Jul 06, 2023 | Team Udayavani |

ಲಕ್ನೋ: ಕಳೆದ ಕೆಲ ಸಮಯದಿಂದ ಉತ್ತರ ಪ್ರದೇಶದ ಬರೇಲಿಯಲ್ಲಿನ ಉಪಜಿಲ್ಲಾ ಮ್ಯಾಜಿಸ್ಟ್ರೇಟ್ (SDM) ನ ಪಿಸಿಎಸ್ ಅಧಿಕಾರಿಯೊಬ್ಬರ ಭ್ರಷ್ಟ್ರಚಾರ ಹಾಗೂ ಪತಿಯನ್ನೇ ಅಧಿಕಾರದ ದಾಹದಿಂದ ಮೋಸ ಮಾಡಿರುವ ಪ್ರಕರಣ ದೇಶದಲ್ಲೇ ಸಂಚಲನ ಸೃಷ್ಟಿಸಿದೆ.

Advertisement

ತನ್ನ ಪತ್ನಿ ಅಧಿಕಾರದ ದರ್ಪದಿಂದ ತನ್ನ ಮೇಲೆಯೇ ನಾನಾ ಆರೋಪಗಳನ್ನು ಮಾಡಿ ನನ್ನ ಕೆಲಸವನ್ನೇ ಕಳೆದುಕೊಳ್ಳುವಂತೆ ಮಾಡಿದ್ದಾಳೆ ಎನ್ನುವ ಆರೋಪವನ್ನು ಅಲೋಕ್ ಮೌರ್ಯ ಅವರು ಮಾಡಿದ್ದಾರೆ. ಈ ಕುರಿತು ಪತಿ ಅಲೋಕ್‌ ಮಾಡಿರುವ ಆರೋಪ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಯಾರು ಈ ಅಲೋಕ್ ಮೌರ್ಯ, ಜ್ಯೋತಿ ಮೌರ್ಯ? : 2010 ರಲ್ಲಿ ಜ್ಯೋತಿ ಮೌರ್ಯ ಪ್ರಯಾಗ್ ರಾಜ್ ಜಿಲ್ಲೆಯ ನಿವಾಸಿ ಅಲೋಕ್ ವರ್ಮಾ ಎಂಬುವವರನ್ನು ವಿವಾಹವಾಗಿದ್ದಾರೆ. ವಿವಾಹದ ಬಳಿಕವೂ ತಾನು ಕಲಿಯಬೇಕೆಂದು ಪತಿ ಅಲೋಕ್‌ ಬಳಿ ಜ್ಯೋತಿ ಹೇಳಿದ್ದಳು. ಇದಕ್ಕಾಗಿ ಪತ್ನಿಯ ಕನಸಿಗೆ ಪತಿ ಹಾಗೂ ಆತನ ಮನೆಯವರು ಸಾಲವನ್ನು ಮಾಡಿ ಜ್ಯೋತಿಯನ್ನು ರಾಜ್ಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣವಾಗಿಸುವಲ್ಲಿ ಶ್ರಮವಹಿಸುತ್ತಾರೆ. ಹಗಲು – ಇರುಳ ಎನ್ನದೇ ಪತ್ನಿಗಾಗಿ ದುಡಿದು, ಆಕೆಯ ಕನಸಿಗೆ ಪತಿ ಅಲೋಕ್‌ ಕಷ್ಟಪಡುತ್ತಾರೆ. ಕೋಚಿಂಗ್‌ ಸೆಂಟರ್‌ ಗೂ ದಾಖಲಾತಿಯನ್ನು ಅಲೋಕ್‌ ಮಾಡಿಸುತ್ತಾರೆ. ಪರೀಕ್ಷೆಯಲ್ಲಿ ಚೆನ್ನಾಗಿ ಓದಿದ ಪರಿಣಾಮ 2015 ರಲ್ಲಿ ಪಿಸಿಎಸ್ ಪರೀಕ್ಷೆಯಲ್ಲಿ ಜ್ಯೋತಿ ತೇರ್ಗಡೆಯಾಗುತ್ತಾರೆ. ಈ ವಿಚಾರ ಪತಿ ಹಾಗೂ ಅವರ ಮನೆವರಿಗೆ ಸಂಭ್ರಮವನ್ನು ತರುತ್ತದೆ. ಇದಾದ ಬಳಿಕ ಜ್ಯೋತಿ ಅವರಿಗೆ  ಉಪಜಿಲ್ಲಾ ಮ್ಯಾಜಿಸ್ಟ್ರೇಟ್ (SDM) ನಲ್ಲಿ ಪಿಸಿಎಸ್ ಅಧಿಕಾರಿಯ ಉದ್ಯೋಗ ಪ್ರಾಪ್ತಿಯಾಗುತ್ತದೆ. ಅದೇ ವರ್ಷದಲ್ಲಿ ಜ್ಯೋತಿ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಾರೆ.

