ಮಕ್ಕಳು ಕಣ್ಣುಬಿಡುವ ವಯಸ್ಸಿನಲ್ಲಿ ತಮ್ಮ ಸುತ್ತಮುತ್ತಲ ಪರಿಸರದಿಂದ ಹೊಸ ಹೊಸ ವಿಚಾರಗಳನ್ನು ಕಲಿತುಕೊಂಡುಬಿಡುತ್ತವೆ ಎಂದು ವೈದ್ಯರು ಹೇಳುತ್ತಾರೆ. ಈ ಮಾತಿನಂತೆಯೇ ತುಂಬಾ ಚಿಕ್ಕ ವಯಸ್ಸಿನಲ್ಲಿ ಭರತನಾಟ್ಯವನ್ನು ಕಲಿತ ಪುಟಾಣಿ ತನ್ವಿ ಪ್ರಕಾಶ್ ಹೆಬ್ರಿ. ತಾಯಿ ಸ್ಮಿತಾ ಪ್ರಕಾಶ್ ನೃತ್ಯಗಾರ್ತಿಯಾಗಿದ್ದರಿಂದ ತಾಯಿಯಂದಲೇ ತನ್ವಿಗೆ ಭರತನಾಟ್ಯ ಒಲಿದುಬಂದಿತ್ತು. ಮನೆಯಲ್ಲಿಯೇ ಮಕ್ಕಳಿಗೆ ನೃತ್ಯ ತರಗತಿಗಳನ್ನು ಹೇಳಿಕೊಡುತ್ತಿದ್ದುದರಿಂದ ತನ್ವಿ, ತೊಟ್ಟಿಲಲ್ಲಿದ್ದಾಗಲೇ ಭರತನಾಟ್ಯದ ಪಾಠಗಳನ್ನು ಕೇಳಿಕೊಂಡೇ ಬೆಳೆದಿದ್ದಳು. ಸುಮಾರು ಒಂದೂವರೆ ವರ್ಷವಾಗಿದ್ದಾಗಲೇ
ನೃತ್ಯದ ಮುದ್ರೆ (ಮುದ್ರಣ)ಗಳನ್ನು ಈ ಪುಟಾಣಿ ಗುರುತಿಸಬಲ್ಲವಳಾಗಿದ್ದಳು. ಇತರೆ ಮಕ್ಕಳು ನಡೆಯಲು ಕಲಿಯುವ ವಯಸ್ಸಿಗೆ ಈಕೆ ಭರತನಾಟ್ಯ ಕಲಿಯತೊಡಗಿದಳು. ಐದನೇ ವರ್ಷಕ್ಕೆ ತನ್ವಿ “ಬೆಸ್ಟ್ ಡ್ಯಾನ್ಸರ್ ಅವಾರ್ಡ್’ಅನ್ನು ಮುಡಿಗೇರಿಸಿಕೊಂಡಿದ್ದಾಳೆ. ಇಷ್ಟು ಚಿಕ್ಕಪ್ರಾಯದಲ್ಲಿಯೇ ತನ್ವಿ ಈಗಾಗಲೇ ಬೆಳಗಾವಿ, ತುಮಕೂರು, ಬೆಂಗಳೂರು (ಸೃಷ್ಟಿ ಡ್ಯಾನ್ಸ್ ಫೆಸ್ಟಿವಲ್ – 2017, ಜುಡೀಶಿಯಲ್ ಬ್ಲಾಕ್ ಅಸೋಸಿಯೇಶನ್) ಮುಂತಾದ ಕಡೆ ನೃತ್ಯ ಪ್ರದರ್ಶನಗಳನ್ನೂ ನೀಡಿದ್ದಾಳೆ.
ಓದಿನ ಜೊತೆ ಜೊತೆಗೇ ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿದ್ದಾಳೆ. ಇತ್ತೀಚೆಗೆ ಹಾಸನದ “ನ್ಯಾಶನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ’ಯವರು ನಡೆಸಿದ “ಆಲ್ ಇಂಡಿಯಾ ಕ್ಲಾಸಿಕಲ್ ಡ್ಯಾನ್ಸ್ ಫೆಸ್ಟಿವಲ್’ನ ಸಬ್‌ಜೂನಿಯರ್ ಲೆವೆಲ್‌ನಲ್ಲಿ “ಬೆಸ್ಟ್ ಡ್ಯಾನ್ಸರ್ ಅವಾರ್ಡ್’ (ಸಬ್ ಜೂನಿಯರ್ ಲೆವೆಲ್) ತನ್ವಿ ಗೆದ್ದಿದ್ದಾಳೆ.
ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎನ್ನುವಂತೆ ಈಕೆಗೆ ತಾಯಿ, ವಿದುಷಿ ಸ್ಮಿತಾ ಪ್ರಕಾಶ್‌ರೇ ನೃತ್ಯ ಗುರುಗಳು. ಶ್ರೀ ಮಾರಿಕಾಂಬ ನೃತ್ಯ ಕಲಾಕೇಂದ್ರ ಹೆಸರಿನ ನೃತ್ಯಶಾಲೆ ನಡೆಸುತ್ತಿರುವ ಸ್ಮಿತಾ ಅವರು ಭರತನಾಟ್ಯ, ಕಥಕ್, ಕೂಚಿಪುಡಿ ನೃತ್ಯ ಪ್ರವೀಣೆ. ನೃತ್ಯದ ಜೊತೆ ಜೊತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡುತ್ತಿರುವ ತನ್ವಿಗೆ ಚಿತ್ರಕಲೆ, ಫ್ಯಾನ್ಸಿ ಡ್ರೆಸ್ ಮತ್ತು ಕ್ರೀಡೆಯಲ್ಲೂ ಅಪಾರ ಆಸಕ್ತಿ. ದೊಡ್ಡವಳಾದಾಗ ಏನಾಗುತ್ತೀಯಾ ಎಂದು ಕೇಳಿದರೆ ಕಣ್ಣು ದೊಡ್ಡದು ಮಾಡಿ ಒಮ್ಮೆ ಡಾಕ್ಟರ್, ಒಮ್ಮೆ ಎಂಜಿನಿಯರ್ ಮತ್ತೂಮ್ಮೆ ಕ್ರೀಡಾಪಟು ಆಗ್ತಿನಿ ಎಂದು ಅರಳು ಹುರಿದಂತೆ ಹೇಳುತ್ತಾಳೆ. ಪ್ರಸ್ತುತ ತನ್ವಿ ಬೆಂಗಳೂರಿನ ಡಿ.ಬಿ.ಎಂ. ಅಂಡ್ ಆರ್.ಜೆ.ಎಸ್ ಶಾಲೆಯಲ್ಲಿ ಯು.ಕೆ.ಜಿ ಓದುತ್ತಿದ್ದಾಳೆ.
ಪ್ರಿಯಾ