Advertisement

ಅಪರೂಪದ ಘಟನೆಗೆ ಸಾಕ್ಷಿಯಾದ ಬಾರಾಡಿ ಕಂಬಳ: ನಾಲ್ಕು ಬಾರಿ ನಡೆದ ಒಂದು ಸೆಮಿ ಫೈನಲ್ ಪಂದ್ಯ

10:10 AM Dec 16, 2019 | keerthan |

ಮಣಿಪಾಲ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೀಗ ಕಂಬಳದ ಕಹಳೆಯದ್ದೇ ಸದ್ದು. ಪ್ರತಿ ಶನಿವಾರ ಒಂದಲ್ಲ ಒಂದು ಕಡೆ ಕಂಬಳ ನಡೆಯುತ್ತಿದೆ. ಅಂತೆಯೇ ಡಿಸೆಂಬರ್ 14 ಮತ್ತು 15ರಂದು ಬಾರಾಡಿ ಬೀಡಿನಲ್ಲಿ ನಡೆದ ಸೂರ್ಯ ಚಂದ್ರ ಜೋಡುಕರೆ ಕಂಬಳ ಅಪರೂಪದ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ.

Advertisement

ದಾಖಲೆಯ 34 ನೇ ವರ್ಷದ ಬಾರಾಡಿ ಬೀಡು ಜೋಡುಕರೆ ಕಂಬಳದಲ್ಲಿ ಸುಮಾರು 156 ಜೋಡಿ ಕೋಣಗಳು ಭಾಗವಹಿಸಿದ್ದು, ಶನಿವಾರ ಬೆಳಿಗ್ಗೆ ಆರಂಭವಾಗಿತ್ತು. ಆರು ವಿಭಾಗದ ಕೋಣಗಳು ಜಿದ್ದಿಗೆ ಬಿದ್ದವರಂತೆ ಸ್ಪರ್ಧೆ ನೀಡಿ ಕಂಬಳದ ಮೆರುಗು ಹೆಚ್ಚಿಸಿದ್ದವು.

ಎಲ್ಲಾ ವಿಭಾಗದ ಕೋಣಗಳು ಸೆಮಿ ಫೈನಲ್ ಕೂಟ ಮುಗಿಸಿ ಅಂತಿಮ ಹಂತಕ್ಕೆ ಸಾಗುತ್ತಿದ್ದರೆ ಒಂದು ವಿಭಾಗದ ಸೆಮಿ ಫೈನಲ್ ಇನ್ನೂ ಮುಗಿದಿರಲಿಲ್ಲ. ಯಾಕೆಂದರೆ ಆ ವಿಭಾಗದ ಒಂದು ಸ್ಪರ್ಧೆ ಮತ್ತೆ ಮತ್ತೆ ಟೈ ಆಗುತ್ತಿತ್ತು.

ಅಡ್ಡಹಲಗೆ ವಿಭಾಗದಲ್ಲಿ ಸ್ಪರ್ಧಿಸಿದ್ದ ಹಂಕರ್ಜಾಲ್ ಭಿರ್ಮಣ್ಣ ಶೆಟ್ಟಿ  ಮತ್ತು ಬೋಳಾರ ತ್ರಿಶಾಲ್ ಪೂಜಾರಿಯವರ ಕೋಣಗಳು ಸೆಮಿ ಫೈನಲ್ ಸುತ್ತಿಗೇರಿದ್ದರು. ಆದರೆ ಸೆಮಿ ಫೈನಲ್ ಸ್ಪರ್ಧೆಯ ತೀವ್ರತೆ ಎಷ್ಟಿತ್ತೆಂದರೆ ಒಂದು ಬಾರಿಯ ಸೆಮಿ ಫೈನಲ್ ನಲ್ಲಿ ಪ್ರಕಟವಾಗಬೇಕಿದ್ದ ಫಲಿತಾಂಶ ನಾಲ್ಕು ಬಾರಿ ನಡೆಯಿತು. ಮೊದಲ ಮೂರು ಬಾರಿಯ ಓಟದಲ್ಲೂ ಎರಡು ಜೋಡಿ ಕೋಣಗಳೂ ಸರಿಸಮನಾಗಿ ಹೆಜ್ಜೆ ಹಾಕಿದ್ದವು. ಹೀಗಾಗಿ ಮೊದಲ ಮೂರು ಓಟದಲ್ಲೂ ವಿಜೇತರನ್ನು ಘೋಷಿಸಲಾಗಲಿಲ್ಲ.