ಏನಿದು ಪ್ರಕರಣ: 2020 ರವರೆಗೆ ಜ್ಯೋತಿ ಹಾಗೂ ಅಲೋಕ್‌ ಅವರ ಸಂಬಂಧದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಅಲೋಕ್‌ ಅವರಿಗೆ ತನ್ನ ಪತ್ನಿ ಕಣ್ತಪ್ಪಿಸಿ ಬೇರೊಬ್ಬ ಅಧಿಕಾರಿಯ ಜೊತೆ ಸ್ನೇಹವನ್ನು ಇಟ್ಟುಕೊಂಡಿದ್ದಾರೆ ಎನ್ನುವ ಸಂಶಯ ಬರುತ್ತದೆ. ಆದರೆ ಪತ್ನಿ ಮೇಲೆ ಅಪಾರ ನಂಬಿಕೆಯಿಟ್ಟಿದ್ದ ಹಾಗೂ ಪತ್ನಿ ಸರ್ಕಾರಿ ಉದ್ಯೋಗದಲ್ಲಿ ಇದ್ದ ಕಾರಣ ಅವರಿಬ್ಬರೂ ಸ್ನೇಹಿತರಾಗಿ ಅಷ್ಟೇ ಇರಬಹುದು ಎಂದು ಅಂದುಕೊಂಡಿದ್ದರು. ಆದರೆ 2022 ರ ಒಂದು ದಿನ ಜ್ಯೋತಿ ತನ್ನ ಫೇಸ್‌ ಬುಕ್‌ ಖಾತೆಯನ್ನು ಲಾಂಗ್‌ ಔಟ್‌ ಮಾಡಲು ಮರೆತಿದ್ದಳು. ಆಕೆಯ ಮೊಬೈಲ್‌ ಫೋನ್‌ ನ್ನು ನೋಡಿದ ಅಲೋಕ್‌ ಗೆ ಶಾಕ್‌ ಆಗಿತ್ತು. ಆತ ಇಷ್ಟು ದಿನ ಅಂದುಕೊಂಡಿದ್ದ ಅಕ್ರಮ ಸಂಬಂಧದ ವಿಚಾರ ಸತ್ಯವಾಗಿತ್ತು. ಜ್ಯೋತಿ  2020 ರಿಂದ ಗಾಜಿಯಾಬಾದ್‌ನ ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಆಗಿರುವ ಮನೀಶ್‌ ದುಬೆ ಎನ್ನುವ ವ್ಯಕ್ತಿಯೊಂದಿಗೆ ಗೆಳೆತನವನ್ನು ಹೊಂದಿದ್ದಳು. ಆತನನೊಂದಿಗೆ ಖಾಸಗಿ ಆಗಿ ಮಾಡಿರುವ ಮೆಸೇಜ್‌ ಗಳನ್ನು ಕೂಡ ಅಲೋಕ್‌ ನೋಡಿದ್ದಾರೆ. ಈ ವಿಚಾರವಾಗಿ ಪತ್ನಿಯ ಬಳಿ ಕೇಳಿದಾಗ ಆಕೆ ಅಧಿಕಾರದ ದರ್ಪದಿಂದ ತನ್ನ ಪತಿ ಅಲೋಕ್ ಅವರಿಗೆ ಬೆದರಿಕೆ ಹಾಕಿ ಜೈಲಿಗೆ ಕಳುಹಿಸುವುದಾಗಿ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

ಮಾಧ್ಯಮದ ಮುಂದೆ ಅತ್ತ ಪತಿ: ಲಕ್ಷಗಟ್ಟಲೆಯ ಅಕ್ರಮ ಬಯಲಿಗೆಳೆದ.. ನಾನು ಕಷ್ಟಪಟ್ಟು ಓದಿಸಿದೆ. ನನ್ನ ಅಮಾಯಕತೆಯನ್ನು ಬಳಸಿಕೊಂಡು ಆಕೆ ಇನ್ನೊಬ್ಬನ ಜೊತೆ ಸಂಬಂಧವನ್ನು ಇಟ್ಟುಕೊಂಡು, ಜೀವ ಬೆದರಿಕೆಯನ್ನು ಹಾಕುತ್ತಿದ್ದಾಳೆ. ದಯವಿಟ್ಟು ನನ್ನ ಜೊತೆ ಬಾ ನಾವು ಮತ್ತೆ ಸಂಸಾರವನ್ನು ಸಾಗಿಸುವ ಎಂದು ಹೇಳುತ್ತಾ ಅಲೋಕ್‌ ಅತ್ತಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಈ ಪ್ರಕರಣದಲ್ಲಿ ನನಗೆ ಬೆದರಿಕೆಗಳು ಬಂದಿದೆ. ನನ್ನನ್ನು ಕೊಲ್ಲಲು ಸಂಚು ರೂಪಿಸಲಾಗಿದೆ ಅಲೋಕ್ ಎಂದಿದ್ದಾರೆ.

