Advertisement
ಮಲ್ಪೆ: ಮಲ್ಪೆ ಮೀನುಗಾರಿಕೆ ಮೂರನೇ ಹಂತದ ಬಾಪುತೋಟದ ಭಾಗದ ಬಂದರಿನ ರಸ್ತೆ ಬದಿಯಲ್ಲಿ ಆಳವಡಿಸಲಾದ ದಾರಿದೀಪಗಳು ಕಳೆದ ಮೂರು ತಿಂಗಳುಗಳಿಂದ ಉರಿಯದ ಪರಿಣಾಮ ರಾತ್ರಿ ಹಾಗೂ ನಸುಕಿನ ವೇಳೆ ಮೀನುಗಾರಿಕೆ ಚಟುವಟಿಕೆಗಳನ್ನು ನಡೆಸಲು ಮೀನುಗಾರರು ತೊಂದರೆಯನ್ನು ಅನುಭವಿಸುವಂತಾಗಿದೆ.
Related Articles
ಪಡುಕರೆ ಭಾಗವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯೂ ಇದಾಗಿದ್ದು, ರಾತ್ರಿ ಮತ್ತು ನಸುಕಿನ ವೇಳೆ ಮೀನುಗಾರಿಕೆ ಕೆಲಸಕ್ಕೆ ಬರುವ ಮಹಿಳೆಯರು ಭಯದ ವಾತಾವರಣದಲ್ಲಿ ನಡೆದುಕೊಂಡು ಬರುವ ಪರಿಸ್ಥಿತಿ ಇದೆ. ಮಾತ್ರವಲ್ಲದೆ ವಾಹನ ಸವಾರರೂ ಇಲ್ಲಿ ತೀವ್ರ ತೊಂದರೆಯನ್ನು ಅನುಭವಿಸುವಂತಾಗಿದೆ. ಈ ಬಗ್ಗೆ ಗಮನಹರಿಸಿ ದಾರಿದೀಪದ ಸಮಸ್ಯೆಯನ್ನು ತತ್‌ಕ್ಷಣ ಬಗೆಹರಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.
Advertisement
ಇದನ್ನೂ ಓದಿ:ನಡುರಸ್ತೆಯಲ್ಲಿ ದಂಡ ವಸೂಲಿ ಮಾಡುತ್ತಿದ್ದ ಪೊಲೀಸರಿಗೆ ಚಳಿ ಬಿಡಿಸಿದ ರಮೇಶ್ ಕುಮಾರ್
ಇತರ ಸಮಸ್ಯೆಗಳೇನು?ರಸ್ತೆ ಉದ್ದಕ್ಕೂ ಬೆಳೆದು ನಿಂತ ಗಿಡಗಂಟಿಗಳು
3ನೇ ಹಂತದ ಬಂದರು ಪ್ರದೇಶದ ರಸ್ತೆ ಉದ್ದಕ್ಕೂ ಗಿಡಗಂಟಿಗಳು ಎತ್ತರಕ್ಕೆ ಬೆಳೆದು ನಿಂತಿದ್ದು, ಈ ರಸ್ತೆಯ ತಿರುವಿನಲ್ಲಿ ಸಂಚರಿಸುವ ವಾಹನಗಳಿಗೆ ಎದುರು ಬದಿಯಿಂದ ಬರುವ ವಾಹನಗಳು ಕಾಣದೆ ಅಪಘಾತಗಳು ಸಂಭವಿಸುತ್ತಿವೆ. ಮಲ್ಪೆ ಮುಖ್ಯ ವೃತ್ತದಿಂದ 3ನೇ ಹಂತದ ಬಂದರು ಮತ್ತು ಪಡುಕರೆ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಪ್ರತಿನಿತ್ಯ ಇಲ್ಲಿ ಮೀನುಗಾರಿಕೆ ಸಂಬಂಧಿಸಿದಂತೆ ಸಾವಿರಾರು ಜನ ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಇನ್ನು ರಾತ್ರಿ ವೇಳೆ ಈ ರಸ್ತೆಯಲ್ಲಿ ವಾಹನ ಚಲಾಯಿಸುವುದು ಇನ್ನೂ ದುಸ್ತರವಾಗಿದೆ. ಸಮಸ್ಯೆ ಪರಿಹರಿಸಿ
ಪಡುಕರೆ ಭಾಗದಿಂದ ಮಲ್ಪೆಗೆ ಮೀನಿನ ಕೆಲಸಕ್ಕೆ ಪ್ರತಿನಿತ್ಯ ಸಾವಿರಾರು ಮಹಿಳೆಯರು ಮುಂಜಾನೆ 4ಗಂಟೆಗೆ ನಡೆದುಕೊಂಡು ಬರುತ್ತಾರೆ. ದಾರಿದೀಪ ಇಲ್ಲದ್ದರಿಂದ ಭಯದಿಂದಲೇ ನಡೆದಾಡುವಂತಾಗಿದೆ. ಬೋಟಿನಿಂದ ಮೀನು ಖಾಲಿ ಮಾಡಲು ಸಮಸ್ಯೆಯಾಗುತ್ತದೆ. ಸಂಬಂಧಪಟ್ಟವರು ತತ್‌ಕ್ಷಣ ಗಮನ ಹರಿಸಿ ಸಮಸ್ಯೆ ಪರಿಹರಿಸಬೇಕಾಗಿದೆ.
– ದಯಾಕರ ವಿ. ಸುವರ್ಣ, ಅಧ್ಯಕ್ಷರು, ಕನ್ನಿ ಮೀನುಗಾರರ ಸಂಘ, ಮಲ್ಪೆ ಶೀಘ್ರ ಕ್ರಮ
ಬಂದರಿನ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಶುಚಿತ್ವ, ದಾರಿದೀಪವನ್ನು ಆವರೇ ನಿರ್ವಹಿಸಬೇಕಾಗಿದೆ. ಈಗಾಗಲೇ ಉಂಟಾಗಿರುವ ಸಮಸ್ಯೆಯ ಬಗ್ಗೆ ಗುತ್ತಿಗೆದಾರರ ಗಮನಕ್ಕೆ ತಂದು ಆದಷ್ಟು ಬೇಗ ಸರಿಪಡಿಸುವಂತೆ ಸೂಚನೆ ನೀಡಲಾಗುವುದು.
– ಚಂದನ್, ಸಹಾಯಕ ನಿರ್ದೇಶಕರು, (ಪ್ರಭಾರ )ಮೀನುಗಾರಿಕೆ ಇಲಾಖೆ -ನಟರಾಜ್ ಮಲ್ಪೆ