Advertisement

Bantwala: ಐದು ವರ್ಷಗಳ ಬಳಿಕ ಉಕ್ಕಿ ಹರಿದ ನೇತ್ರಾವತಿ

01:36 AM Jul 31, 2024 | Team Udayavani |

ಬಂಟ್ವಾಳ: ಬರೋಬ್ಬರಿ 5 ವರ್ಷಗಳ ಬಳಿಕ ನೇತ್ರಾವತಿ ನದಿಯಲ್ಲಿ ಮಂಗಳವಾರ ಪ್ರವಾಹದ ನೀರು ಉಕ್ಕಿ ಹರಿದ ಪರಿಣಾಮ ಬಂಟ್ವಾಳ, ಪಾಣೆಮಂಗಳೂರು ಸೇರಿದಂತೆ ತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಹಲವೆಡೆ ಮನೆಗಳಿಗೆ ನೀರು ನುಗ್ಗಿರುವ ಜತೆಗೆ ಸಾಕಷ್ಟು ಕಡೆ ರಸ್ತೆಗಳಿಗೆ ನೀರು ಬಂದು ಸಂಚಾರ ಕಡಿತಗೊಂಡಿತ್ತು.

Advertisement

ಮಂಗಳವಾರ ನೇತ್ರಾವತಿ ನದಿ ಯಲ್ಲಿ ನೀರಿನ ಮಟ್ಟ ಏರುತ್ತಲೇ ಸಾಗಿದ್ದು, ರಾತ್ರಿ ವೇಳೆಗೆ 10.6 ಮೀ. ತಲುಪಿತ್ತು. ನದಿಯಲ್ಲಿ ಅಪಾಯಕಾರಿ ಮಟ್ಟ ಮೀರುತ್ತಿದ್ದಂತೆ ಪಾಣೆಮಂಗಳೂರಿನ ಆಲಡ್ಕ, ಬೋಗೋಡಿ, ಗುಡ್ಡೆಯಂಗಡಿ, ನಾವೂರಿನ ಕಡವಿನಬಾಗಿಲು ಸೇರಿದಂತೆ ಹಲವೆಡೆ ಮನೆಗಳು ಮುಳು ಗಡೆಯಾಗಿದ್ದು, ಮನೆ ಮಂದಿ ಬೇರೆಡೆಗೆ ಸ್ಥಳಾಂತರಗೊಂಡಿದ್ದರು.

ಬಂಟ್ವಾಳ ಪೇಟೆಯ ಬಡ್ಡಕಟ್ಟೆ, ಬಸ್ತಿಪಡು³, ಪಾಣೆಮಂಗಳೂರಿನ ಆಲಡ್ಕ ಪ್ರದೇಶಗಳಲ್ಲಿ ಸಾಕಷ್ಟು ಅಂಗಡಿ ಮುಂಗಟ್ಟುಗಳಿಗೆ ಪ್ರವಾಹದ ನೀರು ನುಗ್ಗಿ ಅಲ್ಲಿನ ಸರಕು ಸಾಮಗ್ರಿಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಯಿತು. ಜತೆಗೆ ಬಂಟ್ವಾಳದ ಬಸ್ತಿಪಡು³ನಲ್ಲಿರುವ ಅಗ್ನಿಶಾಮಕ ದಳ ಕಚೇರಿಗೂ ನೀರು ನುಗ್ಗಿತ್ತು. ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರು ವಿವಿಧ ಪ್ರವಾಹ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಸೂಕ್ತ ರಕ್ಷಣ ಕ್ರಮಕ್ಕೆ ಸೂಚನೆ ನೀಡಿದರು. ಬಂಟ್ವಾಳ ತಹಶೀಲ್ದಾರ್‌ ಅರ್ಚನಾ ಡಿ.ಭಟ್‌ ನೇತೃತ್ವದಲ್ಲಿ ಸಂತ್ರಸ್ತ ಕುಟುಂಬಗಳನ್ನು ಸ್ಥಳಾಂತರಿಸಲಾಯಿತು.

