Advertisement

ವೈದ್ಯಕೀಯ ತ್ಯಾಜ್ಯ ವಿಲೇವಾರಿಗೆ ಬಾರ್‌ ಕೋಡಿಂಗ್‌

03:36 PM Sep 04, 2019 | Suhan S |

ಬೆಳಗಾವಿ: ವೈದ್ಯಕೀಯ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಮಾಡುವ ನಿಟ್ಟಿನಲ್ಲಿ ಬಾರ್‌ ಕೋಡಿಂಗ್‌ ವ್ಯವಸ್ಥೆ ಅಳವಡಿಸಿಕೊಳ್ಳಲು 15 ದಿನಗಳ ಅವಕಾಶ ನೀಡಲಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ರಾಜ್ಯ ಸಮಿತಿಯ ಅಧ್ಯಕ್ಷ ನ್ಯಾಯಮೂರ್ತಿ ಸುಭಾಷ್‌ ಅಡಿ ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಸ್ಥಳೀಯ ಸಂಸ್ಥೆಗಳ ಒಪ್ಪಿಗೆಯ ಮೇರೆಗೆ ಕ್ಲಿನಿಕ್‌ಗಳಿಗೆ ಅನುಮತಿ ನೀಡಬೇಕು ಮತ್ತು ವೈದ್ಯಕೀಯ ತ್ಯಾಜ್ಯ ವಿಲೇವಾರಿಗೆ ಸೂಕ್ತ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ ಎಂದರು.

ಕಸ ವಿಲೇವಾರಿ ಖರ್ಚು ಕಡಿಮೆ ಮಾಡಲು ವಾರ್ಡ್‌ವಾರು ಮೈಕ್ರೋ ಯೋಜನೆ ರೂಪಿಸಬೇಕು. ಇದಕ್ಕೆ ಬೇಕಾದ ಸ್ಥಳ ಗುರುತಿಸಿ ಸ್ಥಳೀಯವಾಗಿಯೇ ಹಸಿ ಕಸ ಸಂಗ್ರಹಿಸಿ ನಂತರ ಅಲ್ಲಿಯೇ ಕಾಂಪೋಸ್ಟ್‌ ಮಾಡಬೇಕು. ಇದೇ ರೀತಿ ವಿಶ್ವವಿದ್ಯಾಲಯ, ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ದೊಡ್ಡ ಪ್ರಮಾಣದ ಕಸವನ್ನು ಆಯಾ ಸಂಸ್ಥೆಗಳ ಆವರಣದಲ್ಲಿಯೇ ವಿಲೇವಾರಿ ಮಾಡಲು ಅನುಕೂಲವಾಗುವಂತೆ ಅಲ್ಲಿಯೇ ಘಟಕಗಳನ್ನು ಸ್ಥಾಪಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

2016 ಘನತ್ಯಾಜ್ಯ ವಿಲೇವಾರಿ ನಿಯಮಾವಳಿ ಅನ್ವಯ ಪ್ರತಿ ಸ್ಥಳೀಯ ಸಂಸ್ಥೆಯು ಎರಡು ವರ್ಷಗಳಲ್ಲಿ ತ್ಯಾಜ್ಯ ವಿಲೇವಾರಿ ನಿರ್ವಹಣೆ ವ್ಯವಸ್ಥೆ ಮಾಡಬೇಕಿತ್ತು. ಇದಾದ ಬಳಿಕ ಆರು ತಿಂಗಳು ಅವಧಿ ವಿಸ್ತರಣೆ ಮಾಡಲಾಗಿತ್ತು. ಅದರ ಸಮಯವಕಾಶವೂ ಮೀರಿದೆ. ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಭಾರೀ ಪ್ರಮಾಣದ ಹಾನಿ ಉಂಟಾಗಿರುವುದರಿಂದ ಸ್ವಲ್ಪ ಕಾಲಾವಕಾಶ ನೀಡಿ ಅಂತಿಮ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.

ಇ -ತ್ಯಾಜ್ಯ ವಿಲೇವಾರಿಗೆ ಸಹ ಪ್ರತ್ಯೇಕವಾಗಿ ಒಂದು ಘಟಕ ಸ್ಥಾಪಿಸಿ ನಿಯಮಾವಳಿ ಪ್ರಕಾರ ವಿಲೇವಾರಿಗೆ ನಿರ್ದೇಶನ ನೀಡಲಾಗಿದೆ. ಇ ತ್ಯಾಜ್ಯ ವಿಲೇವಾರಿ ಆಯಾ ಕಂಪನಿಗಳ ಹೊಣೆಗಾರಿಕೆಯಾಗಿದ್ದು ಒಂದು ವೇಳೆ ಮಹಾನಗರ ಪಾಲಿಕೆ ವಿಲೇವಾರಿ ಮಾಡುವುದಾದರೆ ಸಂಬಂಧಪಟ್ಟ ಕಂಪನಿಗಳು ಹಣ ಪಾವತಿಸಬೇಕಾಗುತ್ತದೆ ಎಂದರು.

Advertisement

ಬೆಳಗಾವಿ ನಗರದಲ್ಲಿ ಕಸ ವಿಲೇವಾರಿ ಹಾಗೂ ಅದರ ನಿರ್ವಹಣೆಯ ಬಗ್ಗೆ ಇನ್ನೂ ಜನ ಜಾಗೃತಿ ಸರಿಯಾಗಿ ಆಗಿಲ್ಲ. ಇನ್ನೂ ವ್ಯಾಪಕ ಪ್ರಮಾಣದಲ್ಲಿ ಇದರ ತಿಳಿವಳಿಕೆ ಮೂಡಿಸಬೇಕಿದೆ. ಬೆಳಗಾವಿ ಸ್ಮಾರ್ಟ್‌ ಸಿಟಿ ಆಗಬೇಕಾದರೆ ಎಲ್ಲ ಬಗೆಯ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಲೇಬೇಕಿದೆ. ಹಸಿ, ಒಣ ಕಸ ಹಾಗೂ ಅಪಾಯಕಾರಿ ಕಸ ಸಮಗ್ರ ನಿರ್ವಣೆಗೆ ಒಂದು ಕಮಾಂಡ್‌ ಸೆಂಟರ್‌ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಲಾಗಿದೆ. ಇಲ್ಲದಿದ್ದರೆ ಸ್ಮಾರ್ಟ್‌ಸಿಟಿ ಯೋಜನೆಯಿಂದ ಇದು ಹೊರಗಡೆ ಉಳಿಯಬಹುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪಾಲಿಕೆಯ ಆಯುಕ್ತ ಅಶೋಕ ದುಡಗುಂಟಿ, ವಿಜಯಕುಮಾರ್‌ ಹೊನಕೇರಿ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ನ್ಯಾಯಮೂರ್ತಿ ಸುಭಾಷ್‌ ಅಡಿ ಅವರು ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಪರಿಸರ ಅಭಿಯಂತರ ಸಭೆ ನಡೆಸಿ ಜಿಲ್ಲೆಯಲ್ಲಿ ತ್ಯಾಜ್ಯ ವಿಲೇವಾರಿಯ ಪ್ರಗತಿ ಪರಿಶೀಲಿಸಿದರು.

ಪ್ಲಾಸ್ಟಿಕ್‌ ನಿಷೇಧ ಕಡ್ಡಾಯ: ನ್ಯಾಯಮೂರ್ತಿ ಸುಭಾಷ್‌ ಅಡಿ

ಪ್ಲಾಸ್ಟಿಕ್‌ ಬಳಕೆಯನ್ನು ಈಗಾಗಲೇ ನಿಷೇಧಿಸಲಾಗಿದೆ. ನಿಯಮಾವಳಿ ಪ್ರಕಾರ ಪ್ಲಾಸ್ಟಿಕ್‌ ಬಳಕೆ ನಿಷೇಧಕ್ಕೆ ಗ್ರಾಮ ಪಂಚಾಯತಿ ಯಿಂದ ಮಹಾನಗರ ಪಾಲಿಕೆಯ ಎಲ್ಲ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ. ನಿಯಮಾವಳಿ ಉಲ್ಲಂಘಿಸಿದರೆ ದಂಡ ವಿಧಿಸಬೇಕು. ಮುಂದಿನ 15 ದಿನಗಳಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದಾಗಿ ಅಧಿಕಾರಿಗಳು ಮಾತು ಕೊಟ್ಟಿದ್ದಾರೆ ಎಂದು ನ್ಯಾಯಮೂರ್ತಿಗಳು ಹೇಳಿದರು. ಪಿಒಪಿ ಗಣೇಶ ತಯಾರಿಕೆ ಹಾಗೂ ಅದರ ಬಳಕೆಯ ಬಗ್ಗೆ ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿದೆ. ಮುಖ್ಯವಾಗಿ ಬೆಂಗಳೂರು ನಗರದಲ್ಲಿ ಈ ಆಂದೋಲನಕ್ಕೆ ಬಹಳ ದೊಡ್ಡ ಯಶಸ್ಸು ಸಿಕ್ಕಿದೆ. ಅದೇ ರೀತಿ ಜಾಗೃತಿ ಈ ಭಾಗದಲ್ಲೂ ಆಗಬೇಕು ಎಂದು ನ್ಯಾಯಮೂರ್ತಿ ಸುಭಾಷ್‌ ಅಡಿ ಹೇಳಿದರು.
ಪಾಲಿಕೆ ಸೇರಿದಂತೆ ಜಿಲ್ಲೆಯ ಎಲ್ಲ 33 ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಪ್ರತಿದಿನ ಹಸಿ ಕಸ ಸಂಗ್ರಹಿಸಬೇಕು. ಒಣ ಕಸವನ್ನು ವಾರದಲ್ಲಿ ಒಮ್ಮೆ ಸಂಗ್ರಹಿಸಬೇಕು. ವಾರ್ಡ್‌ವಾರು ಮೈಕ್ರೋ ಯೋಜನೆ ರೂಪಿಸಿ ಹಸಿ ಕಸವನ್ನು ಆಯಾ ವಾರ್ಡ್‌ಗಳಲ್ಲಿಯೇ ಕಾಂಪೋಸ್ಟ್‌ ಮಾಡಲು ಕ್ರಮ ತೆಗೆದುಕೊಂಡರೆ ತ್ಯಾಜ್ಯ ವಿಲೇವಾರಿ ಸಮರ್ಪಕವಾಗುತ್ತದೆ. ಈ ಬಗ್ಗೆ ಎಲ್ಲ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
Advertisement

Udayavani is now on Telegram. Click here to join our channel and stay updated with the latest news.

Next