Advertisement

ಬೇಸಗೆಯಲ್ಲೂ ಬತ್ತದ ಬರಮೇಲು ಗೌರಿ ತೀರ್ಥ

12:00 AM Jun 08, 2019 | Team Udayavani |

ಬೆಳ್ಳಾರೆ: ಜಲಕ್ಷಾಮದ ಭೀಕರತೆ ಎಲ್ಲೆಲ್ಲೂ ಜನಸಾಮಾನ್ಯರನ್ನು ತಟ್ಟಿದೆ. ಆದರೆ ಐವರ್ನಾಡು ಗ್ರಾಮದ ಬರಮೇಲು ಶ್ರೀ ಮಹಾಕಾಳಿ ಕ್ಷೇತ್ರದಲ್ಲಿ ಉಕ್ಕೇರುತ್ತಿರುವ ಗೌರಿ ತೀರ್ಥದಲ್ಲಿ ನಿರಂತರವಾಗಿ ನೀರು ಹರಿದುಬರುತ್ತಿದೆ. ಬಿರುಬೇಸಗೆಯಲ್ಲೂ ಕಳೆದ 15 ದಿನಗಳಿಂದ ಇಲ್ಲಿ ಜಲಸಾಂದ್ರತೆ ಮತ್ತಷ್ಟೂ ಹೆಚ್ಚಿದ್ದು ಕೂತೂಹಲಕ್ಕೆ ಕಾರಣವಾಗಿದೆ.

Advertisement

ಐವರ್ನಾಡು ಗ್ರಾಮದ ಬರಮೇಲು ಎನ್ನುವಲ್ಲಿ ಉದ್ಭವ ಶ್ರೀ ಮಹಾಕಾಳಿ ಕ್ಷೇತ್ರವಿದೆ. ಸುತ್ತಲೂ ಹಸುರು ಕಾನನದಿಂದ ಕಂಗೊಳಿಸುತ್ತಿರುವ ಈ ಕ್ಷೇತ್ರ ಅತಿ ಪುರಾತನವಾದ ಆದಿಶಕ್ತಿ ಮಹಾಕಾಳಿಯ ದಕ್ಷಿಣದ ಶಕ್ತಿ ಪೀಠವೆಂದು ಪರಿಗಣಿಸಲ್ಪಟ್ಟಿದೆ. ಈ ಕ್ಷೇತ್ರದ ಪಕ್ಕದಲ್ಲೇ ಇರುವ ಗುಡ್ಡದ ತುದಿಯಿಂದ ಕ್ಷೇತ್ರಕ್ಕೆ ನೀರು ಹರಿದು ಬರುತ್ತಿದೆ. ಗುಡ್ಡದ ತುದಿಯು ಕ್ಷೇತ್ರದಿಂದ ಸುಮಾರು ಒಂದು ಕಿ.ಮೀ ದೂರದಲ್ಲಿದೆ. ಅಲ್ಲಿಂದ ಪೈಪ್‌ ಮೂಲಕ ನೀರನ್ನು ಕ್ಷೇತ್ರಕ್ಕೆ ಹರಿಸಲಾಗಿದೆ.

ಅತೀ ಶುದ್ಧ ನೀರು
ಗುಡ್ಡದ ತುದಿಯ ಮಣ್ಣಿನ ಅಡಿಯಿಂದ ನೀರು ಉಕ್ಕೇರಿ ಬರುತ್ತಿರುವುದರಿಂದ ಈ ನೀರು ಅತೀ ಶುದ್ಧವಾಗಿದೆ. ಈ ಪರಶುದ್ಧವಾದ ನೀರಧಾರೆ ಕ್ಷೇತ್ರಕ್ಕೆ ಹರಿದು ಬರುತ್ತಿರುವುದರಿಂದ ಇದನ್ನು ಗೌರಿ ತೀರ್ಥವೆಂದು ಹೆಸರಿಸಲಾಗಿದೆ. ಶುದ್ಧ ನೀರಾಗಿರುವ ಕಾರಣಕ್ಕೆ ದೇವಿ ಸಾನ್ನಿಧ್ಯದ ಎದುರಿಗೆ ನೀರು ಬಂದು ಬೀಳುವಂತೆ ವ್ಯವಸ್ಥೆ ಮಾಡಲಾಗಿದೆ.

ಸಾಂದ್ರತೆ ಹೆಚ್ಚಳ
ಮುಂಗಾರು ಪೂರ್ವ ಮಳೆಯೂ ಕೈಕೊಟ್ಟ ಕಾರಣ ಎಲ್ಲೂ ನೀರಿನ ಹರಿವು ಕಾಣ ಸಿಗುತ್ತಿಲ್ಲ ಆದರೆ ಈ ಕ್ಷೇತ್ರದಲ್ಲಿ ಹರಿದು ಬರುವ ಗೌರಿ ತೀರ್ಥದಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಕಳೆದ 15 ದಿನಗಳಿಂದ ನೀರಿನ ಸಾಂದ್ರತೆ ಹೆಚ್ಚಾಗುತ್ತಿದ್ದು, ದಿನದ 24 ಗಂಟೆಯೂ ಅಂದಾಜು ಅರ್ಧ ಇಂಚಿನಷ್ಟು, ದಿನಕ್ಕೆ 9 ಸಾವಿರ ಲೀಟರ್‌ ನೀರು ಹರಿದು ಬರುತ್ತಿದೆ. ಭಕ್ತರ ಸಂಖ್ಯೆಯೂ ಈಗ ಜಾಸ್ತಿಯಾಗಿದ್ದು, ಪ್ರತಿದಿನ ಭಕ್ತರು ಬಾಟಲಿಗಳಲ್ಲಿ ತೀರ್ಥವನ್ನು ತುಂಬಿಸಿಕೊಂಡು ಹೋಗುತ್ತಿರುವುದುಕಂಡು ಬರುತ್ತಿದೆ.

ಕ್ಷೇತ್ರದ ಕಾರಣಿಕ ಶಕ್ತಿ
ವರ್ಷದ 365 ದಿನವೂ ಇಲ್ಲಿ ನೀರು ಹರಿದು ಬರುತ್ತಿದೆ. ಹಲವು ವರ್ಷದಿಂದ ಈ ನೀರು ಉಕ್ಕೇರಿ ಬರುತ್ತಿರುವುದನ್ನು ಗಮನಿಸಿದ್ದೇನೆ. ಕಳೆದ 15 ದಿನಗಳಿಂದ ನೀರಿನ ಹರಿವು ಹೆಚ್ಚಾಗಿರುವುದು ಶ್ರೀ ಕ್ಷೇತ್ರದ ಕಾರಣಿಕ ಶಕ್ತಿಯೆಂದು ನಂಬಿರುವ ಭಕ್ತರು ಪುಳಕಿತರಾಗಿದ್ದಾರೆ. ಇದರಿಂದ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆಯೂ ಅಧಿಕವಾಗಿದೆ.
– ಕರುಣಾಕರ ಗೌಡ ಬರಮೇಲು ಧರ್ಮರಸು, ಬರಮೇಲು ಕ್ಷೇತ್ರ

Advertisement

ಉಮೇಶ್‌ ಮಣಿಕ್ಕಾರ

Advertisement

Udayavani is now on Telegram. Click here to join our channel and stay updated with the latest news.

Next