Advertisement
ಈ ಎರಡೂ ಪ್ರಮುಖ ಸುಳಿವುಗಳನ್ನು ಆಧರಿಸಿ ತನಿಖೆ ಚುರುಕುಗೊಳಿಸಿದಾಗ ಕೊಲೆಯಾದ ಮಹಿಳೆ ಕೊಲ್ಕತ್ತಾ ಮೂಲದ ಪೂಜಾ ಸಿಂಗ್ ದೇ (30) ಎಂಬುದು ಖಚಿತವಾಗಿದೆ. ಬಳಿಕ ಆಕೆಯ ಫೋನ್, ಇಮೇಲ್ ಐಡಿ ವಿವರ ಪರಿಶೀಲಿಸಿದಾಗ ಆಕೆಯನ್ನು ಕೊಲೆಗೈದಿದ್ದು ಕ್ಯಾಬ್ ಚಾಲಕ ಎಚ್.ಎಂ ನಾಗೇಶ್ (22) ಎಂಬುದು ಬಯಲಾಗಿದೆ. ಬಳಿಕ ಬೆಂಗಳೂರಿನಲ್ಲಿ ಏನೂ ಗೊತ್ತಿಲ್ಲದವನಂತೆ ಕ್ಯಾಬ್ ಓಡಿಸಿಕೊಂಡಿದ್ದ ಆರೋಪಿ ನಾಗೇಶ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ಕೊಲೆ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ. ಏರ್‌ಪೋರ್ಟ್ ಪ್ರಯಾಣದ ವೇಳೆ ಮಹಿಳೆಯನ್ನು ದಿಕ್ಕುತಪ್ಪಿಸಿ ಕೊಲೆ ಮಾಡಿದ ಪ್ರಕರಣದಲ್ಲಿ ಕ್ಯಾಬ್ ಚಾಲಕನ ಪಾತ್ರದ ಬಗ್ಗೆ ಆ.21ರಂದು “ಅಪಹರಿಸಿ ಯುವತಿ ಕೊಲೆ?’ ಎಂಬ ಶೀರ್ಷಿಕೆಯಡಿ “ಉದಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು.
Related Articles
Advertisement
ಕೊಲೆಗೈದವನಿಗೆ ಸಿಕ್ಕಿದ್ದು ಬರೀ 500 ರೂ.!: ಪೂಜಾ ಅವರನ್ನು ಹಣ ಹಾಗೂ ಚಿನ್ನಾಭರಣ ದೋಚುವ ಸಲುವಾಗಿ ಕೊಲೆ ಮಾಡಿದ ಆರೋಪಿ ನಾಗೇಶ್‌ಗೆ ಸಿಕ್ಕಿದ್ದು ಬರೀ 500 ರೂ. ಮಾತ್ರ! ಕೊಲೆ ಮಾಡಿದ ಬಳಿಕ ಆರೋಪಿ ನಾಗೇಶ್ ಆಕೆಯ ಎರಡು ಬ್ಯಾಗ್‌ಗಗಳು, ಎರಡು ಫೋನ್ ದೋಚಿದ್ದ. ಆದರೆ, ಒಂದು ಬ್ಯಾಗ್‌ನಲ್ಲಿ ಬರೀ ಬಟ್ಟೆಗಳಿದ್ದವು. ಆ ಬ್ಯಾಗನ್ನು ಸಮೀಪದಲ್ಲಿರುವ ತ್ಯಾಜ್ಯ ವಿಲೇವಾರಿ ಮಾಡುವ ಸ್ಥಳದಲ್ಲಿ ಎಸೆದು ಹೋಗಿದ್ದ. ಮತ್ತೂಂದು ವ್ಯಾನಿಟಿ ಬ್ಯಾಗ್‌ನಲ್ಲಿ ಬರೀ 500 ರೂ. ನಗದು ಸಿಕ್ಕಿದೆ. ಉಳಿದಂತೆ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳಿದ್ದರೂ ಅವುಗಳನ್ನು ಬಳಸಲು ಬಂದಿಲ್ಲ.ಹೀಗಾಗಿ ಫೋನ್‌ಗಳು ಹಾಗೂ ವ್ಯಾನಿಟಿ ಬ್ಯಾಗ್‌ನನ್ನು ಕಾರಿನಲ್ಲಿಯೇ ಇಟ್ಟುಕೊಂಡಿದ್ದ.
