Advertisement

ಜಾತ್ರೆಗೆ ಹೋಗೋಣ ಬಾರಾ!

03:45 AM Jan 27, 2017 | Team Udayavani |

ನೃತ್ಯದಲ್ಲಿ ಆಸಕ್ತಿ ಹೊಂದಿರುವ ನನ್ನ ಅಮ್ಮ ನನ್ನನ್ನು ಒಂದು ಒಳ್ಳೆಯ ನೃತ್ಯಗಾರ್ತಿಯನ್ನಾಗಿ ಮಾಡಬೇಕೆಂದು ತುಂಬಾನೇ ಆಸೆ ಇಟ್ಟುಕೊಂಡಿದ್ದಳು. ಅಂತೆಯೇ ನನ್ನನ್ನು ಭರತನಾಟ್ಯ, ಸಂಗೀತ, ಯಕ್ಷಗಾನ ಎಲ್ಲದಕ್ಕೂ ಸೇರಿಸಿ, ನನ್ನ ಪ್ರತಿಯೊಂದು ತರಗತಿಯ ದಿನವೂ, ತಪ್ಪದೇ ನನ್ನೊಂದಿಗೆ ಬರುವುದನ್ನು ರೂಢಿಸಿಕೊಂಡಿದ್ದಳು. ಮನೆಯ ದಿನಚರಿಯೊಂದಿಗೆ ನಾಳೆ ನನ್ನ ಮಗಳಿಗೆ ಯಾವ ತರಗತಿ ಇದೆ, ಅವಳಿಗಿಷ್ಟವಾದ ಯಾವ ತಿಂಡಿಯನ್ನು ಕೊಡುವುದು ಎಂದು ಮುಂಚಿನ ದಿನವೇ ತಲೆಕೆಡಿಸಿಕೊಂಡು, ಏನಾದರೂ ಹೊಸ ತಿಂಡಿಯ ಅನ್ವೇಷಣೆಯೊಂದಿಗೆ ನನ್ನನ್ನು ಖುಷಿಪಡಿಸುತ್ತಿದ್ದಳು. ಅದರಲ್ಲಿ ನನ್ನಣ್ಣನೋ ದೊಡ್ಡ ಹೊಟ್ಟೆಬಾಕ, ಅಷ್ಟೇ ಅಲ್ಲ ಅವನಿಗೆ ಈಗಿನ ಕಾಲದ ತಿಂಡಿಯೆಂದರೆ ಬಲು ಇಷ್ಟ. ಯಾವಾಗಲಾದರೊಮ್ಮೊಮ್ಮೆ ಅಮ್ಮ ಹೇಳುವುದುಂಟು, “”ಇದು ನನ್ನ ಅಜ್ಜಿಯ ಕಾಲದ ತಿಂಡಿ. ಇದರ ರುಚಿ ನೋಡಿ” ಎಂದಾಗ, ನನ್ನ ಅಣ್ಣನಿಗೆ ಏನೋ ಕಸಿವಿಸಿ. ಯಾಕೆಂದರೆ, ತಿನ್ನಲು ಇಷ್ಟ ಇಲ್ಲ. ಬೇಡೆವೆಂದರೆ ಅಮ್ಮ ಎಲ್ಲಿ ಬೇಸರಿಸುವಳ್ಳೋ ಎಂದು ಆಚೀಚೆ ನೋಡಿ ಸ್ವಲ್ಪವೇ ತಿಂದು ಮೆಲ್ಲನೆ ನನ್ನ ತಟ್ಟೆಗೆ ಸುರಿದು, ಅಮ್ಮ ವಾಕಿಂಗ್‌ಗೆ ಹೋದದ್ದನ್ನು ಖಚಿತಪಡಿಸಿಕೊಂಡು ಒಳಹೊØàಗಿ ಡಬ್ಬದಲ್ಲಿದ್ದ ಕರ್‌ಕುರ್‌ಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ.

