Advertisement

ಬ್ರೆಜಿಲ್‌ ಇಂದಿನದಷ್ಟೇ ಗೊತ್ತು, ನಾಳೆಯದ್ದು ಗೊತ್ತಿಲ್ಲ !

03:29 PM May 07, 2020 | sudhir |

ಮನೌಸ್‌: ರಾತ್ರಿ ಹಗಲೆನ್ನದೆ ಕೋವಿಡ್ ನಿಂದ ಸತ್ತವರ ಶವಗಳನ್ನು ಬ್ರೆಜಿಲ್‌ನ ಮಳೆಕಾಡು ಅಮೆಜಾನ್‌ ರಾಜಧಾನಿ ಮನೌಸ್‌ನ ಮಣ್ಣಿನಲ್ಲಿ ಹೂಳಲಾಗುತ್ತಿದ್ದು, ಇದನ್ನು ದುರಂತ ಎಂದೇ ವಿಶ್ಲೇಷಿಸಲಾಗುತ್ತಿದೆ. ಐದು ದಿನಗಳ ಹಿಂದಿನ ಸ್ಥಿತಿಗೂ ಇಂದಿಗೂ ಕೊಂಚ ಸಮಾಧಾನವಿದೆ. ಆದರೂ ಸಾಯುವರ ಸಂಖ್ಯೆ ಆತಂಕದ ಹಂತದಲ್ಲೇ ಇದೆ.

Advertisement

ಕಳೆದ ಶನಿವಾರ 98 ಹಾಗೂ ರವಿವಾರ ಒಂದೇ ದಿನ 140 ಮೃತದೇಹಗಳನ್ನು ಮನೌಸ್‌ನಲ್ಲಿ ಮಣ್ಣು ಮಾಡಲಾಗಿದೆ. ಸಾಮಾನ್ಯವಾಗಿ 30 ಶವಗಳನ್ನು ಹೂಳಲಾಗುತ್ತಿತ್ತು. ಇದು ಹುಚ್ಚುತನದ ಪರಮಾವಧಿ ಎನ್ನುತ್ತಾರೆ ಶ್ಮಶಾನದ ನಿರ್ವಹಣ ಸಿಬಂದಿ. ವಿಚಿತ್ರವೆಂದರೆ, ಮಂಗಳವಾರ ಹೂಳಲಾದ 136 ಶವಗಳ ಪೈಕಿ ಸಿಬಂದಿಯೊಬ್ಬರ ತಾಯಿಯ ಶವವೂ ಇತ್ತು !

ನಗರದ ಮೇಯರ್‌ ಆರ್ಥರ್‌ ವರ್ಜಿಲಿಯೋ ಅವರು ತ್ವರಿತವಾಗಿ ಅಂತಾರಾಷ್ಟ್ರೀಯ ನೆರವು ಬೇಕೆಂದು ಬೇಡಿಕೆ ಇಟ್ಟಿದ್ದಾರೆ. ನಾವು ತುರ್ತು ಪರಿಸ್ಥಿತಿಯಲ್ಲಿಲ್ಲ, ಅದಕ್ಕಿಂತಲೂ ಕಠಿಣ ಸ್ಥಿತಿಯಲ್ಲಿದ್ದೇವೆ. ಯುದ್ಧವೊಂದನ್ನು ಸೋತ ದೇಶದಂತಾಗಿದೆ ನಮ್ಮ ಸ್ಥಿತಿ ಎಂದು ಹೇಳಿದ್ದಾರೆ.

