Advertisement

Bantwal: ಅಭಿವೃದ್ಧಿ ಕಾರ್ಯಕ್ಕಿಂತಲೂ ಸಮಸ್ಯೆಗಳ ಸರಮಾಲೆ ಪ್ರಸ್ತಾವಿಸಿದ ಸಾರ್ವಜನಿಕರು

01:02 PM Dec 31, 2024 | Team Udayavani |

ಬಂಟ್ವಾಳ: ಬಂಟ್ವಾಳ ಪುರಸಭೆಯ 2025 -26ನೇ ಸಾಲಿನ ಬಜೆಟ್‌ ತಯಾರಿಗೆ ಪೂರ್ವಭಾವಿ ಸಭೆಯು ಸೋಮವಾರ ಪುರಸಭಾ ಕೌನ್ಸಿಲ್‌ ಹಾಲ್‌ನಲ್ಲಿ ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ಲೊರೆಟ್ಟೊ ಅಧ್ಯಕ್ಷತೆಯಲ್ಲಿ ನಡೆದಿದ್ದು, ಬಂಟ್ವಾಳ ನಗರದ ಹೊಸ ಅಭಿವೃದ್ಧಿ ಕಾರ್ಯಕ್ಕಿಂತಲೂ ಪುರಸಭಾ ವ್ಯಾಪ್ತಿಯ ಸಮಸ್ಯೆಗಳ ಸರಮಾಲೆಗಳನ್ನೇ ಪುರಸಭಾ ನಿವಾಸಿಗಳು ಪ್ರಸ್ತಾಪಿಸಿ ಪರಿಹಾರಕ್ಕೆ ಆಗ್ರಹಿಸಿದರು.

Advertisement

ನಾಗರಿಕರ ಅಹವಾಲುಗಳನ್ನು ಆಲಿಸಿದ ಅಧ್ಯಕ್ಷ ಬಿ.ವಾಸು ಪೂಜಾರಿ ಅವರು ತಮ್ಮ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಗರಿಷ್ಠ ಪ್ರಯತ್ನ ಮಾಡುವ ಜತೆಗೆ ಸಾಧ್ಯವಾಗುವುದನ್ನು ಬಜೆಟ್‌ನಲ್ಲಿ ಸೇರಿಸಿ ಅನುದಾನ ಮೀಸಲಿರಿಸಲಾಗುವುದು ಎಂದರು.

ಬಂಟ್ವಾಳ ರಾಣಿ ಅಬ್ಬಕ್ಕ ತುಳು ಸಂಶೋಧನಾ ಕೇಂದ್ರದ ಅಧ್ಯಕ್ಷ ಪ್ರೊ| ತುಕರಾಮ್‌ ಪೂಜಾರಿ ಅವರು ಮಾತನಾಡಿ, ಸಂಚಯಗಿರಿಯಲ್ಲಿ ಕೇಂದ್ರಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಸೆಟ್‌ಬ್ಯಾಕ್‌ ಉಲ್ಲಂಘಿಸಿ ಮನೆಯ ಮುಂದೆ ಕಲ್ಲುಗಳನ್ನು ಇಡಲಾಗುತ್ತಿದ್ದು, ಜತೆಗೆ ಈ ಭಾಗದಲ್ಲಿ ರಸ್ತೆಯೂ ಸರಿ ಇಲ್ಲ. ಹೀಗಾಗಿ ಸಂಪರ್ಕಕ್ಕೆ ಸಾಕಷ್ಟು ತೊಂದರೆಯಾಗುತ್ತಿದ್ದು, ಪುರಸಭೆ ಗಮನಹರಿಸಿ ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿದರು.

ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಎಂಜಿನಿಯರ್‌ ಡೊಮಿನಿಕ್‌ ಡಿಮೆಲ್ಲೊ, ಲೆಕ್ಕಾಧಿಕಾರಿ ಹರ್ಷಿತಾ ಹಾಗೂ ಸಿಬಂದಿ ಉಪಸ್ಥಿತರಿದ್ದರು.

