ಬಂಟ್ವಾಳ: ತಾಲೂಕಿನ ಶಂಭೂರಿನ ಶ್ರೀ ಸಾಯಿ ಮಂದಿರದಿಂದ ಹೊರಟ ಪ್ರವಾಸಿಗರ ಬಸ್ ಸಾಗರ ತಾಲೂಕಿನ ಕಾರ್ಗಲ್ ಬಳಿಯ ತಿರುವಿನಲ್ಲಿ ತಾಂತ್ರಿಕ ದೋಷದ ಕಾರಣಕ್ಕೆ ಪಲ್ಟಿಯಾಗಿ ಸುಮಾರು 20ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಡಿ.15ರ ರವಿವಾರ ನಡೆದಿದೆ.
ಸುಮಾರು 50 ಮಂದಿಯಿದ್ದ ಪ್ರವಾಸಿಗರ ತಂಡ ಖಾಸಗಿ ಬಸ್ಸಿನ ಮೂಲಕ ರವಿವಾರ ಮುಂಜಾನೆ 5ರ ಸುಮಾರಿಗೆ ಶಂಭೂರಿನಿಂದ ಹೊರಟು ಜೋಗ ಜಲಪಾತಕ್ಕೆ ತೆರಳುವ ವೇಳೆ ಘಟನೆ ನಡೆದಿದ್ದು, ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿ ಹೊಡೆದಿದೆ.
ಘಟನೆಯಲ್ಲಿ ಶಂಭೂರಿನ ಯಶೋಧಾ ಹಾಗೂ ದೀಕ್ಷಿತಾ ಅವರಿಗೆ ಗಂಭೀರ ಗಾಯವಾಗಿದ್ದು, ಉಳಿದಂತೆ ಗಾಯಾಳುಗಳ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಬಸ್ಸಿನಲ್ಲಿದ್ದ ಒಂದಷ್ಟು ಮಂದಿಯ ಕೈ-ಕಾಲಿಗೆ ಗಂಭೀರ ಗಾಯವಾಗಿದ್ದು, ಒಂದಿಬ್ಬರು ಮಕ್ಕಳ ತಲೆಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ. ಗಾಯಾಳುಗಳನ್ನು ಸಾಗರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರಿಗೆ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರಿಗೆ ಕರೆ ತರಲಾಗುತ್ತಿದೆ ಎಂದು ಬಸ್ಸಿನಲ್ಲಿದ್ದವರು ತಿಳಿಸಿದ್ದಾರೆ.
ಘಟನೆಯ ಕುರಿತು ಬಸ್ಸಿನಲ್ಲಿದ್ದ ಚೈತ್ರೇಶ್ ಅವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಮಾಹಿತಿ ತಿಳಿಸಿದ್ದು, ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಪರಿಷತ್ ಸದಸ್ಯ ಡಾ| ಧನಂಜಯ ಸರ್ಜಿ ಅವರಿಗೆ ಮಾಹಿತಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಿದ್ದಾರೆ ಎನ್ನಲಾಗಿದೆ. ಜತೆಗೆ ಕಾರ್ಗಲ್ ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಹರೀಶ್ ಗೌಡ ಅವರು ಸದಸ್ಯರಾದ ಬಾಲಸುಬ್ರಹ್ಮಣ್ಯ, ಗುರುಸಿದ್ದಪ್ಪ ಅವರ ಜತೆ ಸ್ಥಳಕ್ಕೆ ತೆರಳಿ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲು ಸಹಕರಿಸಿದ್ದಾರೆ.
ಪ್ರವಾಸಿರ ತಂಡ ಮುಂಜಾನೆ 5ರ ಸುಮಾರಿಗೆ ಶಂಭೂರಿನಿಂದ ಹೊರಟು ಪಾಣೆಮಂಗಳೂರು, ಬಿ.ಸಿ.ರೋಡು, ಮಂಗಳೂರಿನಲ್ಲಿ ಪ್ರವಾಸಿಗರನ್ನು ಹತ್ತಿಸಿಕೊಂಡು ದೇವಸ್ಥಾನವೊಂದಕ್ಕೆ ಭೇಟಿ ನೀಡಿ ಬಳಿಕ ಜೋಗ ಜಲಪಾತಕ್ಕೆ ತೆರಳುತ್ತಿದ್ದರು.