ಲಂಡನ್‌ನಿಂದ ಮಾ. 11ರಂದು ಹಾರಿ ಬಂದ 49ರ ಹರೆಯದ ಮಹಿಳೆ ಈ ಮಳೆ ಕಾಡಿಗೂ ವೈರಸ್‌ ಹರಡಿದ್ದು, ಅಲ್ಲಿನ 20 ಲಕ್ಷ ಜನರು ಅಪಾಯದಲ್ಲಿದ್ದಾರೆ. ಅಲ್ಲಿಂದ ಈಚೆಗೆ ಆರು ವಾರಗಳ ಕಾಲ ಇಲ್ಲಿನ ಸ್ಮಶಾನದ ಕೆಲಸಗಾರರಿಗೆ ಬಿಡುವೇ ಇಲ್ಲ. ಈ ಪೈಕಿ ಇಬ್ಬರು ತಮ್ಮ ತಂದೆಯನ್ನು, ಒಬ್ಬರು ತಮ್ಮ ತಾಯಿಯನ್ನೇ ಹೂಳಬೇಕಾಯಿತು. ಗÌಯಾಕ್ವಿಲ್‌ನಂತೆ ಬ್ರೆಜಿಲ್‌ನ ಮನೌಸ್‌ ಪರಿವರ್ತನೆಯಾಗುವುದನ್ನು ತಪ್ಪಿಸಲು ನಾವೀಗ ಕಾಲದ ವಿರುದ್ಧವೇ ಹೋರಾಡಬೇಕಾಗಿದೆ ಎಂದು ಅಲ್ಲಿನ ಪತ್ರಿಕೆಯೊಂದು ವರದಿ ಮಾಡಿದೆ. ಇಕ್ವೆಡಾರ್‌ನ ನಗರವಾದ ಗಯಾಕ್ವಿಲ್‌ನಲ್ಲಿ ಕಳೆದ ವಾರ ಸಾವಿರಾರು ಜನರು ಮೃತಪಟ್ಟಿದ್ದು, ಹೆಣಗಳು ಅನಾಥವಾಗಿ ಬೀದಿಯಲ್ಲಿ ಬಿದ್ದಿದ್ದವು.

ನಿತ್ಯ 100 ಕ್ಕೂ ಹೆಚ್ಚು ಜನ ಅಸುನೀಗುತ್ತಿದ್ದಾರೆ. ಮನೌಸ್‌ನಲ್ಲೀಗ ರಾತ್ರಿ ವೇಳೆಯಲ್ಲೂ ಶವಗಳನ್ನು ಹೂಳಲಾಗುತ್ತಿದೆ. ಇನ್ನೊಂದು ವಾರದೊಳಗೆ ಶವ ಪೆಟ್ಟಿಗೆಗಳ ಕೊರತೆಯೂ ಕಾಡಲಿದೆ ಎಂದು ಸ್ಥಳೀಯ ಅಧಿಕಾರಿಗಳು ಅಂದಾಜಿಸಿದ್ದಾರೆ.

Advertisement

ಮನೌಸ್‌ನಲ್ಲಿ ಆ್ಯಂಬುಲೆನ್ಸ್‌ಗಳು ರೋಗಿಗಳನ್ನು ಹೊತ್ತು ಸ್ಥಳಾವಕಾಶವಿರುವ ಆಸ್ಪತ್ರೆಗಾಗಿ ಸರಾಸರಿ ಮೂರು ತಾಸು ಅಡ್ಡಾಡುತ್ತಿವೆ ಎಂದರೆ ಪರಿಸ್ಥಿತಿಯ ಗಂಭೀರತೆ ಅರ್ಥವಾದೀತು. ಕೆಲವು ಆಸ್ಪತ್ರೆಗಳ ಜಗಲಿಗಳ ಮೇಲೆ ಪ್ಲಾಸ್ಟಿಕ್‌ ಚೀಲಗಳಲ್ಲಿ ಸುತ್ತಿಟ್ಟ ಶವಗಳ ಸಾಲು ಕಂಡುಬಂದಿದೆ. ವೆಂಟಿಲೇಟರ್‌, ಆಮ್ಲಜನಕ, ಸಿಬಂದಿ, ಸ್ಟ್ರೆಚರ್‌ ಇತ್ಯಾದಿಗಳ ಕೊರತೆ ಆಸ್ಪತ್ರೆಗಳನ್ನೂ ಕಾಡುತ್ತಿದೆ ಎಂದು ಸಾಮು ಆ್ಯಂಬುಲೆನ್ಸ್‌ ಸೇವೆಯ ತಾಂತ್ರಿಕ ನಿರ್ದೇಶಕ ಡಾ| ಡೊಮಿಸಿಯೋ ಫಿಲೂ ದಿ ಗಾರ್ಡಿಯನ್‌ ಗೆ ತಿಳಿಸಿದ್ದಾರೆ.