Advertisement

ಇನ್ನು ಅಪ್ಪನ ಕತೆಯೇ ಬೇರೆ, ಅತ್ತ ಅಮ್ಮನಿಗೂ ಅಲ್ಲ ಇತ್ತ ನಮಗೂ ಅಲ್ಲ, ತಟಸ್ಥನೆಂಬಂತೆ ತಿಂಡಿ ತಿಂದು ಅಲ್ಲಿಂದ ಮೆಲ್ಲನೆ ಜಾಗ ಖಾಲಿ ಮಾಡುತ್ತಿದ್ದರು. ಒಮ್ಮೊಮ್ಮೆ “”ನಮ್ಮ ಕಾಲದಲ್ಲಿದ್ದ ತಿಂಡಿಗೂ, ಈಗಿನ ನಿಮ್ಮ ತಿಂಡಿಗೂ ತುಂಬಾನೇ ವ್ಯತ್ಯಾಸವಿದೆ. ಆಗಿನ ತಿಂಡಿಗಳಲ್ಲಿ ದೇಹಕ್ಕೆ ಯಾವ ಹಾನಿಯೂ ಇಲ್ಲ. ಈಗಿನ ಬಾಯಿ ರುಚಿ ಹೊಟ್ಟೆ ಖಾಲಿ, ಅಷ್ಟೇ ಯಾಕೆ ಅದರಿಂದ ಆಗುವ ಹಾನಿ ನಿಮಗೀಗ ಅರ್ಥ ಆಗುವುದಿಲ್ಲ” ಎಂದು ನಯವಾಗಿ ತಿಳಿ ಹೇಳುವುದು. ಇನ್ನು ಮ್ಯಾಗಿ ಮಾಡಿದರಂತೂ ಅಷ್ಟೇ ಮುಗಿಯಿತು. ನಾನು ನನ್ನ ಅಜ್ಜಿಯ ಹತ್ತಿರ ತಂದು ತಿಂದರೆ ಅಜ್ಜಿ, “”ಅದೇನೋ ಎರೆಹುಳುವಿನ ತರ ಇದೆ. ಸ್ವಲ್ಪಆಚೆ ಕೊಂಡ್ಹೊàಗಿ ತಿನ್ನಬಾರದಾ” ಎಂದು ನಗುವುದುಂಟು. ಅವರೇನೋ ತುಂಬಾನೇ ಸಂಸ್ಕಾರವಂತರು, “”ಅದನ್ನೆಲ್ಲಾ ಯಾಕೆ ಮಕ್ಕಳಿಗೆ ಕೊಡುವುದು?” ಎಂದು ನಯವಾಗಿಯೇ ಅಪ್ಪನಿಗೆ ಹೇಳುವುದುಂಟು. 

ನನ್ನನ್ನು ಹತ್ತಿರ ಕರೆದು ಕುಳ್ಳಿರಿಸಿ ಅವರ ಕಾಲದ ನೆನಪುಗಳನ್ನು ಮೆಲುಕು ಹಾಕುತ್ತಾ, “”ನಮ್ಮ ಕಾಲದಲ್ಲಿ ಈಗಿನ ಹಾಗೆ ಅಂಗಡಿಯಿಂದ ಇಂತಹ ತಿಂಡಿಗಳನ್ನು ತಂದು ತಿನ್ನುವ ಪದ್ಧತಿ ಇರಲಿಲ್ಲ. ಮಳೆಗಾಲದಲ್ಲಿ ಬಿಸಿಬಿಸಿ ಬೆಲ್ಲದ ಕಾಫಿಯ ಜೊತೆಗೆ ಹಲಸಿನ ಹಪ್ಪಳ ಬೆಂಕಿಯಲ್ಲಿ ಸುಟ್ಟು ತಿನ್ನುವುದಿತ್ತು. ಅದರ ರುಚಿಯೇ ಬೇರೆ, ನಿಮಗಿದೆಲ್ಲಾ ಇನ್ನೂ ಅಜ್ಜಿ ಹೇಳಿದ ಕತೆ ಎಂದು ಹೇಳುವ ಕಾಲ ದೂರವಿಲ್ಲ” ಎನ್ನುವಾಗ, “”ಬೆಂಕಿ ನೋಡಲು ಅಜ್ಜಿ ಮನೆಗೆ ಬರಬೇಕಷ್ಟೆ ಈ ಮಕ್ಕಳು, ಇನ್ನು ಇದೆಲ್ಲಾ ಹೇಗೆ ಗೊತ್ತಾಗಬೇಕು” ಎಂದು ನಯವಾಗಿ ಅಜ್ಜಿಗೆ ಸಮಾಧಾನಿಸುವರು ನಮ್ಮಪ್ಪ.

