Advertisement

Bantwala: ಮನೆಗೆ ನುಗ್ಗಿ ಒಂಟಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ

09:56 AM Jun 12, 2024 | Team Udayavani |

ಬಂಟ್ವಾಳ: ಹಾಸನ ಮೂಲದ ವ್ಯಕ್ಯಿಯೋರ್ವನಿಂದ ಮನೆಗೆ ನುಗ್ಗಿ ಒಂಟಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಕೊಲೆ ಬೆದರಿಕೆ ಹಾಕಿದ ಘಟನೆ ಜೂನ್ 11 ರಂದು ಕಲ್ಲಡ್ಕದಲ್ಲಿ ನಡೆದಿದೆ.

Advertisement

ಘಟನೆಗೆ ಸಂಬಂಧಿಸಿದಂತೆ ಹಾಸನ ಮೂಲದ ಬೇಲೂರು ನಿವಾಸಿ ರಿಕ್ಷಾ ಚಾಲಕ ಪ್ರಮೋದ್ ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಕಲ್ಲಡ್ಕ ಸಮೀಪದ ಬೊಂಡಾಲ ಎಂಬಲ್ಲಿನ  ಸಂತ್ರಸ್ತ ಮಹಿಳೆ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಹಿಳೆಯ ಸ್ವಂತ ಊರು ಹಾಸನ ತಾಲೂಕಿನ‌ ಬೇಲೂರು ಆಗಿದ್ದು, ಕಲ್ಲಡ್ಕದ  ಅಮ್ಟೂರು ಎಂಬಲ್ಲಿಗೆ ಮದುವೆ ಮಾಡಿ ಕೊಡಲಾಗಿದೆ.

ಮಹಿಳೆಯ ಊರು ಹಾಸನದಲ್ಲಿ ಪ್ರಮೋದ್ ರಿಕ್ಷಾ ಚಾಲಕನಾಗಿದ್ದ. ಒಂದೆರೆಡು ಬಾರಿ ತಾಯಿ ಮನೆಗೆ ಈತನ ರಿಕ್ಷಾದಲ್ಲಿ ಬಾಡಿಗೆ ಮಾಡಿಕೊಂಡು ಹೋಗಿರುವಾಗ ಸಂತ್ರಸ್ತ ಮಹಿಳೆಗೆ ಈತ ಪರಿಚಯಸ್ಥನಾಗಿದ್ದು, ಮೊಬೈಲ್ ‌ನಂ.ನ್ನು ಆತ ಪಡೆದುಕೊಂಡಿದ್ದ ಎನ್ನಲಾಗಿದೆ.

Advertisement

ಮೊಬೈಲ್ ಮೂಲಕ ಈತನ‌ ಸಂಪರ್ಕ ಅತಿಯಾಗಿ ಕಳೆದ ಕೆಲ ಸಮಯದ ಹಿಂದೆ ಗಂಡನ ಮನೆ ಕಲ್ಲಡ್ಕಕ್ಕೆ ಬಂದಿದ್ದ. ಮನೆಗೆ ಬಂದ ಈತ ಮಹಿಳೆಗೆ ಕೀಟಲೆ ನೀಡಿದ್ದಲ್ಲದೇ, ಮನೆಯೊಳಗಿದ್ದ ಅನೇಕ ಬೆಲೆ ಬಾಳುವ ವಸ್ತುಗಳನ್ನು ಹಾಳು ಮಾಡಿ ಹೋಗಿದ್ದ. ಈ ಸಂದರ್ಭದಲ್ಲಿ ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿತ್ತು ಎಂದು ಹೇಳಲಾಗಿದೆ.

ಇದೀಗ ಮತ್ತೆ ಹಾಸನದಿಂದ ಬಂಟ್ವಾಳಕ್ಕೆ ಬಂದಿಳಿದ ಆರೋಪಿ ‌ಪ್ರಮೋದ್ ಮತ್ತೆ ಗಂಡನಿಲ್ಲದ ಸಮಯ ನೋಡಿಕೊಂಡು ಮಹಿಳೆಯ ಮನೆಗೆ ನುಗ್ಗಿದ್ದಾನೆ. ಮಹಿಳೆಯನ್ನು ತಬ್ಬಿ ‌ಹಿಡಿದು ಲೈಂಗಿಕವಾಗಿ ಉಪಯೋಗಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.

ಮಹಿಳೆ ಜೋರಾಗಿ ಬೊಬ್ಬೆ ಹೊಡೆದಾಗ ಮನೆಯ ‌ಸಮೀಪದ ದೇವಾಲಯದೊಳಗೆ ಇದ್ದ ಗಂಡ ಬಂದು ರಕ್ಷಣೆ ಮಾಡಿದ್ದಾನೆ ಎಂದು ‌ಹೇಳಲಾಗಿದೆ.

ಈ ಸಂದರ್ಭದಲ್ಲಿ ಮಹಿಳೆಗೆ ಅವ್ಯಾಚ್ಚ ಶಬ್ದಗಳಿಂದ ನಿಂದಿಸಿ, ಗಂಡ ಮಗುವಿನ ಜೊತೆ ಸೇರಿಸಿ ಕೊಲ್ಲುವ ಬೆದರಿಕೆ ಒಡ್ಡಿದ್ದಾನೆ ಎಂದು ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇದೀಗ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಬಂಟ್ವಾಳ ನಗರ ಠಾ‌ಣಾ ಪೋಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ‌ಹಾಜರು ಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next