Advertisement

ಹದಿನಾರು ಕೆರೆಯಲ್ಲಿ ಅಪರೂಪದ ಹೆಬ್ಬಾತು ಪತ್ತೆ: ಅಂತಾರಾಷ್ಟ್ರಿಯ ಜರ್ನಲ್‌ನಲ್ಲಿ ವರದಿ

04:40 PM Jun 03, 2023 | Team Udayavani |

ಮೈಸೂರು: ಚಳಿಗಾಲ ಆರಂಭವಾಗುತ್ತಿದ್ದಂತೆ ದೇಶ ವಿದೇಶಗಳಿಂದ ಮೈಸೂರು ಭಾಗದ ಕೆರೆಗಳಿಗೆ ವಲಸೆ ಬರುವ ವಿದೇಶಿ ಬಾನಾಗಡಿಗಳ ಪೈಕಿ ಇದೇ ಮೊದಲ ಬಾರಿಗೆ ಲೆಸ್ಸರ್‌ ವೈಟ್‌ ಫ್ರಾಂಟೆಡ್‌ ಗೂಸ್‌ ಬಂದು ಹೋಗಿರುವುದು ಅಂತಾರಾಷ್ಟ್ರಿಯ ಜರ್ನಲ್‌ನಲ್ಲಿ ವರದಿಯಾಗಿದೆ.

Advertisement

ರಷ್ಯಾ ಮತ್ತು ಮಂಗೋಲಿಯ ಭಾಗದಲ್ಲಿ ಕಂಡು ಬರುವ ಹಾಗೂ ಅಳಿವಿನಂಚಿನಲ್ಲಿರುವ ಪಕ್ಷಿಗಳ ಗುಂಪಿಗೆ ಸೇರ್ಪಡೆಯಾಗಿರುವ ಲೆಸ್ಸರ್‌ ವೈಟ್‌ ಫ್ರಾಂಟೆಡ್‌ ಗೂಸ್‌ ಇದೇ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ವಿಹರಿಸಿರುವುದು ದಾಖಲಾಗಿದೆ. ಈ ಪಕ್ಷಿ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹದಿನಾರು ಗ್ರಾಮದ ಕೆರೆಯಲ್ಲಿ ಪಟ್ಟೆ ತಲೆಯ ಹೆಬ್ಬಾತಿನೊಂದಿಗೆ ಒಂದಷ್ಟು ತಿಂಗಳು ತಂಗಿ ಮತ್ತೆ ವಾಪಾಸಾಗಿರುವುದು ಪಕ್ಷಿ ಪ್ರೇಮಿಗಳಲ್ಲಿ ಆಶ್ಚರ್ಯ ಉಂಟುಮಾಡಿದೆ.

ಪಕ್ಷಿ ವೀಕ್ಷಕರ ಕಣ್ಣಿಗೆ ಕಾಣಿಸಿಕೊಂಡಿದೆ: ಚಳಿಗಾಲ ಆರಂಭವಾಗುತ್ತಿದ್ದಂತೆ ವಲಸೆ ಆರಂಭಿಸುವ ಯೂರೋಪ್‌ ಸೇರಿದಂತೆ ಪೂರ್ವ ಏಷಿಯಾ ರಾಷ್ಟ್ರಗಳ ವಿದೇಶಿ ಪಕ್ಷಿಗಳು ಹಳೇ ಮೈಸೂರು ಭಾಗಕ್ಕೆ ಲಗ್ಗೆ ಇಡುವುದು ಸಾಮಾನ್ಯ. ಈ ವಿದೇಶಿ ಬಾನಾಡಿಗಳಲ್ಲಿ ಪೆಲಿಕಾನ್‌, ಪಟ್ಟೆ ತಲೆಯ ಹೆಬ್ಟಾತು, ಗಾರ್ಗಿನಿ, ವಿಸ್ಕಟರ್ನ್, ನಾರ್ದಿನ್‌ ಶೋಲರ್‌ ಸೇರಿದಂತೆ ವಲಸೆ ಬಂದು, ಸ್ಥಳಿಯ ಕೆರೆಗಳಲ್ಲಿ ಸ್ವತ್ಛಂದವಾಗಿ ವಿಹರಿಸಿ ಚಳಿಗಾಲ ಮುಗಿಯುತ್ತಿದ್ದಂತೆ ತಮ್ಮ ಮೂಲ ಆವಾಸಸ್ಥಾನಕ್ಕೆ ತೆರಳುವುದು ವಾಡಿಕೆ. ಅದರಂತೆ ಈ ಬಾರಿಯೂ ಹದಿನಾರು ಕೆರೆಗೆ ನೂರಾರು ಸಂಖ್ಯೆ ಯಲ್ಲಿ ಆಗಮಿಸಿದ್ದ ವಿದೇಶಿ ಹೆಬ್ಟಾತುಗಳ ಜತೆಗೆ ಅಳಿವಿನಂಚಿನಲ್ಲಿರುವ ಲೆಸ್ಸರ್‌ ವೈಟ್‌ ಫ್ರಾಂಟೆಡ್‌ ಗೂಸ್‌ ಪಕ್ಷಿ ವೀಕ್ಷಕರ ಕಣ್ಣಿಗೆ ಕಾಣಿಸಿಕೊಂಡಿದೆ.