ಒಂದು ಸಾರಿ ನಮ್ಮೂರಿನ ಜಾತ್ರೆ. ಜಾತ್ರೆಯೆಂದರೆ ಕೇಳಬೇಕೇ? ಅದು ಒಂದಲ್ಲ, ಎರಡಲ್ಲ, 5 ದಿನದ ಜಾತ್ರೆ. ಪ್ರತಿದಿನವೂ ಸಾಂಸ್ಕೃತಿಕ ವೇದಿಕೆಯಲ್ಲಿ ಬೇರೆ ಬೇರೆ ಕಾರ್ಯಕ್ರಮಗಳಿರುತ್ತಿತ್ತು. ಅದರಲ್ಲಿ ಎರಡನೇ ದಿನ ಭರತನಾಟ್ಯ ಕಾರ್ಯಕ್ರಮ. ನನ್ನಮ್ಮನಿಗೇನೂ ಸಂಭ್ರಮ. ಒಂದು ಗಂಟೆಯ ವಾಕಿಂಗ್‌ ಆದಿನ ಅರ್ಧ ಗಂಟೆಗೆ ಮುಗಿಯಿತು. ನೋಡಲು ಧೈರ್ಯವಂತೆಯಂತಿದ್ದ ನನ್ನಮ್ಮ. ಅಪ್ಪನೆದುರು ಬರುವಾಗ ರಾಜನೆದುರು ಸೈನಿಕ ಬಂದು ನಿಂತಂತಿತ್ತು. 

“ಇವತ್ತು ಬಹಳ ಒಳ್ಳೆಯ ನೃತ್ಯ ಕಾರ್ಯಕ್ರಮ ಇದೆಯೆಂತೆ, ಎದುರು ಮನೆಯವರು, ನಾವಂತೂ ಹೋಗ್ತಿàವಪ್ಪಾ ನೀವು ಹೋಗಲೇ” ಅಂತ ನನ್ನನ್ನು ಕೇಳಿದ್ರು. ನಾನು “”ಆದ್ರ ಹೋಗೋದು” ಅಂತ ಅಂದೆ. ಅಂತ ಒಂದು ರಾಗ ತೆಗೆದರು. ಇದು ಅಪ್ಪನ ಗ್ರೀನ್‌ ಸಿಗ್ನಲಿಗೆ ಕಾಯುವ ಅಮ್ಮನ ಕಾತುರ ಅಂತ ನನಗೆ ತಿಳಿದೇ ಹೋಯ್ತು. ಈ ರೀತಿಯ ಅಮ್ಮನ ಒಕ್ಕಣೆಗೆ, “”ಹಾಂ, ನಾವೂ ಹೋದರಾಯಿತು, ಅದಕ್ಕೇನಂತೆ” ಅಂದಾಗ, ಅಮ್ಮನ ಒಳಗೊಳಗಿನ ಖುಷಿ ನನಗೆ ಅರ್ಥವಾಗದೇ ಇರಲಿಲ್ಲ.

Advertisement

ಹಾಗೂ ಹೀಗೂ ಎಲ್ಲರೂ ಜಾತ್ರೆಗೆ ಹೊರಟೆವು. ನಮ್ಮದೇನೋ ಹೊಸ ಕಾರು. ಅಪ್ಪನಿಗೆ ಕಾರನ್ನು ಎಲ್ಲಿ ನಿಲ್ಲಿಸೋದು? ಯಾರಾದರೂ ಒರೆಸಿಕೊಂಡು ಹೋದರೆ? ಎನ್ನುವ ಆತಂಕ. ಅಷ್ಟರಲ್ಲಿ ವಾಹನಪ್ರಿಯ ನನ್ನಣ್ಣ ಒಂದು ಜಾಗವನ್ನು ನೋಡಿಕೊಂಡು ಬಂದು ಅಲ್ಲಿ ಕಾರನ್ನು ಪಾರ್ಕ್‌ ಮಾಡಿಯೇ ಬಂದ.

