Advertisement

Bantwala: ಜಿಲ್ಲಾ ಅಧಿಕಾರಿಯಿಂದ ಗುತ್ತಿಗೆ ಸಂಸ್ಥೆಗೆ ನೋಟಿಸ್‌

02:30 AM Oct 27, 2024 | Team Udayavani |

ಬಂಟ್ವಾಳ: ದ.ಕ.ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಕಾರ್ಯ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರ ಸಂಪನ್ಮೂಲ ಸಿಬಂದಿಗೆ ಗುತ್ತಿಗೆ ವಹಿಸಿಕೊಂಡಿರುವ ಶಿವಮೊಗ್ಗ ಮೂಲದ ಮೆ| ಪ್ರೈವೇಟ್‌ ಎಂಪ್ಲಾಯ್‌ಮೆಂಟ್‌ ಬ್ಯುರೋ ಸಂಸ್ಥೆಯು ವೇತನ ಪಾವತಿಯಲ್ಲಿ ವಿಳಂಬ ಮಾಡುವ ಮೂಲಕ ಟೆಂಡರ್‌ ಷರತ್ತುಗಳನ್ನು ಉಲ್ಲಂಘನೆ ಮಾಡುತ್ತಿದೆ ಎಂದು ಆರೋಪಿಸಿ ಇಲಾಖೆಯ ದ.ಕ.ಜಿಲ್ಲಾ ಅಧಿಕಾರಿ ಬಿಂದಿಯಾ ನಾಯಕ್‌  ಸಂಸ್ಥೆಗೆ ನೋಟಿಸ್‌ ನೀಡಿ ಗುತ್ತಿಗೆ ಆದೇಶವನ್ನು ರದ್ದು ಪಡಿಸುವ ಎಚ್ಚರಿಕೆ ನೀಡಿದ್ದಾರೆ.

Advertisement

ಇಲಾಖೆ ವ್ಯಾಪ್ತಿಯ ಕಚೇರಿಗಳು, ವಿದ್ಯಾರ್ಥಿ ನಿಲಯಗಳು ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಸುಮಾರು 280 ಮಂದಿ ಹೊರ ಸಂಪನ್ಮೂಲ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಕರ್ತವ್ಯದಲ್ಲಿ ವ್ಯತ್ಯಯ ಉಂಟಾದರೆ ಇಲಾಖೆಯ ಜತೆಗೆ ಹಾಸ್ಟೆಲ್‌, ವಸತಿ ಶಾಲೆಗಳ ವಿದ್ಯಾರ್ಥಿಗಳಿಗೂ ತೊಂದರೆ ಉಂಟಾಗುತ್ತದೆ. ಸಿಬಂದಿ ನೇಮಕದ ಗುತ್ತಿಗೆ ನೀಡುವ ಸಂದರ್ಭದಲ್ಲಿ ಇಲಾಖೆ ಅನುದಾನ ವಿಳಂಬವಾದರೂ ಸಿಬಂದಿಗೆ ಮಾತ್ರ ಪ್ರತಿ ತಿಂಗಳ 5ನೇ ತಾರೀಕಿನೊಳಗೆ ವೇತನ ಪಾವತಿಗೆ ಬದ್ಧರಾಗಿರಬೇಕು ಎಂಬ ಷರತ್ತು ನೀಡಲಾಗಿತ್ತು.

ಸ್ಪಷ್ಟನೆ ನೀಡಲು ನೋಟಿಸ್‌
ಆದರೆ ತಮ್ಮ ಸಂಸ್ಥೆಯಿಂದ ಸಿಬಂದಿಗೆ ಸಕಾಲದಲ್ಲಿ ವೇತನ ಪಾವತಿಯಾಗುತ್ತಿಲ್ಲ ಎಂಬ ದೂರುಗಳು ಬರುತ್ತಿದ್ದು, ಈ ಕುರಿತು ತಾಲೂಕು ಅಧಿಕಾರಿಗಳು ಪ್ರಶ್ನಿಸಿದರೆ ತಮ್ಮ ಸಿಬಂದಿ ಹಾರಿಕೆಯ ಉತ್ತರವನ್ನು ನೀಡುತ್ತಿರುವುದು ಗಮನಕ್ಕೆ ಬಂದಿದೆ. ಜತೆಗೆ ಒಡಂಬಡಿಕೆ ಪತ್ರ ನೀಡಿಲ್ಲ, ದ.ಕ.ಜಿಲ್ಲೆಯಲ್ಲಿ ಕಚೇರಿ ತೆರೆಯಬೇಕು ಎಂಬ ನಿರ್ದೇಶನವಿದ್ದರೂ ಅದನ್ನೂ ಮಾಡಿಲ್ಲ.

ವೇತನ ಪಾವತಿ ವಿಳಂಬದ ಜತೆಗೆ ಈ ಎಲ್ಲ ಕಾರಣಗಳಿಂದ ಟೆಂಡರ್‌ ಷರತ್ತಿನ ಉಲ್ಲಂಘನೆಯಾಗಿದ್ದು, ಹೀಗಾಗಿ ಈ ಕುರಿತು ಸ್ಪಷ್ಟನೆ ನೀಡಬೇಕು. ಇಲ್ಲದೇ ಇದ್ದರೆ ಮುಂದಿನ ಕ್ರಮಕ್ಕಾಗಿ ಟೆಂಡರ್‌ ಅಂಗೀಕಾರ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಅಧಿಕಾರಿಗಳು ನೋಟೀಸ್‌ನಲ್ಲಿ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next