ಬಂಟ್ವಾಳ: ರೈತರನ್ನು ಅವಮಾನ ಮಾಡುವ ಪ್ರವೃತ್ತಿಯನ್ನು ಅಧಿಕಾರಿ ವರ್ಗ ಬಿಡಬೇಕು. ಜನಸಾಮಾನ್ಯನೊಬ್ಬ ಯಾವುದೇ ಅರ್ಜಿ ತಂದು ಕೊಟ್ಟರೂ ತಾ| ಆಡಳಿತ ಅದರಲ್ಲೂ ತಹಶೀಲ್ದಾರ್ ಸ್ವೀಕರಿಸಬೇಕು. ಅರ್ಜಿ ತಿರಸ್ಕಾರ ಸಲ್ಲದು. ಅಡಿಕೆ ಸಹಿತ ಇತರ ಕೃಷಿ ಬೆಳೆಗಾರರು ಇಂದು ಕೊಳೆರೋಗ ಮತ್ತು ಇತರ ಸಮಸ್ಯೆಗಳಿಂದ ಬಳಲುತ್ತಿದ್ದು, ರಾಜ್ಯ ಸರಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ ಹೇಳಿದರು.
ಅವರು ಸೆ. 4ರಂದು ತಾ| ಕಚೇರಿ ಎದುರು ನೂರಾರು ರೈತರು ಕೊಳೆರೋಗದಿಂದ ಉದುರಿದ ಅಡಿಕೆ ನಳ್ಳಿಯನ್ನು ಸುರಿದು ನಡೆಸಿದ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿ, ಅಡಿಕೆ ಬೆಳೆಗಾರ ರೈತರ ಸಮಸ್ಯೆಯ ಬಗ್ಗೆ ಸರಕಾರವು ಕಣ್ಣು ತೆರೆಯುವಂತೆ ಮಾಡಲು ಈ ಪ್ರತಿಭಟನೆ ಹಮ್ಮಿಕೊಂಡಿದ್ದಾಗಿ ತಿಳಿಸಿದರು. ರೈತರು ಒಟ್ಟಾಗಿ ಸರಕಾರದ ಧೋರಣೆಗಳ ವಿರುದ್ಧ ಪ್ರತಿಭಟನೆ ಮಾಡಬೇಕು. ಆವಶ್ಯಕತೆ ಪೂರೈಸಲು ನಿರಂತರ ಮನವಿ ಸಲ್ಲಿಕೆ ಮಾಡಬೇಕು ಎಂದರು.
ಸರಕಾರ ಅಡಿಕೆ ಬೆಳೆಗಾರರ ಕೃಷಿ ನಷ್ಟದ ಬಗ್ಗೆ ಸಮೀಕ್ಷೆಗಾಗಿ ಅರ್ಜಿ ಆಹ್ವಾನಿಸಿದೆ. ಪರಿಹಾರದ ಬಗ್ಗೆ ಇನ್ನಷ್ಟೆ ನಿರ್ಧಾರ ಆಗಬೇಕು. ರೈತರಿಗೆ ಪ್ರತೀ ಎಕ್ರೆ ಅಡಿಕೆ ಫಸಲು ನಷ್ಟಕ್ಕೆ ಕನಿಷ್ಠ 2 ಲಕ್ಷ ರೂ. ಪರಿಹಾರ ನೀಡಬೇಕು. ಪ್ರಸ್ತುತ ಎರಡೂವರೆ ಎಕ್ರೆಗೆ (ಹೆಕ್ಟೇರ್) 18 ಸಾವಿರ ರೂ. ನಷ್ಟ ಪರಿಹಾರ ನೀಡುವ ಪ್ರಸ್ತಾವವು 1 ಎಕ್ರೆಗೆ ಒಂದು ದಿನದಲ್ಲಿ ಮೈಲುತುತ್ತು ಸಿಂಪಡಣೆಗೆ ಒದಗುವ ವೆಚ್ಚದಂತಾಗುವುದು ಎಂದರು. ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಶಾಸ್ತ್ರಿ ಮಾತನಾಡಿ, ಸರಕಾರ ರೈತರ ಸಾಲ ಮನ್ನಾ ಬಗ್ಗೆ ಘೋಷಿಸಿದ್ದರೂ ಶರ್ತ ಒಡ್ಡುವ ಮೂಲಕ ವಂಚನೆ ದಾರಿಗೆ ಇಳಿದಿದೆ.
ಸಿಎಂ ಬಳಿಗೆ ನಿಯೋಗ
ರೈತರ ನಿಯೋಗವನ್ನು ರಾಜ್ಯ ಮುಖ್ಯ ಮಂತ್ರಿಗಳ ಬಳಿಗೆ ಕರೆದೊಯ್ಯುವ ಕೆಲಸ ಮಾಡುತ್ತೇನೆ. ರೈತರಿಗೆ ನಷ್ಟದ ಮೊತ್ತವು ಮೌಲ್ಯಯುತವಾಗಿ ಸಿಗುವಂತೆ ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು. ಪ್ರಾಕೃತಿಕ ವಿಕೋಪದಲ್ಲಿ ನಷ್ಟದ ಪರಿಹಾರ ನೀಡಲು ಸೂಚನೆ ನೀಡಲಾಗಿತ್ತು. ತಹಶೀಲ್ದಾರ್ ಅರ್ಜಿ ಸ್ವೀಕರಿಸಲೇಬೇಕು.
– ರಾಜೇಶ್ ನಾೖಕ್
ಶಾಸಕರು