ಬೆಂಗಳೂರು: ಕಂದಾಯ ದಾಖಲೆಗಳಲ್ಲಿ ಹೆದ್ದಾರಿ ಎಂದು ನಮೂದಾಗಿದ್ದರಿಂದ ಬಂದ್ ಮಾಡಲ್ಪಟ್ಟ ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತಲ ನಗರ ಪ್ರದೇಶ ಮಧ್ಯೆ ಇದ್ದ ಬಾರ್ ಮತ್ತು ರೆಸ್ಟೋರೆಂಟ್‌ಗಳು ಎರಡು ತಿಂಗಳ ನಂತರ ಮತ್ತೆ ಪುನರಾರಂಭಗೊಂಡಿವೆ.
ರಾಜ್ಯ ಅಬಕಾರಿ ಇಲಾಖೆಯು ನವೀಕರಣಕ್ಕೆ ಆನುಮತಿ ನೀಡಿದ ತಕ್ಷಣ ನಗರದ ಮಹಾತ್ಮಗಾಂಧಿ ರಸ್ತೆ, ಬ್ರಿಗೇಡ್ ರಸ್ತೆ, ಮೈಸೂರು ರಸ್ತೆ, ತುಮಕೂರು ರಸ್ತೆ ಸೇರಿದಂತೆ ಆ ವ್ಯಾಪ್ತಿಯ 2712 ಬಾರ್ ಅಂಡ್ ರೆಸ್ಟೋರೆಂಟ್‌ಗಳು ನವೀಕರಣ ಮಾಡಿಸಿಕೊಂಡಿದ್ದು, ವ್ಯಾಪಾರ- ವಹಿವಾಟು ಪ್ರಾರಂಭಿಸಿವೆ.
ಇದರೊಂದಿಗೆ ಎರಡು ತಿಂಗಳಿನಿಂದ ವ್ಯಾಪಾರ ಇಲ್ಲದೆ ಬಾರ್ ಅಂಡ್ ರೆಸ್ಟೋರೆಂಟ್ ಬಂದ್ ಮಾಡಿದ್ದ ಮಾಲೀಕರು ನಿಟ್ಟುಸಿರುವ ಬಿಟ್ಟಂತಾಗಿದೆ. ಎರಡು ತಿಂಗಳಿಂದ ಕೆಲಸ ಇಲ್ಲದೆ ಪರದಾಡುತ್ತಿದ್ದ ಬಾರ್ ಅಂಡ್ ರೆಸ್ಟೋರೆಂಟ್‌ಗಳ ನೌಕರರು ಮತ್ತೆ ಕೆಲಸಕ್ಕೆ ಮರಳಿದ್ದಾರೆ.
ಅಬಕಾರಿ ಇಲಾಖೆಯ ಅಂಕಿ-ಅಂಶದ ಪ್ರಕಾರ ಇದುವರೆಗೂ 2712 ಬಾರ್ ಅಂಡ್ ರೆಸ್ಟೋರೆಂಟ್‌ಗಳು ನವೀಕರಣ ಮಾಡಿಸಿಕೊಂಡಿದ್ದು, ಇನ್ನೂ 604 ಬಾರ್ ಅಂಡ್ ರೆಸ್ಟೋರೆಂಟ್‌ಗಳು ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಈ ಮಧ್ಯೆ, ಹೆದ್ದಾರಿ ಅಕ್ಕ -ಪಕ್ಕ 500 ಮೀಟರ್ ವ್ಯಾಪ್ತಿಯಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್‌ಗಳು ಮುಚ್ಚಬೇಕು ಎಂಬ ಆದೇಶ ಹಿನ್ನೆಲೆಯಲ್ಲಿ 2800 ಬಾರ್ ಅಂಡ್ ರೆಸ್ಟೋರೆಂಟ್‌ಗಳು ಬಾಧಿತವಾಗಿದ್ದು, ಕೆಲವು ಬಾರ್ ಅಂಡ್ ರೆಸ್ಟೋರೆಂಟ್‌ಗಳು ಸ್ಥಳಾಂತರಗೊಂಡು ಪರವಾನಗಿ ನವೀಕರಣಕ್ಕೆ ಅರ್ಜಿ ಸಲ್ಲಿಸಿವೆ. ಸುಮಾರು 661 ಮದ್ಯದ ಅಂಗಡಿಗಳಿಗೆ ಪರ್ಯಾಯ ಜಾಗ ಸಿಗದ ಕಾರಣ ಇನ್ನೂ ಅರ್ಜಿಯನ್ನೇ ಸಲ್ಲಿಸಿಲ್ಲ ಎಂದು ಹೇಳಲಾಗಿದೆ.