Advertisement

ಬಾಪೂಜಿ ಸೇವಾ ಕೇಂದ್ರಗಳ ಕಂಪ್ಯೂಟರ್‌ಗಳಿಗೆ ಸೌರ ವಿದ್ಯುತ್‌: ಸಿಎಂ

03:45 AM Mar 24, 2017 | |

ವಿಧಾನಪರಿಷತ್ತು: ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳ ಬಾಪೂಜಿ ಸೇವಾ ಕೇಂದ್ರಗಳ ಕಂಪ್ಯೂಟರ್‌ಗಳಿಗೆ ಸೌರಶಕ್ತಿ ಬಳಸುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಪ್ರಶ್ನೋತ್ತರ ಅವಧಿಯಲ್ಲಿ ಪಕ್ಷೇತರ ಸದಸ್ಯ ಬಸವನಗೌಡ ಪಾಟೀಲ್‌ ಯತ್ನಾಳ್‌, ಗ್ರಾಮ ಪಂಚಾಯಿತಿಗಳಿಗೆ ಸರ್ಕಾರ ಕಂಪ್ಯೂಟರ್‌, ಇಂಟರ್‌ನೆಟ್‌ ಕೊಟ್ಟಿದೆ. ಆದರೆ, ಯಾವಾಗಲೂ ಸರ್ವರ್‌ ಡೌನ್‌ ಇರುತ್ತೇ, ಅದೇ ರೀತಿ ಹಳ್ಳಿಗಳಲ್ಲಿ ವಿದ್ಯುತ್‌ ಸಹ ಇರುವುದಿಲ್ಲ. ಆದ್ದರಿಂದ ಗ್ರಾಮ ಪಂಚಾಯಿತಿಗಳಿಗೆ ವೈಫೈ ನೀಡುವುದರ ಜೊತೆಗೆ ಕಂಪ್ಯೂಟರ್‌ ಬಳಕೆಗೆ ಸೌರಶಕ್ತಿ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಯಿಸಿದ ಮುಖ್ಯಮಂತ್ರಿಯವರು, ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಉಚಿತ ವೈ-ಫೈ ಸೌಲಭ್ಯ ಒದಗಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಕಿಯೋನಿಕ್ಸ್‌ ಮೂಲಕ ಖಾಸಗಿ ಸಹಭಾಗಿತ್ವದಲ್ಲಿ ಮೊದಲ ಹಂತದಲ್ಲಿ ರಾಜ್ಯದ 2,500 ಗ್ರಾಮ ಪಂಚಾಯಿತಿಗಳಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲು 2017-18ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಅದೇ ರೀತಿ ಕಂಪ್ಯೂಟರ್‌ಗಳಿಗೆ ಸೌರಶಕ್ತಿ ಬಳಸುವ ನಿಟ್ಟಿನಲ್ಲೂ ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಇ-ಆಡಳಿತ ಇಲಾಖೆಯು ನಾಗರಿಕ ಸ್ನೇಹಿ ಬೆಂಗಳೂರು-ಒನ್‌, ಕರ್ನಾಟಕ ಒನ್‌ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇದಕ್ಕಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ 209 ಲಕ್ಷ ರೂ. ವೆಚ್ಚ ಆಗಿದೆ. ಅಲ್ಲದೇ ಇಲಾಖೆಯು ವಿವಿಧ 38 ಇಲಾಖೆಗಳ 148 ವೆಬ್‌ಸೈಟ್‌ಗಳನ್ನು ನಿರ್ವಹಿಸುತ್ತಿದೆ. ಇವುಗಳ ನಿರ್ವಹಣೆಗೆ ವಾರ್ಷಿಕ 20 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. 30 ಜಿಲ್ಲಾಧಿಕಾರಿಗಳ ಕಚೇರಿ ಹಾಗೂ 7 ಜಿಲ್ಲಾ ಪಂಚಾಯಿತಿ ವೆಬ್‌ಸೈಟ್‌ಗಳನ್ನು ಕೇಂದ್ರ ಸ್ವಾಮ್ಯದ ಎನ್‌ಐಸಿ ನಿರ್ವಹಿಸುತ್ತಿದೆ. ಗ್ರಾಮ ಪಂಚಾಯಿತಿಗಳಲ್ಲಿ 4,023 ಬಾಪೋಜಿ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಇವುಗಳ ಮೂಲಕ ವಿವಿಧ 100 ಸೇವೆಗಳನ್ನು ನಾಗರಿಕರಿಗೆ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next