ಬೆಳಗಾವಿ: ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲಗೊಂಡಿವೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ನಗರದಲ್ಲಿ ವಿನೂತನ ಪ್ರತಿಭಟನೆ ಅಹೋರಾತ್ರಿ ಮುಂದುವರೆದಿದೆ. ನಗರದ ಆರ್‌ಟಿಒ ವೃತ್ತದಿಂದ ಪ್ರತಿಭಟನೆ ನಡೆಸುತ್ತ ಚನ್ನಮ್ಮ ವೃತ್ತದಲ್ಲಿ ಸೇರಿ ಮಾನವ ಸರಪಳಿ ನಿರ್ಮಿಸಿದ ರೈತರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ನಡು ರಸ್ತೆಯಲ್ಲಿಯೇ ಅಡುಗೆ ಮಾಡಲು ಕಟ್ಟಿಗೆ ಹೂಡಿ ಒಲೆ ಹೊತ್ತಿಸಲು ಯತ್ನಿಸಿದರು. ಆಗ ಪೊಲೀಸರು ಇದಕ್ಕೆ ತಡೆಯೊಡ್ಡಿದರು. ಬಳಿಕ ತಾವು ಕಟ್ಟಿಕೊಂಡು ತಂದಿದ್ದ ಬುತ್ತಿಯನ್ನು ಬಿಚ್ಚಿ ಅಲ್ಲಿಯೇ ಊಟ ಮಾಡಿದರು.
ಚನ್ನಮ್ಮ ವೃತ್ತದಲ್ಲಿ ಬಹಳ ಹೊತ್ತು ಪ್ರತಿಭಟನೆ ನಡೆಸುತ್ತ ಮಾನವ ಸರಪಳಿ ನಿರ್ಮಿಸಿದ್ದರಿಂದ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಸುಮಾರು ಹೊತ್ತು ರಸ್ತೆ ಮೇಲೆ ರೈತರು ಪ್ರತಿಭಟನೆ ನಡೆಸುತ್ತಿದ್ದರಿಂದ ಜನಸಂಚಾರಕ್ಕೆ ಅಡಚಣೆ ಉಂಟಾಯಿತು. ಪೊಲೀಸರು ಮನವೊಲಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಜೋರಾಗಿ ಮಳೆ ಶುರುವಾದಾಗ ರೈತರು ಓಡೋಡಿ ಕಂಪೌಂಡ್ ಹಾರಿ ಜಿಲ್ಲಾಧಿಕಾರಿ ಕಚೇರಿಯತ್ತ ಧಾವಿಸಿದರು. ಅಲ್ಲಿಯೇ ಸುಮಾರು 15-20 ರೈತರು ಘೋಷಣೆ ಕೂಗುತ್ತ ಧರಣಿ ನಡೆಸಿದರು. ಇನ್ನುಳಿದ ರೈತರು ಕಚೇರಿಯ ಮೆಟ್ಟಿಲುಗಳ ಮೇಲೆ ಕುಳಿತು ಪ್ರತಿಭಟಿಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೇರಿದ ರೈತರು ಒಲೆ ಹೊತ್ತಿಸಿ ಅಡುಗೆ ತಯಾರಿಸಿದರು. ರಾಜ್ಯದಲ್ಲಿ ಬಿಜೆಪಿಯ 25 ಸಂಸದರು ಇದ್ದರೂ ನೆರೆ ಪರಿಹಾರ ಕಲ್ಪಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರೈತರು, ಸಂತ್ರಸ್ತರ ಬಗ್ಗೆ ಕರುಣೆ ತೋರುತ್ತಿಲ್ಲ ಎಂದು ಆರೋಪಿಸಿ ರಾಜ್ಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಹೋರಾತ್ರಿ ಧರಣಿ ಮುಂದುವರಿಸಿದ್ದಾರೆ.