ಇನ್ನು ಜಾತ್ರೆಯೆಂದರೆ ಕೇಳಬೇಕೆ? ಬೆಲೂನಿನ ರಾಶಿ ನೋಡಿದಾಗ ನಾನು ಮೆಲ್ಲನೆ ಅಲ್ಲಿ ನಿಂತೇ ಬಿಟ್ಟೆ. ಅದನ್ನರಿತ ನನ್ನ ಅಮ್ಮ ಮೆಲ್ಲನೆ ಗದರಿದಳು. “”ನೀನೇನು ಸಣ್ಣ ಮಗುವೇ? ಸುಮ್ಮನೆ ಬಾ. ಮೊದಲು ದೇವರ ದರ್ಶನ ಆಮೇಲೆ ಮಿಕ್ಕಿದ್ದೆಲ್ಲಾ” ಎಂದಳು. ಅಂತೆಯೇ ಸರತಿ ಸಾಲಲ್ಲಿ ನಿಂತು ದೇವರ ದರ್ಶನ ಮಾಡಿ, ಸೀದಾ ಸಾಂಸ್ಕೃತಿಕ ಕಾರ್ಯಕ್ರಮದತ್ತ ನಡೆದವು. ನನ್ನಣ್ಣನಿಗೇಕೋ ಸ್ವಲ್ಪ$ಬೋರ್‌ ಅನ್ನಿಸಿತು. ಅದನ್ನರಿತ ಅಪ್ಪಅಣ್ಣನನ್ನು ಕರೆದುಕೊಂಡು ಸಂತೆಯತ್ತ ಹೋದರು. ನಾನು ಮತ್ತು ಅಮ್ಮ ಕಾರ್ಯಕ್ರಮ ವೀಕ್ಷಿಸಲು ಎದುರಿನ ಸಾಲಲ್ಲಿ ಕುಳಿತೆವು. ಕೆಲ ನಿಮಿಷಗಳಲ್ಲೇ, ಜಾತ್ರೆಯ ಅಂಗವಾಗಿ ಪ್ರಖ್ಯಾತ ನೃತ್ಯ ತಂಡದವರಿಂದ ಭರತನಾಟ್ಯ ಕಾರ್ಯಕ್ರಮ, ಮೊದಲಿಗೆ ಈಗ ಪುಷ್ಪಾಂಜಲಿ ಪ್ರಸ್ತುತಪಡಿಸಲಿದ್ದಾರೆ, ನಮ್ಮ ತಂಡದ ಮೀನಾಕ್ಷಿ, ಸೋನಾಕ್ಷಿ, ಲೋಲಾಕ್ಷಿ, ಜಲಜಾಕ್ಷಿ ಎಂದು ಧ್ವನಿವರ್ಧಕದ ಮೂಲಕ ಪ್ರಸಾರವಾಯಿತು. ಅಷ್ಟರಲ್ಲಿ ಕತ್ತಲಾಗಿದ್ದ ವೇದಿಕೆಯಲ್ಲಿ ಒಮ್ಮೆಲೆ ಬಣ್ಣ ಬಣ್ಣದ ಕಣ್ಣು ಕೋರೈಸುವಂತಹ ಬೆಳಕು ಪ್ರಜ್ವಲಿಸುತ್ತಿದ್ದಂತೆ, ನೃತ್ಯಗಾತಿಯರು ವೇದಿಕೆಗೆ ಆಗಮಿಸಿ ನೃತ್ಯ ಆರಂಭಿಸಿಯೇ ಬಿಟ್ಟರು. ಅದರ ಹೆಜ್ಜೆಯ, ಗೆಜ್ಜೆಯ ಸದ್ದಿಗೆ ಕೂತಲ್ಲಿಯೇ ನನ್ನ ಕಾಲೂ ಹೆಜ್ಜೆ ಹಾಕುವಂತಿತ್ತು. ಅಷ್ಟರಲ್ಲಿ ನನ್ನ ಅಣ್ಣ, ನನಗೂ, ನನ್ನ ಅಮ್ಮನಿಗೂ ಚುರುಮುರಿ ತಂದು ಕೊಟ್ಟ. 