ಅಳಿವಿನಂಚಿನಲ್ಲಿರುವ ಪ್ರಭೇದ: ರಷ್ಯಾ ಮತ್ತು ಮಂಗೋಲಿಯಾ ಭಾಗದ ಈ ಹೆಬ್ಟಾತನ್ನು ಅಳಿವಿನಂಚಿನಲ್ಲಿರುವ ಪ್ರಭೇದಕ್ಕೆ ಸೇರಿಸಲಾಗಿದ್ದು, ಕೆಲವರ್ಷಗಳ ಹಿಂದೆ ಉತ್ತರ ಭಾರತದ ಕಾಶ್ಮೀರ, ಉತ್ತರ ಪ್ರದೇಶ್‌, ಪಶ್ಚಿಮ ಬಂಗಾಳ, ಬಿಹಾರ, ಅಸ್ಸಾಂ, ರಾಜಸ್ಥಾನ್‌, ಮಹಾರಾಷ್ಟ್ರ ಮತ್ತು ಗುಜರಾತ್‌ ರಾಜ್ಯದ ಕೆಲ ಭಾಗಗಳಲ್ಲಿ ಓಡಾಡಿರುವ ಬಗ್ಗೆ ದಾಖಲಾಗಿತ್ತು. ಆದರೆ ಈವರೆಗೆ ದಕ್ಷಿಣ ಭಾರತಕ್ಕೆ ಬಂದ ಯಾವ ದಾಖಲೆಯೂ ಇರಲಿಲ್ಲ. 2023ರ ಫೆಬ್ರವರಿ 10ರಂದು ಹದಿನಾರು ಕೆರೆಯಲ್ಲಿ ಪಟ್ಟೆತಲೆ ಹೆಬ್ಬಾತು (ಬಾರ್‌ ಹೆಡೆಡ್‌ಗೂಸ್‌) ಗುಂಪಿನೊಂದಿಗೆ ತಿಳಿಗೆಂಪು ಬಣ್ಣದ ಕೊಕ್ಕು, ಕಣ್ಣಿನ ಸುತ್ತ ಹಳದಿ ಬಣ್ಣದುಂಗುರ ಹೊಂದಿರುವ ಲೆಸ್ಸರ್‌ ವೈಟ್‌ ಫ್ರಾಂಟೆಡ್‌ ಗೂಸ್‌ ಪತ್ತೆಯಾಗಿದೆ ಎಂಬುದನ್ನು ಜರ್ನಲ್‌ ಆಫ್ ತ್ರೆಟೆಂಡ್‌ ಟ್ಯಾಕ್ಸಾ ಎಂಬ ಅಂತಾರಾಷ್ಟ್ರಿಯ ಜರ್ನಲ್‌ ತನ್ನ ವರಿದಿಯಲ್ಲಿ ಪ್ರಕಟಿಸಿದೆ.

ಅಪರೂಪದ ಹೆಬ್ಬಾತುಗಳು ಭೇಟಿ: ಚಳಿಗಾಲದಲ್ಲಿ ವಲಸೆ ಬರುವ ಹಕ್ಕಿಗಳಿಗೆ ಆಶ್ರಯ ನೀಡುವ ಮೈಸೂರು ಭಾಗದ ಹದಿನಾರು ಕೆರೆಗೆ ಹೆಬ್ಬಾತು ಜಾತಿಗೆ ಸೇರುವ ಗ್ರೇಟರ್‌ ವೈಟ್‌ ಫ್ರಾಂಟೆಡ್‌ ಗೂಸ್‌, ಸೈಬಿರಿಯನ್‌ ಸ್ಟೋನ್‌ ಚಾಟ್‌, ಗ್ರೇಲ್ಯಾಕ್‌ ಗೂಸ್‌, ಯೂರೋಪ್‌ನ ಗಾರ್ಗಿನಿ, ವಿಸ್ಕರ್ಡ್‌ ಟರ್ನ್, ನಾರ್ತಿನ್‌ ಶೋಲರ್‌, ಪಿಂಟೆಲ್‌ ಸೇರಿದಂತೆ ಹತ್ತಾರು ಅಪರೂಪದ ಹೆಬ್ಟಾತುಗಳು ಆಗಮಿಸಿವೆ.

