Advertisement

ಬಂಟ್ವಾಳ : ತುಳು ಭಾಷಾ ಸಾಹಿತ್ಯ ಸಮ್ಮೇಳನ

09:46 AM Dec 11, 2017 | Team Udayavani |

ಬಂಟ್ವಾಳ: ಪ್ರಕೃತಿ ಗರ್ಭದ ಗಣಿ ಸಂಪತ್ತಿನಂತೆ ತುಳು ಭಾಷೆ ಪಶ್ಚಿಮ ಘಟ್ಟದಿಂದ ಕರಾವಳಿ ತಟದ ತನಕ ಹರಡಿರುವ ದೈವದತ್ತ ಸಂಪತ್ತು ಎಂದು ಪ್ರಥಮ ತುಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಮಲಾರು ಜಯರಾಮ ರೈ ಹೇಳಿದರು.

Advertisement

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಬಂಟ್ವಾಳ ತಾ| ತುಳು ಸಾಹಿತ್ಯ ಸಮ್ಮೇಳನದ ಸಮಿತಿ ಜಂಟಿ ಆಶ್ರಯದಲ್ಲಿ ಡಿ. 10ರಂದು ಜೋಡು ಮಾರ್ಗ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಪ್ರಥಮ ತುಳು ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಸಂವಿಧಾನದ ಮಾನ್ಯತೆ ಅಗತ್ಯ
ಕೋಲಾರದಲ್ಲಿ ಚಿನ್ನ, ಕುದುರೆ ಮುಖದ ಕಬ್ಬಿಣದ ಗಣಿಯಂತೆ ತುಳುನಾಡಿನ ಈ ಪ್ರಾಕೃತಿಕ ಭಾಷಾ ಸಂಪತ್ತು ಸುಮಾರು 5 ಮಿಲಿಯ ಜನರ ಆಡು ಭಾಷೆಯಾಗಿದೆ. ಕೋಟಿಗೂ ಮಿಕ್ಕಿದ ಜನರಿಗೆ ತುಳು ತಿಳಿದಿದೆ. ಆದರೂ ತುಳುವಿಗೆ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಮಾನ್ಯತೆ ದೊರೆಯದಿರುವುದು ಬೇಸರದ ಸಂಗತಿ ಎಂದು ತಿಳಿಸಿದರು.

ಭಾಷಾ ಅಧ್ಯಯನ ಅಗತ್ಯ
ಪ್ರಪಂಚದ ಕೊಲ್ಲಿ ರಾಷ್ಟ್ರಗಳ ಸಹಿತ ವಿವಿಧ ದೇಶಗಳಲ್ಲಿ, ಕರ್ನಾಟಕ, ಕೇರಳ ರಾಜ್ಯಗಳಲ್ಲಿ ತುಳುವರು ಹಂಚಿಹೋಗಿದ್ದಾರೆ. ತುಳು ನಾಟಕ, ಸಿನೆಮಾ, ಯಕ್ಷಗಾನ, ಮಾಸಿಕ, ತ್ತೈಮಾಸಿಕ ಪತ್ರಿಕೆಗಳು ತುಳುವಿನಲ್ಲಿ ಜನಪ್ರಿಯವಾಗಿವೆ. ಹಲವು ವಿದೇಶಿ ವಿಶ್ವ ವಿದ್ಯಾಲಯಗಳು ತುಳು ಭಾಷೆಗೆ ಅಧಿಕೃತ ಭಾಷಾ ಸ್ಥಾನಮಾನ ನೀಡಿವೆ. ಕುಪ್ಪಂ ಮತ್ತು ಮಂಗಳೂರು ವಿವಿಯಲ್ಲಿ ತುಳು ಭಾಷೆಯ ಕೆಲಸ ಆಗುತ್ತಿದ್ದು, ಇನ್ನಷ್ಟು ಅಧ್ಯಯನ ನಡೆಯಬೇಕು. ತುಳು ಲಿಪಿಯಿಂದಲೇ ಮಲಯಾಳಂ ಲಿಪಿ ಬಂದಿರಬಹುದು ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ ಎಂದರು.

ಸಮ್ಮೇಳನ ಉದ್ಘಾಟನೆ
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸಮ್ಮೇಳನವನ್ನು ದೀಪ ಬೆಳಗಿಸಿ, ಉದ್ಘಾಟಿಸಿದರು. ವೇದಿಕೆಯಲ್ಲಿ ಹಿರಿಯ ಸಾಹಿತಿ ಡಾ| ಏರ್ಯ ಲಕ್ಷ್ಮೀ ನಾರಾಯಣ ಆಳ್ವ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್‌. ಖಾದರ್‌, ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಪುರಸಭಾ ಅಧ್ಯಕ್ಷ ಪಿ. ರಾಮಕೃಷ್ಣ ಆಳ್ವ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

Advertisement

ವೇದಿಕೆಯಲ್ಲಿ ಅಕಾಡೆಮಿ ರಿಜಿಸ್ಟ್ರಾರ್‌ ಚಂದ್ರಹಾಸ ರೈ ವಿ., ಸದಸ್ಯರಾದ ಗೋಪಾಲ ಅಂಚನ್‌, ತಾರಾನಾಥ ಶೆಟ್ಟಿ ಕಾಪಿಕಾಡು, ಸುಧಾ ನಾಗೇಶ್‌, ಡಾ| ವೈ.ಎನ್‌.ಶೆಟ್ಟಿ, ವಿದ್ಯಾಶ್ರೀ ಎನ್‌., ಬೆನೆಟ್‌ ಅಮ್ಮಣ್ಣ, ನರೇಶ್‌ ಸಸಿಹಿತ್ಲು, ದುರ್ಗಾ ಮೆನನ್‌, ಪುರುಷೋತ್ತಮ ಚೇಂಡ್ಲ, ಚಂದ್ರಶೇಖರ ಗಟ್ಟಿ ಬೋಳೂರು, ಪ್ರಭಾಕರ ನೀರುಮಾರ್ಗ, ಡಾ| ವಾಸುದೇವ ಬೆಳ್ಳೆ, ನಿರಂಜನ್‌ ರೈ, ಶಿವಾನಂದ ಕರ್ಕೇರ, ವಿಜಯ ಶೆಟ್ಟಿ, ಸಮಿತಿ ಸದಸ್ಯರಾದ ಸುಭಾಶ್ಚಂದ್ರ ಜೈನ್‌, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ, ಸಮ್ಮೇಳನ ಸಮಿತಿ ಅಧ್ಯಕ್ಷ ಸುದರ್ಶನ್‌ ಜೈನ್‌ ಮತ್ತಿತರರು ಉಪಸ್ಥಿತರಿದ್ದರು. 

ತುಳುವಿಗಿಂತ ಕಡಿಮೆ ಸಂಖ್ಯೆಯಲ್ಲಿ ಮಾತನಾಡುವ ಸಿಂಧಿ, ನೇಪಾಲಿ, ಕೊಂಕಣಿ, ಮಣಿಪುರಿ, ಸಂಸ್ಕೃತ ಭಾಷೆಗೆ ಇರುವ ಸಂವಿಧಾನಿಕ ಮಾನ್ಯತೆ ತುಳುವಿಗೆ ದೊರೆಯದಿರುವುದು ವಿಷಾದನೀಯ.
-ಮಲಾರು ಜಯರಾಮ ರೈ

Advertisement

Udayavani is now on Telegram. Click here to join our channel and stay updated with the latest news.

Next