ನೃತ್ಯ ನೋಡುತ್ತಾ ಇನ್ನೇನು ಚುರುಮುರಿ ಬಾಯಿಗೆ ಹಾಕುವಷ್ಟರಲ್ಲಿ, ಒಂದು ಸಣ್ಣ ಹುಡುಗಿ, ಒಂದು ಕೈಯ್ಯಲ್ಲಿ 10-15 ಊದಿದ ಬೆಲೂನಿನ ಕಂತೆ, ಇನ್ನೊಂದು ಕೈಯಲ್ಲಿ ಸಣ್ಣ ಮಗುವನ್ನು ಹಿಡಿದುಕೊಂಡು ಬಂದು ನಿಂತಳು. ಅವಳ ಹರಿದ ಕೊಳಕಾದ ಬಟ್ಟೆ , ಕೆದರಿದ ಅಸ್ತವ್ಯಸ್ತವಾದ ಕೂದಲು ಅದನ್ನು ನೋಡಿದಾಗಲೇ ಅವಳು, ಎಂತಹ ಸಂಕಷ್ಟದಲ್ಲಿದ್ದಾಳೆಂದು ಸಾರಿ ಹೇಳುವಂತಿತ್ತು. “ಅಮ್ಮಾ’ ಎಂದು ಕೈಯನ್ನು ಮುಂದಕ್ಕೆ ಚಾಚಿ ಏನನ್ನೋ ಕೇಳುವಂತಿದ್ದಳು. ಇದನ್ನರಿತ ನನ್ನಮ್ಮ ಪರ್ಸಿನಿಂದ 10 ರೂವಿನ ಒಂದು ನೋಟನ್ನು ಅವಳ ಕೈಗಿತ್ತಳು. ತಕ್ಷಣ ಅದನ್ನು ತನ್ನ ಲಂಗದ ಜೇಬಿಗೆ ತುರುಕಿ, ನಮ್ಮ ಕೈಯಲ್ಲಿದ್ದ ಚುರುಮುರಿಯನ್ನು ಕೇಳಲು ತೊಡಗಿದಳು.ಅಮ್ಮನಿಗೆ ಏನನ್ನಿಸಿತೋ ಏನೋ, ನಮ್ಮಿಬ್ಬರ ಕೈಲಿದ್ದ ಕಟ್ಟಯನ್ನು ಒಟ್ಟು ಮಾಡಿ ಅವಳ ಕೈಗಿತ್ತರು. ತಕ್ಷಣ ಅದರಿಂದ ತನ್ನ ಬಾಯಿಗೊಮ್ಮೆ, ತನ್ನೊಂದಿಗಿದ್ದ ಮಗುವಿನ ಬಾಯಿಗೊಮ್ಮೆ ಹಾಕುತ್ತಾ, ವೇದಿಕೆಯ ಮುಂಭಾಗದ ಒಂದು ಬದಿಯಲ್ಲಿ ನಿಂತು, ವೇದಿಕೆಯಲ್ಲಿ ನಡೆಯುತ್ತಿದ್ದ ನೃತ್ಯವನ್ನು ದಿಟ್ಟಿಸಿ ನೋಡತೊಡಗಿದಳು. 