Advertisement
ರೈತರು ಬಾರಕೋಲುಗಳನ್ನು ರಸ್ತೆ ಮೇಲೆ ಬಾರಿಸುತ್ತ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ನೆರೆ ಸಂತ್ರಸ್ತತರಿಗೆ ಪರಿಹಾರ ಒದಗಿಸಬೇಕು. ಬೆಳೆ ಹಾನಿಯಾದ ಎಕರೆಗೆ 1.50 ಲಕ್ಷ ರೂ. ಪರಿಹಾರ ನೀಡಬೇಕು. ಸಾವಿಗೀಡಾದ ಹಸು, ಎತ್ತು, ಎಮ್ಮೆಗೆ 80 ಸಾವಿರ ರೂ., ಆಡು, ಕುರಿಗೆ 25 ಸಾವಿರ ರೂ. ನೀಡಬೇಕು. ಸಂಪೂರ್ಣ ಹಾನಿಯಾದ ಮನೆಗಳಿಗೆ ಮನೆಗಳಿಗೆ 15 ಲಕ್ಷ ರೂ. ಭಾಗಶಃ ಮನೆ ಹಾನಿಯಾದವರಿಗೆ 10 ಲಕ್ಷ ರೂ. ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಪ್ರಧಾನಿ ಮೋದಿ-ಸಂಸದರನ್ನು ಚಪ್ಪಲಿಗೆ ಹೋಲಿಸಿ ಹರಾಜು ಹಾಕಿದ ರೈತರು:
ನೆರೆ ಸಂತ್ರಸ್ತರಿಗೆ ಪರಿಹಾರ ಕೊಡಲು ಮೀನಾಮೇಷ ಎಣಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಎಲ್ಲ ಸಂಸದರನ್ನು ಚಪ್ಪಲಿಗೆ ಹೋಲಿಸಿ ಹರಾಜು ಹಾಕುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರೈತ ಮಹಿಳೆ ಜಯಶ್ರೀ ಗುರವಣ್ಣವರ ಅವರು ಚಪ್ಪಲಿಗಳನ್ನು ಎತ್ತಿ ಹಿಡಿಯುತ್ತ ಪೈಸೆ ಪೈಸೆಗೆ ಹರಾಜು ಹಾಕಿದರು. ಚಪ್ಪಲಿಗೆ ಹೋಲಿಸುತ್ತ ಪೈಸೆ ಮೊತ್ತದಲ್ಲಿ ಹರಾಜು ಹಾಕಿದರು. ಮೋದಿ ಹೆಸರು ಹೇಳಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುತ್ತಾ ಚಪ್ಪಲಿ ಎತ್ತಿ 1.10 ರೂ.ಗೆ ಹರಾಜು ಹಾಕಿದರು. ಇನ್ನುಳಿದ ರೈತರೂ ಇದಕ್ಕೆ ಧ್ವನಿಗೂಡಿಸಿದರು.
ರೈತರ-ಡಿಸಿ ನಡುವಿನ ಸಂಧಾನ ವಿಫಲ: ನೆರೆ ಪರಿಹಾರಕ್ಕಾಗಿ ಆಗ್ರಹಿಸಿ ರೈತರ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಸೋಮವಾರ ರಾತ್ರಿ ಭೇಟಿ ನೀಡಿ ರೈತರೊಂದಿಗೆ ನಡೆಸಿದ ಸಂಧಾನ ವಿಫಲವಾಗಿದೆ. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಜಿಲ್ಲಾಕಾರಿಗಳು ಭೇಟಿ ನೀಡಿ ಮಾತುಕತೆ ನಡೆಸಿದರು. ಸ್ಥಳಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬರುವಂತೆ ರೈತರು ಪಟ್ಟು ಹಿಡಿದಿದ್ದಾರೆ. ಮುಖ್ಯಮಂತ್ರಿ ಬರುವವರೆಗೂ ಪ್ರತಿಭಟನೆ ವಾಪಾಸ್ ಪಡೆಯುವುದಿಲ್ಲ ಎಂದ ರೈತರು, ಜಿಲ್ಲಾಧಿಕಾರಿಗಳ ಅವರ ಭರವಸೆಗೂ ಬಗ್ಗದ ರೈತರಿಂದ ಅಹೋರಾತ್ರಿ ಪ್ರತಿಭಟನೆ ಮುಂದುವರಿದಿದೆ.