Advertisement

ಇದಾದ ಬಳಿಕ ಡೈರಿಯೊಂದರಲ್ಲಿ ಪತ್ನಿ ಜ್ಯೋತಿ ಅವರ ಅಕ್ರಮಗಳ ದೊಡ್ಡ ಪಟ್ಟಿಯನ್ನೇ ಮಾಧ್ಯಮದ ಮುಂದೆ ಸಾಕ್ಷ್ಯವಾಗಿ ಕೊಟ್ಟಿದ್ದಾರೆ.

ಜ್ಯೋತಿ ಮೌರ್ಯ ಅವರು ಅಕ್ಟೋಬರ್ 2021 ರಲ್ಲಿ 604,000‌ ಲಕ್ಷ ರೂ. ರೂಪಾಯಿಗಳನ್ನು ಲಂಚವಾಗಿ ಸ್ವೀಕರಿಸಿದ್ದಾರೆ ಎಂದು ಡೈರಿಯಲ್ಲಿ ಆರೋಪಿಸಲಾಗಿದೆ. ಪ್ರತಿ ತಿಂಗಳು ಸಪ್ಲೈ ಇನ್ಸ್‌ಪೆಕ್ಟರ್ ಮತ್ತು ಮಾರ್ಕೆಟಿಂಗ್ ಇನ್ಸ್‌ಪೆಕ್ಟರ್‌ಗೆ ಕ್ರಮವಾಗಿ 15,000 ಮತ್ತು 16,000 ರೂಪಾಯಿಗಳ ಪಾವತಿಯನ್ನು ತೋರಿಸಿದೆ.

ವರದಕ್ಷಿಣೆ ಕಿರುಕುಳ, ಪತಿ ವಿರುದ್ಧ ಸುಳ್ಳಿನ ಆರೋಪ ಮಾಡಿದ ಜ್ಯೋತಿ: ಅಲೋಕ್‌ ಪತ್ನಿ ಬಗ್ಗೆ ನಾನಾ ಆರೋಪಗಳನ್ನು ಮಾಡಿರುವುದಕ್ಕೆ ಜ್ಯೋತಿ ಹಾಗೂ ಆಕೆಯ ಕುಟುಂಬದವರು ಅಲೋಕ್‌ ವಿರುದ್ದವೇ ಆರೋಪವನ್ನು ಮಾಡಿದ್ದಾರೆ. ಮದುವೆಯ ವೇಳೆ ಅಲೋಕ್‌ ಅವರು ನಮ್ಮ ಬಳಿ ಗ್ರಾಮ ಪಂಚಾಯಿತಿ ಅಧಿಕಾರಿ ಎಂದು ಹೇಳಿದ್ದರು. ಆತ ಅಲ್ಲಿ ಕಸ ಗುಡಿಸುವ 4ನೇ ವರ್ಗದ ಉದ್ಯೋಗಿಯಾಗಿದ್ದ ಎಂದು ಜ್ಯೋತಿ ಅವರ ತಂದೆ ಪರಸ್ ನಾಥ್ ಮೌರ್ಯ ಮದುವೆ ಕಾರ್ಡ್‌ ನಲ್ಲಿ ಪ್ರಕಟವಾದ ಅಲೋಕ್‌ ಅವರ ಉದ್ಯೋಗವನ್ನು ತೋರಿಸಿ ಸಾಕ್ಷ್ಯವನ್ನು ಮಾಧ್ಯಮಗಳಿಗೆ ತೋರಿಸಿದ್ದಾರೆ.

ಇದಲ್ಲದೇ ಜ್ಯೋತಿ ಅಲೋಕ್‌ ಹಾಗೂ ಆತನ ಮನೆಯವರು ವರದಕ್ಷಿಣೆ ವಿಚಾರವಾಗಿ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ. ವರದಕ್ಷಿಣೆ ಹಾಗೂ ಕಾರನ್ನು ಬೇಡಿಕೆಯಾಗಿ ಇಟ್ಟಿದ್ದಾರೆ ಎಂದು ಜ್ಯೋತಿ ಆರೋಪಿಸಿದ್ದಾರೆ.

ಇದೀಗ ಜ್ಯೋತಿ ಅಲೋಕ್‌ ವಿಚ್ಚೇದನಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಪ್ರಕರಣವನ್ನು ಜನ ʼ ‘ಸೂರ್ಯವಂಶಂʼ ಸಿನಿಮಾ ಕಥೆಗೆ ಹೋಲಿಸಿದ್ದಾರೆ.  ಈ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next