ಸಾಧಾರಣ ಒಂದು ಗಂಟೆಯ ತನಕವೂ ಅಲುಗಾಡದೆ ಸ್ತಬದ್ಧವಾಗಿ ನಿಂತ ಆ ಹುಡುಗಿಯನ್ನು ನೋಡಿದ ನಾನು ಆ ಕ್ಷಣ ನೃತ್ಯ ಕಾರ್ಯಕ್ರಮದ ವೀಕ್ಷಣೆಯಲ್ಲಿದ್ದೇನೆಂಬುದನ್ನೇ ಮರೆತಿದ್ದೆ. ನನ್ನ ಮನಸ್ಸು ಯಾವುದೋ ಲೋಕಕ್ಕೆ ಹೋಯಿತು. ಸಾಧಾರಣ 8-10 ವಯಸ್ಸಿನ ಆ ಹುಡುಗಿ ಒಂದು ಕೈಯ್ಯಲ್ಲಿ ತನ್ನ ರಕ್ತ ಹಂಚಿದ 2-3 ವರ್ಷದ ಒಂದು ಮಗು, ಇನ್ನೊಂದು ಕೈಯಲ್ಲಿ ಊದಿದ ಬೆಲೂನಿನ ಗೊಂಚಲು, ದೃಷ್ಟಿಯೇನೋ ಆ ಸುಂದರ ನೃತ್ಯದತ್ತ. ಏನಿದು ದೇವರ ಸೃಷ್ಟಿ , ಅಷ್ಟು ಸಣ್ಣ ವಯಸ್ಸಿಗೆ ಎಷ್ಟೊಂದು ಜವಾಬ್ದಾರಿ. ಆದರೆ, ಅವಳ ವಯಸ್ಸಿನದ್ದೇ ಮಕ್ಕಳು ಎಷ್ಟೊಂದು ಅಲಂಕೃತರಾಗಿ ವೇದಿಕೆಯಲ್ಲಿ ಕುಣಿಯುತ್ತಿದ್ದಾರೆ. “ನಾನ್ಯಾಕೆ  ಹೀಗಿದ್ದೇನೆ, ನಾನ್ಯಾವಾಗ ಅವರ ಥರ ಆಗುವುದು? ನನಗೂ ಅವರ ಥರ ಕುಣಿಯಬೇಕು, ಅವರ ಥರ ಮುಖಕ್ಕೆ ಬಣ್ಣ, ಅಂದದ ಉಡುಗೆ, ಎಷ್ಟೊಂದು ಅಲಂಕಾರ, ಎಷ್ಟೊಂದು ಪ್ರೇಕ್ಷಕರ ಕೇಂದ್ರ ಬಿಂದು ಅವರು? ಒಂದು ದಿನ ನಾನೂ ಅವರ ಜಾಗದಲ್ಲಿ ಹೋಗಿ ನಿಂತರೆ? ನಾನೆಷ್ಟು ಧನ್ಯ, ದೇವರೇ ನನಗ್ಯಾಕೆ ಈ ಶಿಕ್ಷೆ?’ ಎಂದೆಲ್ಲಾ ಆಲೋಚನೆಗಳು ಅವಳ ಮನಸ್ಸಲ್ಲಿ ಬಂದಿರಬಹುದೇನೋ? ಅಂತ ನನಗೆ ನಾನೇ ಪ್ರಶ್ನೆà ಮಾಡಿಕೊಂಡೆ. ನನ್ನ ಮನಸ್ಸಿಗೆ ತುಂಬಾನೆ ನೋವಾಯಿತು. ನೃತ್ಯ ಕಲಿಯುತ್ತಿರುವ ನಾನು ಮುಂದೊಂದು ದಿನ ಪರಿಪೂರ್ಣ ನೃತ್ಯಗಾರ್ತಿಯಾದಲ್ಲಿ ಇಂತಹ ನೊಂದ ಕೆಲವೇ ಮಕ್ಕಳಿಗಾದರೂ, ನನ್ನಿಂದಾಗುವಷ್ಟು ಉಚಿತ ವಿದ್ಯೆಯನ್ನು ಕಲಿಸುವೆನು, ಎಂದು ಮನಸ್ಸಿನಲ್ಲಿಯೇ ಶಪಥ ಮಾಡಿಕೊಂಡೆ. 

– ಋತ್ವಿಕಾ ಜೈನ್‌
9ನೇ ತರಗತಿ,  ಡಿ.ಜೆ.ಆಂಗ್ಲಮಾಧ್ಯಮ ಶಾಲೆ
ಮೂಡಬಿದ್ರೆ 

Advertisement

Udayavani is now on Telegram. Click here to join our channel and stay updated with the latest news.

Next