ಬಂಟ್ವಾಳ-ಜಕ್ರಿಬೆಟ್ಟು ರಸ್ತೆಯ ಕೋಟೆಕಣಿ, ಪಾಣೆಮಂಗಳೂರಿನ ಆಲಡ್ಕ, ನಂದಾವರ ಸೇತುವೆ, ಬಿ.ಸಿ. ರೋಡು -ಬಂಟ್ವಾಳ ಪೇಟೆ ಸಂಪರ್ಕದ ಬಸ್ತಿಪಡು³, ಉಪ್ಪಿನಂಗಡಿ- ಅಜಿಲಮೊಗರು ಸಂಪರ್ಕ ರಸ್ತೆ ಮೊದಲಾದ ಕಡೆ ರಸ್ತೆಗೆ ನೀರು ನುಗ್ಗಿ ಸಂಚಾರ ಕಡಿತಗೊಂಡಿತ್ತು. ಉಳಿದಂತೆ ಕಡೇಶ್ವಾಲ್ಯ, ಮಣಿನಾಲ್ಕೂರು, ಸರಪಾಡಿ, ಶಂಭೂರು, ನಾವೂರು, ಸಜೀಪಮುನ್ನೂರು ಗ್ರಾಮಗಳಲ್ಲಿ ಸಾಕಷ್ಟು ಅಡಿಕೆ ತೋಟಗಳು, ಭತ್ತದ ಗದ್ದೆಗಳಿಗೆ ಪ್ರವಾಹದ ನೀರು ನುಗ್ಗಿತ್ತು.

50 ವರ್ಷದ ಬೆನ್ನಲ್ಲೇ ಮತ್ತೂಂದು ಪ್ರವಾಹ!
1974ರ ಭೀಕರ ಪ್ರವಾಹಕ್ಕೆ ಕಳೆದ ಜು. 26ರಂದು 50 ವರ್ಷ ತುಂಬಿದ ಬೆನ್ನಲ್ಲೇ ಅಷ್ಟು ಭೀಕರ ಅಲ್ಲದಿದ್ದರೂ ಜು. 30ರಂದು ನೇತ್ರಾವತಿ ನದಿ ಮತ್ತೂಂದು ಪ್ರವಾಹಕ್ಕೆ ಸಾಕ್ಷಿಯಾಗಿದೆ. ಈ ಹಿಂದೆ 2019ರಲ್ಲಿ ಕೊಂಚ ದೊಡ್ಡ ಮಟ್ಟದ ಪ್ರವಾಹ ಕಂಡುಬಂದಿದ್ದು, ಆ ಸಂದರ್ಭದಲ್ಲಿ ಬಂಟ್ವಾಳದಲ್ಲಿ ನೀರಿನ ಮಟ್ಟ ಗರಿಷ್ಠ 11.6 ಮೀ.ಗೆ ತಲುಪಿತ್ತು.

Advertisement

ಆರ್‌. ಅಶೋಕ್‌ ಇಂದು ಮಳೆ ಹಾನಿ ವೀಕ್ಷಣೆ
ಬಂಟ್ವಾಳ, ಜು. 30: ವಿಪಕ್ಷ ನಾಯಕ ಆರ್‌.ಅಶೋಕ್‌ ಅವರು ಜು. 31ರಂದು ದ.ಕ.ಜಿಲ್ಲೆಗೆ ಭೇಟಿ ನೀಡಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಬೆಳಗ್ಗೆ 10.30ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಅವರು ಬಳಿಕ ದ.ಕ.ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಲಿದ್ದಾರೆ.

12.40ಕ್ಕೆ ಬಂಟ್ವಾಳ ಕ್ಷೇತ್ರದಲ್ಲಿ ಮಳೆ ಹಾನಿ ವೀಕ್ಷಣೆ, 2.30ಕ್ಕೆ ಮೂಡುಬಿದಿರೆ ಕ್ಷೇತ್ರದಲ್ಲಿ ಮಳೆ ಹಾನಿ ವೀಕ್ಷಣೆ, 4.30ಕ್ಕೆ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಮಳೆಹಾನಿ ವೀಕ್ಷಣೆ, 5.30ಕ್ಕೆ ಮಂಗಳೂರು ಸರ್ಕ್ನೂಟ್‌ ಹೌಸ್‌ನಲ್ಲಿ ಜಿಲ್ಲಾ ಅಧಿಕಾರಿಗಳೊಂದಿಗೆ ಮಳೆ ಹಾನಿ ವಿಚಾರದ ಚರ್ಚೆ ನಡೆಸಿ ಬೆಂಗಳೂರಿಗೆ ನಿರ್ಗಮಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next