ಮೂರು ಬಾರಿ ಸರಿ ಸಮನಾಡಿ ಓಡಿದ ಕೋಣಗಳಿಗೆ ನಾಲ್ಕನೇ ಬಾರಿಗೆ ಕರೆ ಬದಲಿ ಮಾಡಿ ಸ್ಪರ್ಧೆಗೆ ಅವಕಾಶ ನೀಡಲಾಯಿತು. ಮೊದಲ ಮೂರು ಓಟದಲ್ಲಿ ಸೂರ್ಯ ಕರೆಯಲ್ಲಿ ಓಡಿದ್ದ ಹಂಕರ್ಜಾಲು ಈಗ ಚಂದ್ರ ಕರೆಯಲ್ಲೂ, ಚಂದ್ರ ಕರೆಯಲ್ಲಿ ಓಡಿದ ಬೋಳಾರ ಸೂರ್ಯ ಕರೆಯಲ್ಲಿ ಓಡುವುದೆಂದು ತೀರ್ಮಾನಕ್ಕೆ ಬರಲಾಯಿತು. ಒಂದು ವೇಳೆ ನಾಲ್ಕನೇ ಬಾರಿಯೂ ಸರಿಸಮವೆಂದು ತೀರ್ಪು ಬಂದರೆ ಈರ್ವರನ್ನೂ ಜಂಟಿ ದ್ವಿತೀಯ ಸ್ಥಾನಿಯೆಂದು ಘೋಷಿಸುವ ನಿರ್ಧಾರಕ್ಕೆ ಬರಲಾಗಿತ್ತು. ( ಮತ್ತೊಂದು ಸೆಮಿ ಫೈನಲ್ ನಲ್ಲಿ ಮೋರ್ಲ ಗಿರೀಶ್ ಆಳ್ವರ ಕೋಣಗಳು ಫೈನಲ್ ಗೇರಿದ್ದವು)

Advertisement

ಮತ್ತೆ ನಾಲ್ಕನೇ ಬಾರಿಗೆ ಅದೇ ಕೋಣಗಳು ಕಂಬಳ ಕರೆಗೆ ಇಳಿದಾಗ ಸಮಸ್ಥ ಕಂಬಳಾಭಿಮಾನಿಗಳ ಚಿತ್ತ ಅತ್ತ ನೆಟ್ಟಿತ್ತು.’ ಅಲಾ ಬುಡಿಯೆರ್’ ಎಂದು ಕೇಳಿದಾಕ್ಷ ಮತ್ತೆ ಅದೇ ವೇಗದಲ್ಲಿ, ಅದೇ ಗಾಂಭೀರ್ಯದಿಂದ ಉಭಯ ಜೋಡಿಗಳು ಓಡಿದ್ದವು. ಪ್ರೇಕ್ಷಕರೆಲ್ಲಾ ಕಾತರದಿಂದ ನೋಡುತ್ತಿದ್ದಂತೆ ಮತ್ತೆ ಪೈಪೋಟಿಯಲ್ಲಿ ಓಡಿದರೂ ಅಂತಿಮವಾಗಿ ಕೂದಲೆಳೆ ಅಂತರದಲ್ಲಿ ಸೂರ್ಯ ಕರೆಯ ಬೋಳಾರ ತ್ರಿಶಾಲ್ ಪೂಜಾರಿಯವರ ಕೋಣಗಳು ಗೆಲುವಿನ ರೇಖೆ ಮುಟ್ಟಿದ್ದವು.

ಕಂಬಳ ಕೂಟದಲ್ಲಿ ಅಪರೂಪ ಎಂಬಂತೆ ನಡೆಯುವ ಈ ಘಟನೆ ಕಂಬಾಳಭಿಮಾನಿಗಳ ಮನಸ್ಸಿನಲ್ಲಿ ಅಚ್ಚೊತ್ತುವಂತೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next