Advertisement

ಬಂಟ್ವಾಳ ಸಂಚಾರ ಠಾಣೆ ಕಟ್ಟಡ ಕಾಮಗಾರಿ ಆರಂಭ

04:17 PM May 26, 2023 | Team Udayavani |

ಬಂಟ್ವಾಳ: ಸೂಕ್ತವಾದ ನಿವೇಶನ ಸಿಗದೆ ಕಳೆದ ಒಂಬತ್ತು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲೇ ಕಾರ್ಯಾಚರಿಸುತ್ತಿದ್ದ ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಗೆ ಪಾಣೆಮಂಗಳೂರಿನಲ್ಲಿ ನಿವೇಶನ ಅಂತಿಮಗೊಂಡು ಇದೀಗ 3.18 ಕೋ.ರೂ. ವೆಚ್ಚದಲ್ಲಿ ಠಾಣಾ ಕಟ್ಟಡದ ಕಾಮಗಾರಿ ಆರಂಭಗೊಂಡಿದೆ. ಕಟ್ಟಡ ನಿರ್ಮಾಣಕ್ಕೆ 11 ತಿಂಗಳ ಕಾಲಾವಕಾಶ ನಿಗದಿ ಪಡಿಸಲಾಗಿದ್ದು, 2024ರ ಮಾರ್ಚ್‌ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಬೇಕಿದೆ.

Advertisement

ಸಂಚಾರ ಠಾಣೆ ಉದ್ಘಾಟನೆಗೊಂಡ ದಿನದಿಂದ ಈತನಕವೂ ಮೆಲ್ಕಾರ್‌ ಸಮೀಪದ ಬೋಳಂಗಡಿ ಹೆದ್ದಾರಿ ಬದಿ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು, ಸಾಕಷ್ಟು ಕಡೆಗಳಲ್ಲಿ ಜಾಗ ಗುರುತಿಸಿದರೂ ಅದು ಠಾಣೆಯ ಕಾರ್ಯನಿರ್ವಹಣೆಗೆ ಸೂಕ್ತವಾಗದ ಹಿನ್ನೆಲೆಯಲ್ಲಿ ಹುಡುಕಾಟ ಮುಂದುವರಿದಿತ್ತು. ಆದರೆ ಕಳೆದ ವರ್ಷ ಪಾಣೆಮಂಗಳೂರು ಗೂಡಿನಬಳಿ ಹಳೆ ಸೇತುವೆಯ ಸಮೀಪ ಸುಮಾರು 78 ಸೆಂಟ್ಸ್‌ ನಿವೇಶನವೊಂದನ್ನು ಠಾಣೆಗೆ ಅಂತಿಮಗೊಳಿಸಲಾಗಿತ್ತು.

ಪಾಣೆಮಂಗಳೂರು ಗೂಡಿನಬಳಿಯಲ್ಲಿ ನೇತ್ರಾವತಿ ನದಿ ಕಿನಾರೆಯಲ್ಲಿದ್ದ ಪಶು ಇಲಾಖೆಯ ಹಳೆಯ ಕಟ್ಟಡದ ನಿವೇಶ ನವನ್ನು ಹಿಂದೆ ಬಂಟ್ವಾಳ ಸಂಚಾರಿ ಪೊಲೀಸ್‌ ಠಾಣೆಗೆ ಮಂಜೂರು ಮಾಡ ಲಾಗಿತ್ತು. ಆದರೆ ಅಲ್ಲಿ ಠಾಣೆಗೆ ಬೇಕಾದಷ್ಟು ಸ್ಥಳ ಇಲ್ಲದೇ ಇರುವುದರಿಂದ ಅದು ಹಾಗೇ ಉಳಿದುಕೊಂಡಿತ್ತು. ಎರಡು ವರ್ಷಗಳ ಹಿಂದೆ ಈ ಪಾಳು ಬಿದ್ದ ಕಟ್ಟಡವನ್ನು ದುರಸ್ತಿಪಡಿಸಿ ಬಂದೋಬಸ್ತ್ಗೆ ಆಗಮಿಸುವ ಕೆಎಸ್‌ಆರ್‌ಸಿ ಪೊಲೀಸರಿಗೆ ಉಳಿದುಕೊಳ್ಳಲು ಗೆಸ್ಟ್‌ ರೂಮ್‌ ರೀತಿಯಲ್ಲಿ ನವೀಕರಣ ಮಾಡಲಾಗಿತ್ತು.

ಕಟ್ಟಡ ನಿರ್ಮಾಣ ಅನಿವಾರ್ಯವಾಗಿತ್ತು
ಬಂಟ್ವಾಳ ಸಂಚಾರ ಠಾಣೆಯು ಹಾಲಿ ಕಾರ್ಯಾಚರಿಸುತ್ತಿರುವ ಬಾಡಿಗೆ ಕಟ್ಟಡವು ಶಿಥಿಲಗೊಂಡು ಮಳೆಗಾಲದಲ್ಲಿ ನೀರು ಸೋರುವ ಸಮಸ್ಯೆಯಿಂದ ಟಾರ್ಪಾಲು ಹೊದಿಸಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ. ಜತೆಗೆ ಈ ಕಟ್ಟಡದ ಮುಂಭಾಗದ ಬಹುತೇಕ ಜಾಗ ಬಿ.ಸಿ.ರೋಡ್‌-ಅಡ್ಡಹೊಳೆ ಹೆದ್ದಾರಿ ನಿರ್ಮಾಣಕ್ಕೆ ಸ್ವಾಧೀನಗೊಳ್ಳುತ್ತಿದ್ದು, ಹೀಗಾಗಿ ಅನಿವಾರ್ಯವಾಗಿ ಠಾಣೆಗೆ ಸ್ವಂತ ಕಟ್ಟಡ ಅತೀ ಆವಶ್ಯಕವಾಗಿತ್ತು.