ಕೊಲೆ ಮಾಡಿದ ಮಾರನೇ ದಿನವೇ ಓಲಾ ಸೇವೆಯನ್ನು ಸ್ಥಗಿತಗೊಳಿಸಿದ್ದ ನಾಗೇಶ್, ಊಬರ್ ಸೇವೆಯನ್ನು ಮಾತ್ರ ಬಳಸಿ ಕ್ಯಾಬ್ ಓಡಿಸುತ್ತಿದ್ದ. ಜತೆಗೆ, ಮನೆಯವರೆಲ್ಲರನ್ನೂ ಮಂಡ್ಯದ ದೇವಾಲಯಕ್ಕೆ ಕರೆದೊಯ್ದು ವಿಶೇಷ ಪೂಜೆ ಮಾಡಿಸಿಕೊಂಡು ಬಂದಿದ್ದ ಬಳಿಕ ಕ್ಯಾಬ್ ಓಡಿಸಿಕೊಂಡಿದ್ದ. ಆತನ ಪೋಷಕರಿಗೆ ನಾಗೇಶ್ ಕೊಲೆಮಾಡಿದ್ದಾನೆ ಎಂಬ ಸಣ್ಣ ಸುಳಿವು ಇರಲಿಲ್ಲ ಎಂದು ಹಿರಿಯ ಅಧಿಕಾರಿ ಹೇಳಿದರು. ಪ್ರಕರಣದ ತನಿಖೆಯಲ್ಲಿ ಈಶಾನ್ಯ ವಿಭಾಗದ ಡಿಸಿಪಿ ಡಾ. ಭೀಮಾಶಂಕರ ಎಸ್ ಗುಳೇದ್, ಸಂಪಿಗೆಹಳ್ಳಿ ಉಪವಿಭಾಗದ ಎಸಿಪಿ ಶಿವಕುಮಾರ್, ಬಾಗಲೂರು ಠಾಣೆಯ ಇನ್ಸ್‌ಪೆಕ್ಟರ್ ಬಿ. ರಾಮಮೂರ್ತಿ, ಪಿಎಸ್‌ಐಗಳಾದ ರಾಜುರೆಡ್ಡಿ ಬೆನ್ನೂರ್, ಕುಮಾರಿ ವಿಂದ್ಯಾ ಹಾಗೂ ಠಾಣೆಯ ಸಿಬ್ಬಂದಿ ಭಾಗಿಯಾಗಿದ್ದರು.
ಕ್ಯಾಬ್‌ಗಳಲ್ಲಿ ಮಹಿಳೆಯರು ಎಷ್ಟು ಸೇಫ್? ಪ್ರಕರಣ 1: 2005ರ ಡಿಸೆಂಬರ್‌ನಲ್ಲಿ ಬಿಪಿಓ ಉದ್ಯೋಗಿ ಪ್ರತಿಭಾ ಮೂರ್ತಿ ಅವರನ್ನು ಕ್ಯಾಬ್ ಚಾಲಕನೇ ಅಪಹರಿಸಿ ಅತ್ಯಾಚಾರ ಮಾಡಿ ಬರ್ಬರವಾಗಿ ಕೊಲೆ ಮಾಡಿದ್ದ. ಈ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಪ್ರಕರಣದ ಆರೋಪಿ ಕ್ಯಾಬ್ ಚಾಲಕ ಶಿವಕುಮಾರ್‌ಗೆ ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ಪ್ರಕರಣ 2: 2015ರಲ್ಲಿ ಬಿಪಿಓ ಉದ್ಯೋಗಿ ಉತ್ತರ ಭಾರತ ಮೂಲದ ಬಿಪಿಓ ಮಹಿಳಾ ಉದ್ಯೋಗಿಯನ್ನು ಅಪಹರಿಸಿದ್ದ ಟೆಂಪೋ ಚಾಲಕ ಹಾಗೂ ಕ್ಲೀನರ್ ಮೂರು ಗಂಟೆಗಳ ಕಾಲ ನಗರದಲ್ಲಿ ಸುತ್ತಾಡಿಸಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದರು. ಪ್ರಕರಣ 3: 2018ರ ಜುಲೈನಲ್ಲಿ ಮುಂಬೈಗೆ ತೆರಳಲು ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದ ಖಾಸಗಿ ಕಂಪೆನಿ ಮಹಿಳಾ ಉದ್ಯೋಗಿಯನ್ನು ಕ್ಯಾಬ್ ಚಾಲಕ ಲೈಂಗಿಕ ಕಿರುಕುಳ ನೀಡಿ ಅಪಹರಿಸಲು ಯತ್ನಿಸಿದ್ದ. ಟೋಲ್ ಗೇಟ್ ಬಳಿ ಮಹಿಳೆ ಸಹಾಯಕ್ಕೆ ಕಿರುಚಿಕೊಳ್ಳುತ್ತವೇ ಎಚ್ಚೆತ್ತ ಆರೋಪಿ ಆಕೆಯನ್ನು ಕೆಳಗೆ ದಬ್ಬಿ ಪರಾರಿಯಾಗಿದ್ದ. ಈ ಸಂಬಂಧ ಮಹಿಳೆ ನೀಡಿದ ದೂರಿನ ಅನ್ವಯ ಚಿಕ್ಕಚಾಲ ಪೊಲೀಸರು ಕ್ಯಾಬ್ ಚಾಲಕ ಸುರೇಶ್ ಎಂಬಾತನನ್ನು ಬಂಧಿಸಿದ್ದರು. ಇದೊಂದು ಅತ್ಯಂತ ದುರಂತ ಘಟನೆಯಾಗಿದೆ. ಮಹಿಳಾ ಪ್ರಯಾಣಿಕರಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಕೂಡಲೇ ಮುಂದಾಗಬೇಕು. ಬಿಬಿಎಂಪಿ ಕೂಡ ಈ ಬಗ್ಗೆ ಗಮನಹರಿಸಬೇಕು.
-ನಾಗಲಕ್ಷ್ಮೀ ಬಾಯಿ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