ಬಂಟ್ವಾಳ: ಬೈಪಾಸ್ ಜಂಕ್ಷನ್‌ನಲ್ಲಿ ರವಿವಾರ ಸಂಜೆ ನಡೆದ ಎರಡು ತಂಡಗಳ ಹೊಡೆದಾಟ ಪ್ರಕರಣದಲ್ಲಿ ಚೂರಿ ಇರಿತದಿಂದ ಮೂರು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯಲ್ಲಿ ಗಾಯಗೊಂಡಿರುವ ಹರೀಶ ಪೂಜಾರಿ ಸರಕಾರಿ ಆಸ್ಪತ್ರೆ ಹಾಗೂ ಗಂಭೀರ ಗಾಯಗೊಂಡಿರುವ ವಿನೀತ್ ಹಾಗೂ ಪೃಥ್ವಿರಾಜ್ ಮಂಗಳೂರು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.
ಅಜ್ಜಿಬೆಟ್ಟುವಿನ ಪ್ರದೀಪ್, ಪುಷ್ಪರಾಜ್ ಅಲೆತ್ತೂರು, ಶರಣ್ ಕೈಕಂಬ, ವಸಂತ ಕಾಮಾಜೆ, ರಾಕೇಶ್, ಅಶ್ವತ್ ಹಾಗೂ ಇತರ ನಾಲ್ಕೈದು ಮಂದಿ ಪ್ರಕರಣದ ಆರೋಪಿಗಳಾಗಿದ್ದಾರೆ. ಈ ಕುರಿತು ಹರೀಶ ಪೂಜಾರಿ ಅವರು ಪೊಲೀಸರಿಗೆ ದೂರು ನೀಡಿದ್ದು, ಅವರುಜಂಕ್ಷನ್‌ನಲ್ಲಿದ್ದಾಗ ಪರಿಚಿತರಾದ ಆರೋ ಪಿಗಳು ಎರಡು ಕಾರು ಹಾಗೂ ಬೈಕಿನಲ್ಲಿ ಬಂದು ಅವಾಚ್ಯ ಶಬ್ದಗಳಿಂದ ಬೈದಿದ್ದು, ಈ ವೇಳೆ ಅಕ್ಷೇಪಿಸಿದಾಗ ಹಲ್ಲೆ ನಡೆಸಿದ್ದಾರೆ. ಹರೀಶ್ ಅವರ ಬೊಬ್ಬೆ ಕೇಳಿ ಸ್ಥಳಕ್ಕೆ ಸ್ನೇಹಿತರಾದ ಕೀರ್ತನ್, ಪೃಥ್ವಿರಾಜ್ ಹಾಗೂ ವಿನೀತ್ ಅವರು ಓಡಿ ಬಂದು ಹಲ್ಲೆ ತಡೆಯಲು ಮುಂದಾಗಿದ್ದು, ಆರೋಪಿಗಳು ಅವರಿಗೂ ಹಲ್ಲೆ ನಡೆಸಿದ್ದಾರೆ.
ಆರೋಪಿಗಳ ಪೈಕಿ ಅಶ್ವತ್ ಎಂಬಾತ ವಿನೀತ್‌ನಿಗೆ ಹಾಗೂ ಮತ್ತೋರ್ವ ಆರೋಪಿ ಶರಣ್ ಎಂಬಾತ ಪೃಥ್ವಿರಾಜ್‌ನಿಗೆ ಚೂರಿಯಿಂದ ಇರಿದಿದ್ದಾನೆ. ಈ ವೇಳೆ ಸಾರ್ವಜನಿಕರು ಹಾಗೂ ಪರಿಚಿತರು ಸೇರಿದನ್ನು ನೋಡಿದ ಆರೋಪಿಗಳು ಹಲ್ಲೆ ನಡೆಸಿದ ಚೂರಿಗಳೊಂದಿಗೆ ಅವರು ಬಂದಿದ್ದ ವಾಹನಗಳಲ್ಲಿ ಪರಾರಿಯಾಗಿದ್ದಾರೆ. ಮೂವರು ಗಾಯಾಳುಗಳನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಈ ವೇಳೆ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ.