Advertisement

ನೇತ್ರಾವತಿ ನದಿಯಲ್ಲಿ ಮುಳುಗಿ ಯುವಕ ನಾಪತ್ತೆ ಪ್ರಕರಣ : ದಿನವಿಡೀ ಹುಡುಕಾಡಿದರೂ ಪತ್ತೆಯಿಲ್ಲ

10:12 PM Jul 04, 2022 | Team Udayavani |

ಬಂಟ್ವಾಳ : ಸಜೀಪಪಡು ಗ್ರಾಮದ ತಲೆಮೊಗರುನಲ್ಲಿ ನೇತ್ರಾವತಿ ನದಿಯಲ್ಲಿ ಈಜಲು ತೆರಳಿದ್ದ ಐವರು ಯುವಕರ ಪೈಕಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವ ಓರ್ವ ಯುವಕನಿಗಾಗಿ ಸೋಮವಾರ ದಿನವಿಡೀ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಪತ್ತೆಯಾಗಿಲ್ಲ.

Advertisement

ಮಂಗಳೂರು, ಬಂಟ್ವಾಳ ಅಗ್ನಿಶಾಮಕ ದಳದ ತಂಡ, ರಾಜ್ಯ ವಿಪತ್ತು ನಿರ್ವಹಣ ತಂಡದ ಜತೆಗೆ ಸ್ಥಳೀಯ ಈಜುಗಾರರು ಕೂಡ ರಾತ್ರಿ 7.30ರ ವರೆಗೂ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ಕತ್ತಲಾದ ಹಿನ್ನೆಲೆಯಲ್ಲಿ ಹುಡುಕಾಟಕ್ಕೆ ತೊಂದರೆಯಾಗಿತ್ತು. ವಿಪರೀತ ಮಳೆಯ ಕಾರಣದಿಂದ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿರುವುದರಿಂದ ನೀರಿನಲ್ಲಿ ಹುಡುಕಾಟಕ್ಕೂ ತೊಂದರೆ ಉಂಟಾಗಿದೆ.

ಮಗುವಿನ ನಾಮಕರಣಕ್ಕೆ ಬಂದಿದ್ದರು
ತಲೆಮೊಗರು ನಿವಾಸಿ ರುಕ್ಮಯ ಸಪಲ್ಯ ಅವರ ಪುತ್ರ ಅಶ್ವಿ‌ಥ್‌ (19) ನೀರುಪಾಲಾದ ಯುವಕನಾಗಿದ್ದಾನೆ. ಜು. 3ರಂದು ಯುವಕನ ಚಿಕ್ಕಪ್ಪನ ಮಗುವಿನ ನಾಮಕರಣದ ಹಿನ್ನೆಲೆಯಲ್ಲಿ ಒಟ್ಟು ಸೇರಿ ಕಾರ್ಯಕ್ರಮ ಮುಗಿದ ಬಳಿಕ ಸಂಬಂಧಿಕ ಸ್ನೇಹಿತರಾದ ಸಜೀಪದ ಪೆರ್ವ ನಿವಾಸಿಗಳಾದ ಹರ್ಷಿತ್‌, ಲಿಖೀತ್‌, ವಿಕೇಶ್‌ ಹಾಗೂ ವಿಶಾಲ್‌ ಅವರ ಜತೆ ಈಜುವುದಕ್ಕೆ ತೆರಳಿದ್ದರು.

ಮುಳುಗಿದ ಇಬ್ಬರ ಪೈಕಿ ಹರ್ಷಿತ್‌ನನ್ನು ನದಿ ತೀರದಲ್ಲಿದ್ದ ಸ್ಥಳೀಯರಾದ ಹರೀಶ್‌ ಹಾಗೂ ರಾಜೇಶ್‌ ಅವರು ರಕ್ಷಿಸಿದ್ದರು. ಮುಳುಗಿದ ವೇಳೆ ಅಸ್ವಸ್ಥಗೊಂಡಿರುವ ಹರ್ಷಿತ್‌ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣಾ ಪಿಎಸ್‌ಐ ಹರೀಶ್‌ ಅವರು ತೆರಳಿ ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದರು.

ಇದನ್ನೂ ಓದಿ : ಕಲ್ಯಾಣ ಕರ್ನಾಟಕ್ಕೆ 5 ಸಾವಿರ ಶಿಕ್ಷಕರ ನೇಮಕ ಸಚಿವ ಬಿ.ಸಿ.ನಾಗೇಶ್‌

Advertisement

ಶಾಸಕ ಯು.ಟಿ. ಖಾದರ್‌ ಭೇಟಿ
ನಾಪತ್ತೆಯಾಗಿರುವ ಯುವಕನ ಮನೆ ಹಾಗೂ ಹುಡುಕಾಟ ನಡೆಸುತ್ತಿರುವ ನದಿ ತೀರಕ್ಕೆ ಸೋಮವಾರ ವಿಧಾನಸಭಾ ವಿಪಕ್ಷ ಉಪನಾಯಕ, ಶಾಸಕ ಯು.ಟಿ. ಖಾದರ್‌ ಅವರು ಭೇಟಿ ನೀಡಿ ಕಾರ್ಯಾಚರಣೆಯ ಕುರಿತು ಮಾಹಿತಿ ಪಡೆದುಕೊಂಡರು. ಜತೆಗೆ ಯಾವುದೇ ಸುಳಿವು ಪತ್ತೆಯಾಗದೇ ಇರುವ ಹಿನ್ನೆಲೆಯಲ್ಲಿ ಪಣಂಬೂರಿನಿಂದ ತಂಡವನ್ನು ಕರೆಸುವ ಕುರಿತು ಅಧಿಕಾರಿಗಳ ಜತೆ ಚರ್ಚಿಸಿದರು.

ಅಪಾಯಕಾರಿ ಪರಿಸ್ಥಿತಿಯಲ್ಲಿ ಯುವಕರು ನದಿ ತೀರಕ್ಕೆ ಈಜಾಡಲು ತೆರಳುವ ಕುರಿತು ಮುನ್ನೆಚ್ಚರಿಕ ಕ್ರಮಗಳನ್ನು ವಹಿಸಲು ಸಜೀಪಪಡು ಗ್ರಾ.ಪಂ. ಪಿಡಿಒ ಶ್ವೇತಾ ಕೆ.ವಿ. ಅವರಿಗೆ ಸೂಚಿಸಿದರು. ಈ ಸಂದರ್ಭ ಗ್ರಾ.ಪಂ.ಅಧ್ಯಕ್ಷ ವಿಠ್ಠಲದಾಸ್‌, ತಾ.ಪಂ. ಮಾಜಿ ಸದಸ್ಯ ಪ್ರವೀಣ್‌ ಆಳ್ವ, ಇರಾ ಗ್ರಾ.ಪಂ. ಮಾಜಿ ಅಧ್ಯಕ್ಷ ಅಬ್ದುಲ್‌ ರಝಾಕ್‌ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next