ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿಗೆ ಮೊದಲ ಬಲಿಯಾದ ಹಿನ್ನಲೆ, ಸಾವನ್ನಪ್ಪಿದ ಮಹಿಳೆಯ ಪತಿ ಮತ್ತು ಪುತ್ರನನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಮೂಲದ 50 ವರ್ಷದ ಮಹಿಳೆ ಉಸಿರಾಟದ ಸಮಸ್ಯೆಯಿಂದ ಶನಿವಾರ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. ರವಿವಾರ ಬೆಳಗ್ಗೆ ಈಕೆ ಸಾವನ್ನಪ್ಪಿದ್ದಾರೆ. ಆಕೆಯ ಗಂಟಲು ದ್ರವ ಪರೀಕ್ಷೆ ವರದಿ ಕೈಸೇರಿದ್ದು, ಮಹಿಳೆ ಕೊವಿಡ್ 19 ಸೋಂಕಿನಿಂದಲೇ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಡಳಿತ ಖಚಿತಪಡಿಸಿದೆ.
ಮಹಿಳೆ ಸೋಂಕಿನಿಂದ ಸಾವನ್ನಪ್ಪಿರುವುದು ಖಚಿತವಾಗುತ್ತಿದ್ದಂತೆ ಬಂಟ್ವಾಳದ ಕೆಳಗಿನ ಪೇಟೆಯನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಮೃತ ಮಹಿಳೆಯ ಮಗ ಮತ್ತು ಪತಿಯನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಮಹಿಳೆಯ ಅತ್ತೆಯ ಸ್ಥಿತಿ ಗಂಭೀರವಾಗಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
ಮೃತ ಮಹಿಳೆ ಮಗ ಮಾ.16 ರಂದು ದುಬೈನಿಂದ ಬಂದಿದ್ದ ಎನ್ನಲಾಗಿದೆ. ಸದ್ಯ ಮೂವರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.
ಬಂಟ್ವಾಳದಲ್ಲಿ ತೀವ್ರ ನಿಗಾ ವಹಿಸಲಾಗಿದ್ದು, ಮಹಿಳೆಯ ನಿವಾಸವಿದ್ದ ಕೆಳಗಿನ ಪೇಟೆ ಸೀಲ್ ಡೌನ್ ಆಗಿದೆ. ಈ ಪ್ರದೇಶ ಸೀಲ್ ಡೌನ್ ಆಗಿದೆ. ಯಾರು ಕೂಡಾ ಮನೆಯಿಂದ ಹೊರಬರಬೇಡಿ ಬಂಟ್ವಾಳ ನಗರ ಪೊಲೀಸರು ಜೀಪ್ ನಲ್ಲಿ ಅನೌನ್ಸ್ ಮಾಡಿದ್ದಾರೆ.