ಬಂಟ್ವಾಳ: ಮಾಜಿ ಸಚಿವ ಬಿ.ರಮಾನಾಥ ರೈ ಅವರು 2018ರ ಚುನಾವಣೆಗೆ ಮೊದಲು ಬಂಟ್ವಾಳದಲ್ಲಿ 1 ಸಾವಿರ ಕೋ.ರೂ.ಗಳ ಅಭಿವೃದ್ಧಿ ಮಾಡಿರುವುದಾಗಿ ಬ್ಯಾನರ್, ಮಾಧ್ಯಮಗಳ ಮೂಲಕ ತಿಳಿಸಿದ್ದು, ಈಗ ಅವರು ಹೇಳುವಂತೆ 5 ಸಾವಿರ ಕೋ.ರೂ.ತಂದಿದ್ದರೆ 4 ಸಾವಿರ ಕೋ.ರೂ. ಎಲ್ಲಿಗೆ ಹೋಯಿತು? ಸೋಲಿನ ಭೀತಿಯಿಂದ ಇಂತಹ ಸುಳ್ಳು ಹೇಳುತ್ತಿದ್ದಾರೆ ಎಂದು ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಆರೋಪಿಸಿದರು.
ಅವರು ಸೋಮವಾರ ಬಿ.ಸಿ.ರೋಡಿನ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಹಿಂದೆ ರೈ ಅವರ ರಾಜಕೀಯ ಚಿಂತನೆಯ ಪರಿಣಾಮದಿಂದಲೇ ಬಂಟ್ವಾಳದಲ್ಲಿ ಕೋಮು ಸಂಘರ್ಷ ಉಂಟಾಗಿದ್ದು, ಒಂದು ವೇಳೆ ಅವರು ಹೇಳುವಂತೆ ಬಿಜೆಪಿ ಆ ಸಂದರ್ಭದಲ್ಲಿ ಶಾಂತಿ ಕದಡಿದ್ದರೆ 2018ರ ಚುನಾವಣೆಯಲ್ಲಿ ರಾಜೇಶ್ ನಾೖಕ್ ಗೆಲ್ಲುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಬಂಟ್ವಾಳ ಕ್ಷೇತ್ರದ ಜನತೆ ಪ್ರಜ್ಞಾವಂತಿಕೆ ಮೆರೆದು ಬಿಜೆಪಿಯನ್ನು ಗೆಲ್ಲಿಸಿದ್ದಾರೆ ಎಂದರು.
ಬಂಟ್ವಾಳ ಕ್ಷೇತ್ರದ ಜನತೆಯ ನಾಡಿಮಿಡಿತ ಅರಿಯದ ಪರಿಣಾಮ ಪ್ರಸ್ತುತ ಕೊನೆಯ ಚುನಾವಣೆ ಎಂದು ಹೇಳುವ ಪರಿಸ್ಥಿತಿ ಬಂದಿದ್ದು, ಅದರ ಅಧಿಕಾರದ ಆಸೆಗೆ ಬಂಟ್ವಾಳದ ಜನತೆ ಈ ಬಾರಿ ಮಣೆ ಹಾಕುವುದಿಲ್ಲ. ಸಾಮರಸ್ಯದ ಸಂಕೇತವಾಗಿ ಈ ಬಾರಿ ರಾಜೇಶ್ ನಾೖಕ್ ಗೆಲ್ಲುವುದು ಈಗಾಗಲೇ ಗ್ಯಾರಂಟಿಯಾಗಿದೆ ಎಂದರು.
ಈ ಹಿಂದೆ ಮಲ್ಲಿಕಟ್ಟೆ ಕಾಂಗ್ರೆಸ್ ಭವನ ಉದ್ಘಾಟನೆಗೆ ಜನಾರ್ದನ ಪೂಜಾರಿ ಅವರನ್ನು ಕರೆಯದ, ಪ್ರಜಾಧ್ವನಿ ಯಾತ್ರೆಯಲ್ಲಿ ಪೂಜಾರಿ ಅವರ ಪೋಟೊ ಹಾಕದ ರೈ ಅವರು ಈಗ ಪೂಜಾರಿ ಅವರ ಮನೆಗೆ ತೆರಳಿ ಕೈಕಾಲು ಹಿಡಿಯುತ್ತಿದ್ದಾರೆ. ಪೂಜಾರಿ ಅವರನ್ನು ನಿಂದನೆ ಮಾಡಿ ಕಂಕನಾಡಿ ಗರಡಿಯಲ್ಲಿ ಕಣ್ಣೀರು ಹಾಕಿಸಿರುವುದನ್ನು ಮತದಾರರು, ಬಿಲ್ಲವ ಸಮಾಜ ಮರೆತಿಲ್ಲ. ಇತ್ತೀಚೆಗೆ ತಾನು ಕಾಂಗ್ರೆಸ್ ಅಲ್ಲ ಎನ್ನುತ್ತಿದ್ದ ಪದ್ಮರಾಜ್ ಅವರು ಈಗ ಏಕಾಏಕಿ ಕಾಂಗ್ರೆಸ್ ಆಗಿದ್ದಾರೆ. ದಿನಕ್ಕೊಂದು ಉಚಿತಗಳನ್ನು ಪ್ರಕಟಿಸುತ್ತಿರುವ ಕಾಂಗ್ರೆಸ್ ರಾಜ್ಯವನ್ನು ದಿವಾಳಿಯನ್ನಾಗಿಸಲು ಹೊರಟಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಕ್ಷೇತ್ರ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಮುಖರಾದ ಸಂತೋಷ್‌ಕುಮಾರ್ ರೈ, ಡೊಂಬಯ ಅರಳ, ಪುರುಷೋತ್ತಮ ಶೆಟ್ಟಿ, ಹರಿದಾಸ್, ರಂಜಿತ್ ಮೈರ ಉಪಸ್ಥಿತರಿದ್ದರು.
ಯೋಗಿ-ಮೋದಿ ಕಾರ್ಯಕ್ರಮದಲ್ಲಿ ಭಾಗಿಗಳಾಗೋಣ
ಮೇ 6ರಂದು ಮಧ್ಯಾಹ್ನ 2ಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಂಟ್ವಾಳಕ್ಕೆ ಆಗಮಿಸಿ ಬಿ.ಸಿ.ರೋಡಿನ ಕೈಕಂಬದಿಂದ ನಾರಾಯಣಗುರು ವೃತ್ತದವರೆಗೆ ರೋಡ್‌ಶೋ ನಡೆಸಲಿದ್ದಾರೆ. ಜತೆಗೆ ಮೇ 3ರಂದು ಪ್ರಧಾನಿ ನರೇಂದ್ರ ಮೋದಿಯವರು ಮೂಲ್ಕಿಯ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ಈ ಎರಡೂ ಕಾರ್ಯಕ್ರಮಗಳಲ್ಲೂ ಎಲ್ಲಾ ಕಾರ್ಯಕರ್ತರು ಪಾಲ್ಗೊಳ್ಳಬೇಕಿದೆ ಎಂದು ಹರಿಕೃಷ್ಣ ಬಂಟ್ವಾಳ್ ಅವರು ವಿನಂತಿಸಿದರು.