ಪ್ರಸ್ತುತ ಸಂಚಾರ ಠಾಣೆಗೆ ಅಂತಿಮ ಗೊಂಡಿರುವ ಜಾಗವು ಹೆದ್ದಾರಿಗೆ ಅತೀ ಸಮೀಪದಲ್ಲಿದ್ದು, ತಾ| ಕೇಂದ್ರದಿಂದ ಠಾಣೆ ಯನ್ನು ಸಂಪರ್ಕಿಸಬೇಕಾದರೆ ಹೆದ್ದಾರಿಯ ಜತೆಗೆ ಹಳೆ ಸೇತುವೆಯ ರಸ್ತೆಯು ಕೂಡ ಸೂಕ್ತವಾಗಿದೆ. ನಿವೇಶನವು ರಸ್ತೆಯಿಂದ ತಳ ಭಾಗದಲ್ಲಿದ್ದು, ಹೀಗಾಗಿ ಮೇಲಕ್ಕೆ ಪಿಲ್ಲರ್‌ಗಳನ್ನು ಎಬ್ಬಿಸಿ ರಸ್ತೆಗೆ ಸಮವಾಗಿ ಠಾಣಾ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ.

Advertisement

ನೇತ್ರಾವತಿ ನದಿಯು ನಿವೇಶನದ ಪಕ್ಕದಲ್ಲೇ ಇರುವುದರಿಂದ ತಳ ಭಾಗಕ್ಕೆ ಮಳೆಗಾಲದಲ್ಲಿ ನೆರೆ ನೀರು ಕೂಡ ಬೀಳುವುದ ರಿಂದ ಅನಿವಾರ್ಯವಾಗಿ ಕಟ್ಟಡವನ್ನು ಮೇಲ್ಭಾಗದಲ್ಲೇ ನಿರ್ಮಿಸಬೇಕಿದೆ.

ಕರ್ನಾಟಕ ರಾಜ್ಯ ಪೊಲೀಸ್‌ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮವು ಕಟ್ಟಡ ಕಾಮಗಾರಿಯನ್ನು ನಿರ್ವಹಿಸಲಿದ್ದು, ಕೆಲವು ದಿನಗಳ ಹಿಂದೆ ಕಾಮಗಾರಿ ಆರಂಭಗೊಂಡಿದೆ. ಒಟ್ಟು ಸುಮಾರು 4,035 ಚ.ಅಡಿ ವಿಸ್ತೀರ್ಣದಲ್ಲಿ ಠಾಣಾ ಕಟ್ಟಡ ನಿರ್ಮಾಣಗೊಳ್ಳಲಿದ್ದು, ತಳ ಭಾಗದಲ್ಲಿ ಪ್ರತ್ಯೇಕ ಶೌಚಾಲಯಗಳು ಇರುತ್ತವೆ. ನೆಲ ಅಂತಸ್ತಿನಲ್ಲಿ ಇನ್‌ಸ್ಪೆಕ್ಟರ್‌ ಕೊಠಡಿ, 4 ಪಿಎಸ್‌ಐಗಳ ಕೊಠಡಿ, 1 ವಯರ್‌ಲೆಸ್‌ ಕೊಠಡಿ, 1 ವರ್ಕ್‌ ಸ್ಟೇಷನ್‌ ನಿರ್ಮಾಣವಾಗುತ್ತದೆ. ಪ್ರಥಮ ಮಹಡಿಯಲ್ಲಿ ಮಹಿಳಾ ಹಾಗೂ ಪುರುಷರ ಪ್ರತ್ಯೇಕ ರೆಸ್ಟ್‌ ರೂಮ್‌ಗಳು, ಸ್ಟೋರ್‌, ರೆಕಾರ್ಡ್‌ ರೂಮ್‌, ಪ್ರತ್ಯೇಕ ಶೌಚಾಲಯ ನಿರ್ಮಾಣವಾಗುತ್ತದೆ ಎಂದು ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

11 ತಿಂಗಳ ಕಾಲಾವಕಾಶ
ಎಪ್ರಿಲ್‌ನಲ್ಲಿ ಬಂಟ್ವಾಳ ಸಂಚಾರ ಠಾಣೆಯ ಕಟ್ಟಡ ಕಾಮಗಾರಿ ಆರಂಭಗೊಂಡಿದ್ದು, ಕಾಮಗಾರಿ ಪೂರ್ಣಗೊಳ್ಳುವುದಕ್ಕೆ 11 ತಿಂಗಳ ಕಾಲಾವ ಕಾಶ ನೀಡಲಾಗಿದೆ. 318 ಲಕ್ಷ ರೂ.ಗಳಲ್ಲಿ 4,035 ಚ.ಅಡಿ ವಿಸ್ತೀರ್ಣದ ಕಟ್ಟಡ ನಿರ್ಮಾಣಗೊಳ್ಳಲಿದೆ. ಪುತ್ತೂರು ಸಂಚಾರ ಠಾಣೆಯ ಮಾದರಿಯಲ್ಲೇ ಈ ಕಟ್ಟಡವೂ ನಿರ್ಮಾಣವಾಗುತ್ತದೆ.
-ಕಾಳಿದಾಸ್‌, ಕಿರಿಯ ಎಂಜಿನಿಯರ್‌, ರಾಜ್ಯ ಪೊಲೀಸ್‌ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next