ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧ ರೋಹಿತ್ ಚಕ್ರತೀರ್ಥ ಸಮಿತಿ ವರದಿಯನ್ನು ವಿರೋಧಿಸುತ್ತಿರುವ ಸಂಸ್ಥೆ ಹಾಗೂ ವ್ಯಕ್ತಿಗಳ ಜತೆ ಚರ್ಚಿಸಿ ಸರಕಾರ ತೀರ್ಮಾನ ಕೈಗೊಳ್ಳಬೇಕೇ ಹೊರತು ಏಕ ಪಕ್ಷೀಯ ನಿರ್ಧಾರ ಕೈಗೊಳ್ಳಬಾರದು.
ಈ ಹಿನ್ನೆಲೆಯಲ್ಲಿ ಮರುಪರಿಷ್ಕರಣೆ ವಿರೋ ಧಿಸುತ್ತಿರುವವರನ್ನು ಮಾತುಕತೆಗೆ ಆಹ್ವಾನಿಸಬೇಕೆಂದು ಹಿಂದಿನ ಸಮಿತಿ ಅಧ್ಯಕ್ಷ ಪ್ರೊ| ಬರಗೂರು ರಾಮಚಂದ್ರಪ್ಪ ಅವರು ಸರಕಾರವನ್ನು ಆಗ್ರಹಿಸಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧ ಶಿಕ್ಷಣ ಇಲಾಖೆಯು ಸರಕಾರಕ್ಕೆ ವರದಿ ನೀಡಿದೆ. ಆದರೆ, ಮರು ಪರಿಷ್ಕರಣೆಯು ದಲಿತ, ಮಹಿಳಾ ವಿರೋಧಿ, ಸಂವಿಧಾ ನಾತ್ಮಕ ನ್ಯಾಯ ಮತ್ತು ಸಮಾನೆಯತ ವಿರೋಧಿ ಕ್ರಮವಾಗಿದೆ. ರಾಷ್ಟ್ರೀಯ ಚೌಕಟ್ಟು ಗೌಣವಾಗಿದೆ. ಮಾತ್ರವಲ್ಲ, ಬಸವಣ್ಣ, ಕುವೆಂಪು ಅವರ ಆದರ್ಶದ ವಿರುದ್ಧವಿದೆ ಎಂದಿದ್ದಾರೆ.
ಮರು ಪರಿಷ್ಕರಣೆಯಲ್ಲಿ 9ನೇ ತರಗತಿ ಸಮಾಜ ವಿಜ್ಞಾನ ಭಾಗ-1ರಲ್ಲಿ ಬಸವಣ್ಣನವರು ವೈದಿಕ ಮೂಲ ಮೌಢ್ಯಾಚರಣೆಗಳನ್ನು ವಿರೋಧಿಸಿದ್ದು,ಯಜ್ಞೋಪವೀತವನ್ನು ಕಿತ್ತೆಸೆದದ್ದು, ಉನ್ನತಾಧಿಕಾರದಲ್ಲಿದ್ದರೂ ಚಳವಳಿ ಕಟ್ಟಿದ್ದು, “ದೇಹವೇ ದೇಗುಲ’ ಎಂಬ ಹೊಚ್ಚ ಹೊಸ ಪರಿಕಲ್ಪನೆ ನೀಡಿದ್ದು, ಸರಳ ಕನ್ನಡದಲ್ಲಿ ವಚನಕಾರರು ಬರೆದಿರುವ ವಿಚಾರಗಳನ್ನು ಮರು ಪರಿಷ್ಕರಣೆಯಲ್ಲಿ ಕೈಬಿಡಲಾಗಿದೆ.
ಕುವೆಂಪು ರಚಿತ 7 ಪಾಠಗಳನ್ನು 10ಕ್ಕೆ ಹೆಚ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಆದರೆ, ಈ ಸಂಖ್ಯೆಯಿಂದ ನಾಡಗೀತೆ, ನಾಡಧ್ವಜ ಮತ್ತು ಕನ್ನಡ ಭಾಷೆಗಳಿಗೆ ಮಾಡಿದ ಅವಮಾನಕ್ಕೆ ಖಂಡಿತ ರಿಯಾಯಿತಿ ಸಿಗುವುದಿಲ್ಲ ಎಂದು ಬರಗೂರು ಹೇಳಿದ್ದಾರೆ.