ವಿಜಯಪುರ: ಬಾನುಲಿಯು ಮನರಂಜನೆ ಮೂಲಕ ಮಾಹಿತಿಯನ್ನು ಜನರಿಗೆ ತಲುಪಿಸುವ ಉತ್ತಮ ಸಂವಹನ ಮಾಧ್ಯಮವಾಗಿದೆ ಎಂದು ಧಾರವಾಡದ ಸಂವಹನ ತಜ್ಞ ಸಿ.ಯು. ಬೆಳ್ಳಕ್ಕಿ ಅಭಿಪ್ರಾಯಪಟ್ಟರು. ಶುಕ್ರವಾರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಮಾಧ್ಯಮ ಮನೆ ಚಟುವಟಿಕೆ ಅಂಗವಾಗಿ ಹಮ್ಮಿಕೊಂಡಿದ್ದ ಬಾನುಲಿಯ
ಪ್ರಸ್ತುತತೆ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಉತ್ಸಾಹ ಮತ್ತು ಆಸಕ್ತಿಯನ್ನು ಹೊಂದಿದ್ದರೆ ನಮ್ಮಲ್ಲಿರುವ ಸೌಲಭ್ಯಗಳು ಪ್ರಯೋಜನಗೊಳ್ಳುತ್ತವೆ. ಪ್ರತಿಯೊಬ್ಬರಲ್ಲಿಯೂ ಪ್ರತಿಭೆ ಇರುತ್ತದೆ. ಅದನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಸಂವಹನಕಾರರಾಗಿ ಹೊರಹೊಮ್ಮಬೇಕು ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.
ಸಂವಹನ ಎಂಬುದು ಕಾಗದದಲ್ಲಿ ಹುಟ್ಟಿಲ್ಲ. ಅದು ಮನಸ್ಸಿನಿಂದ ಬರುವಂತಹ ಒಂದು ಅಸ್ತ್ರವಾಗಿದೆ. ಸಂವಹನ ಬೆಳೆಸಿಕೊಳ್ಳುವ ಮೊದಲು ವಿದ್ಯಾರ್ಥಿಗಳು ಓದುವ, ಬರೆಯುವ ಮತ್ತು ವ್ಯಕ್ತಪಡಿಸುವ ಕಲೆಯನ್ನು ಹೊಂದಿರಬೇಕು ಎಂದು ತಿಳಿಸಿದರು.
ಬಾನುಲಿ ಮಾಹಿತಿಯ ಜೊತೆಗೆ ಶಿಕ್ಷಣವನ್ನು ನೀಡುತ್ತದೆ. ದೇಶದಲ್ಲಿ ಪ್ರತಿದಿನ 35ರಿಂದ 37 ಕೋಟಿ ಜನರು ರೇಡಿಯೋ ಆಲಿಸುತ್ತಾರೆ. ಭಾರತದಲ್ಲಿ 700ಕ್ಕಿಂತ ಹೆಚ್ಚು ಬಾನುಲಿ ಕೇಂದ್ರಗಳಿವೆ, ಅದನ್ನು ಸರಿಯಾಗಿ ಬಳಸಿಕೊಳ್ಳುವ ಕಾರ್ಯವಾಗಬೇಕಿದೆ ಎಂದು ಹೇಳಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಓಂಕಾರ ಕಾಕಡೆ ಅಧ್ಯಕ್ಷತೆ ವಹಿಸಿದ್ದರು. ಛಾಯಾ ಕುಸುಗಲ್ ಸ್ವಾಗತಿಸಿದರು. ಸುಷ್ಮಾ ನಾಯಕ ಪರಿಚಯಿಸಿದರು. ಹರ್ಷಿತಾ ಪಾಟೀಲ ನಿರೂಪಿಸಿದರು. ಭಾಗ್ಯಶ್ರೀ ಕದಂ ವಂದಿಸಿದರು.