Advertisement

ದೂರದ ರಷ್ಯಾ ಮತ್ತು ಮಂಗೋಲಿಯಾದಿಂದ ನಂಜನಗೂಡು ತಾಲೂಕಿನ ಹದಿನಾರು ಕೆರೆಗೆ 12ಸಾವಿರ ಕಿ.ಮೀ ದೂರ ಕ್ರಮಿಸಿರುವ ಈ ಹೆಬ್ಬಾತುಗಳು ತನ್ನ ವಿಶಿಷ್ಟ ಚಿಲಿಪಿಲಿ ಸದ್ದಿನಿಂದ ನೋಡುಗರನ್ನು ಗಮನ ಸೆಳೆಯುತ್ತವೆ. ಪ್ರತಿ ವರ್ಷ ಚಳಿಗಾಲ ಆರಂಭವಾಗುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ತಂಡೋಪ ತಂಡವಾಗಿ ಆಗಮಿಸುವುದು ವಿಶೇಷ.

ಹದಿನಾರು ಕೆರೆಗೆ ಆಪತ್ತು?
ಪ್ರತಿವರ್ಷ ಚಳಿಗಾಲದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬರುವ ವಿದೇಶಿ ಪಕ್ಷಿಗಳಿಗೆ ಆಶ್ರಯವಾಗಿರುವ ಹದಿನಾರು ಕೆರೆಗೆ ಆಪತ್ತು ಎದುರಾಗಿದೆ. ರಾಜ್ಯ ಸರ್ಕಾರ ಹದಿನಾರು ಗ್ರಾಮದ ವ್ಯಾಪ್ತಿಯಲ್ಲಿ ಕೈಗಾರಿಕ ಪ್ರದೇಶ ಮಾಡಲು ಕೃಷಿಭೂಮಿ ಮತ್ತು ಕೆರೆಕಟ್ಟೆಗಳನ್ನು ಸ್ವಾದೀನಕ್ಕೆ ಚಿಂತನೆ ನಡೆಸಿದೆ. ಒಂದು ವೇಳೆ ಈ ಭಾಗದಲ್ಲಿ ಕೈಗಾರಿಕ ಪ್ರದೇಶ ನಿರ್ಮಾಣವಾದರೆ ಕೆರೆ ತನ್ನ ಅಸ್ತಿತ್ವ ಕಳೆದುಕೊಳ್ಳುವ ಅಪಾಯವಿದೆ ಎಂದು ಪರಿಸರವಾದಿ ರವೀಶ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರತಿವರ್ಷ ಚಳಿಗಾಲ ಆರಂಭವಾಗುತ್ತಿದ್ದಂತೆ ಆಹಾರ ಮತ್ತು ಸುರಕ್ಷತೆಯ ತಾಣ ಅರಸಿ ಹೆಬ್ಬಾತು ಪ್ರಭೇದದ ಹಲವು ಪಕ್ಷಿಗಳು ಸಾವಿರಾರು ಕಿ.ಮೀ. ದೂರದ ಭಾರತದ ವಿವಿಧ ಭಾಗಗಳಿಗೆ ವಲಸೆ ಬರುತ್ತವೆ. ಚಳಿಗಾಲ ಮುಗಿಯುತ್ತಿದ್ದಂತೆ ವಾಪಾಸ್‌ ತಮ್ಮ ಆವಾಸಸ್ಥಾನಕ್ಕೆ ತೆರಳುತ್ತವೆ. ಹೀಗೆ ಬಂದು ಹೋಗುವ ಪಟ್ಟೆತಲೆ ಹೆಬ್ಬಾತುಗಳ ಜತೆಗೆ ಅಳಿವಿನಂಚಿನಲ್ಲಿರುವ ಲೆಸ್ಸರ್‌ ವೈಟ್‌ ಫ್ರಾಂಟೆಡ್‌ ಗೂಸ್‌ ಹದಿನಾರು ಕೆರೆಗೆ ಆಗಮಿಸಿರುವುದು ದಾಖಲಾಗಿದೆ. ಹೀಗಾಗಿ ವಲಸೆ ಪಕ್ಷಿಗಳಿಗೆ ಹದಿನಾರು ಕೆರೆ ಸುರಕ್ಷಿತತಾಣ ಎಂಬುದು ಸ್ಪಷ್ಟವಾಗಿದ್ದು, ಈ ಕೆರೆಯನ್ನು ಸರ್ಕಾರ ಸಂರಕ್ಷಿತ ಪ್ರದೇಶ ಎಂದು ಘೋಷಿಸಬೇಕಿದೆ.
-ಸ್ನೇಕ್‌ ಶಿವು, ಪಕ್ಷಿ ವೀಕ್ಷಕ ಮೈಸೂರು

-ಸತೀಶ್‌ ದೇಪುರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next