ಮಳೆಗಾಲದ ಕೊನೆಯ ಅವಧಿಯಲ್ಲಿ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಜಾಸ್ತಿ ಇರುವ ಕಾರಣ ಆಸ್ಪತ್ರೆಗಳು ಅದಾಗಲೇ ತುಂಬಿದ್ದವು. ಇದೇ ಅವಧಿಯಲ್ಲಿ ಕೋವಿಡ್ ವಕ್ಕರಿಸಿದ್ದು, ಸಾವಿನ ಪ್ರಮಾಣ ಹೆಚ್ಚಲು ಕಾರಣವಾಗಿದೆ. ಇಲ್ಲಿನ ಆಸ್ಪತ್ರೆಗಳಲ್ಲೂ ಸುಸಜ್ಜಿತ ಉಪಕರಣಗಳಿಲ್ಲ, ಸಾಕಷ್ಟು ವೈದ್ಯಕೀಯ ಸಿಬಂದಿಯೂ ಇಲ್ಲ. ಇರುವ ಆರೋಗ್ಯ ಕಾರ್ಯಕರ್ತರು ಜಾಗೃತರಾಗುವ ಹೊತ್ತಿಗೆ ಕೋವಿಡ್ ಹರಡಿಬಿಟ್ಟಿತ್ತು. ಕೋವಿಡ್ ಸೋಂಕು ಪತ್ತೆ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪವೂ ವ್ಯಕ್ತವಾಗಿದೆ. ಮೊದಲ ಸೋಂಕು ಪತ್ತೆಯಾಗಿ 10 ದಿನಗಳ ಬಳಿಕ ಆರೋಗ್ಯ ತುರ್ತು ಸ್ಥಿತಿಯನ್ನು ಘೋಷಿಸಲಾಯಿತು.

ಆವಶ್ಯಕವಲ್ಲದ ಎಲ್ಲ ವ್ಯವಹಾರವನ್ನು ಸ್ಥಗಿತಗೊಳಿಸಲಾಯಿತು. ಮನೆಯಲ್ಲೇ ಇರಿ ಎಂದು ಜನರಿಗೆ ಹೇಳಲು ನಾವು ತುಂಬ ಹೆಚ್ಚು ಸಮಯವನ್ನು ತೆಗೆದುಕೊಂಡೆವು ಎನ್ನುತ್ತಾರೆ ಮನೌಸ್‌ನ ಆರ್ಚ್‌ ಬಿಷಪ್‌ ಲಿಯೋನಾರ್ಡೊ ಸ್ಟೈನರ್‌.
ಇಷ್ಟೊಂದು ಪ್ರಮಾಣದಲ್ಲಿ ಸಾವು-ನೋವು ಸಂಭವಿಸುತ್ತಿದ್ದರೂ ನಗರದ ಹಲವು ಭಾಗಗಳಲ್ಲಿ ಸಾಮಾಜಿಕ ಅಂತರ ಕಾಪಾಡುವುದನ್ನು ನಿರ್ಲಕ್ಷಿಸ ಲಾಗುತ್ತಿದೆ. ಬ್ಯಾಂಕ್‌ ಹಾಗೂ ಇತರೆಡೆಗಳಲ್ಲಿ ಉದ್ದನೆಯ ಸಾಲುಗಳು ಕಂಡುಬರುತ್ತಿವೆ. ಜನ ಮನೆಯೊಳಗೆ ಉಳಿಯಲು ನಿರಾಕರಿಸುತ್ತಿದ್ದಾರೆ. ತಮಗೇನೂ ಆಗುವುದಿಲ್ಲ ಎಂಬ ನಿರ್ಲಕ್ಷ್ಯವೇ ಕೋವಿಡ್ ಹರಡಲು ಪ್ರಮುಖ ಕಾರಣವೆಂದು ವಿಶ್ಲೇಷಿಸಲಾಗಿದೆ.ಬ್ರೆಜಿಲ್‌ನಲ್ಲಿ ಕೋವಿಡ್ ವೈರಸ್‌ನಿಂದಾಗಿ 7,966 ಮಂದಿ ಹೆಚ್ಚು ಜನರು ಅಸುನೀಗಿದ್ದಾರೆ. ಈ ಪೈಕಿ ಮನೌಸ್‌ನಲ್ಲೂ ಹೆಚ್ಚು ಸಾವುಗಳಾಗಿವೆ ಎನ್ನಲಾಗಿದೆ. ಆದರೆ, ಇಲ್ಲಿಯ ಸ್ಮಶಾನಗಳ ಸ್ಥಿತಿ ನೋಡಿದರೆ ಈ ಸಂಖ್ಯೆ ಎಷ್ಟೋ ಪಾಲು ಜಾಸ್ತಿ ಇದೆ ಎನ್ನುವುದು ಖಚಿ ತವಾಗುತ್ತಿದೆ. ಇಂದು ನಾವು ಬದುಕಿದ್ದೇವೆ. ನಾಳಿನದು ಹೇಗೋ ಗೊತ್ತಿಲ್ಲ ಎನ್ನುತ್ತಾರೆ, ಇಲ್ಲಿಯ ಜನ.

Advertisement

Udayavani is now on Telegram. Click here to join our channel and stay updated with the latest news.

Next