ಬೀದಿ ಬದಿ ವ್ಯಾಪಾರಿ ವಲಯ ಮಾಡಿ
ಬಿ.ಸಿ.ರೋಡು ಸಂತೆಯ ಕುರಿತು ಸಂಚಯಗಿರಿ ನಾಗರಿಕ ಕ್ರಿಯಾ ಸಮಿತಿ ಅಧ್ಯಕ್ಷ ಸುರೇಶ್‌ ಬಂಗೇರ ಪ್ರಸ್ತಾವಿಸಿ, ನಗರದಲ್ಲಿ ನಿಯಮವಿಲ್ಲದ ಬೀದಿ ಬದಿ ವ್ಯಾಪಾರದಿಂದ ನಗರದ ಸೌಂದರ್ಯಕ್ಕೆ ಧಕ್ಕೆಯಾಗುವ ಜತೆಗೆ ಸಾರ್ವಜನಿಕರಿಗೂ ತೊಂದರೆಯಾಗುತ್ತದೆ. ಹಿಂದೆ ವಾರಕ್ಕೊಮ್ಮೆ ನಡೆಯುತ್ತಿದ್ದ ವ್ಯಾಪಾರ ಪ್ರಸ್ತುತ ನಿತ್ಯವೂ ನಡೆಯುತ್ತಿದೆ. ನಗರ ಪ್ರದೇಶಗಳಲ್ಲಿ ಬೀದಿ ಬದಿ ವ್ಯಾಪಾರಿ ವಲಯ ಇರಬೇಕಿದ್ದು, ಆದರೆ ಇಲ್ಲಿ ಇಲ್ಲವಾಗಿದೆ. ಬೀದಿ ಬದಿ ವ್ಯಾಪಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದರು.

Advertisement

ಬಂಟ್ವಾಳ ಪೇಟೆ ಅಭಿವೃದ್ಧಿಗೆ ಮಲತಾಯಿ ಧೋರಣೆ
ಬಂಟ್ವಾಳ ವರ್ತಕರ ಸಂಘದ ಕಾರ್ಯದರ್ಶಿ ಸುರೇಶ್‌ ಬಾಳಿಗಾ ಅವರು ಬಂಟ್ವಾಳ ಪೇಟೆಯ ಸಮಸ್ಯೆಯನ್ನು ಸಭೆಯ ಮುಂದಿಟ್ಟರು. ಪುರಸಭಾ ಕಚೇರಿಯೂ ಬಂಟ್ವಾಳ ಪೇಟೆಯಲ್ಲೇ ಇದ್ದು, ಆದರೆ ಪೇಟೆಯ ಅಭಿವೃದ್ಧಿಯ ದೃಷ್ಟಿಯಿಂದ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಪೇಟೆಯಿಂದ ತೆರಿಗೆ ರೂಪದಲ್ಲಿ ಹೆಚ್ಚಿನ ಆದಾಯ ಬರುತ್ತಿದ್ದು, ನಾವು ತೆರಿಗೆ ಬಾಕಿ ಪಾವತಿಸಲು ಬಾಕಿ ಇಟ್ಟಿದ್ದೇವಾ, ಮತ್ಯಾಕೆ ಅಭಿವೃದ್ಧಿಗೆ ಪುರಸಭೆ ಮನಸ್ಸು ಮಾಡುತ್ತಿಲ್ಲ. ಶೌಚಾಲಯ ಗಬ್ಬು ವಾಸನೆ ಬರುತ್ತಿದ್ದು, ನಿಮ್ಮಲ್ಲಿ ಹಣಕಾಸಿನ ತೊಂದರೆ ಇದ್ದರೆ ನಾವು ಕೊಡುತ್ತೇವೆ. ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಸೆಟ್‌ ಬ್ಯಾಕ್‌ ಕಾನೂನಿನ ಮೂಲಕ ಪೇಟೆಯನ್ನು ಬಲಿ ಕೊಡಲಾಗುತ್ತಿದ್ದು, ಪೇಟೆಯ ಅಭಿವೃದ್ಧಿಗೆ ವಿಶೇಷ ಯೋಜನೆ ಜಾರಿ ಮಾಡುವಂತೆ ಆಗ್ರಹಿಸಿದರು.

ಅಂಗನವಾಡಿ ದುರಸ್ತಿ ಮಾಡಿ
ವಸಂತಿ ಗಂಗಾಧರ ಮಾತನಾಡಿ, ಪುರಸಭಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳ ದುರಸ್ತಿಗೆ ಅನುದಾನ ಮೀಸಲಿರಿಸಬೇಕು. ಮಕ್ಕಳಿಗೆ ಆಟದ ಮೈದಾನ ಬೇಕು ಎಂದರು. ಮುಸ್ತಾಫಾ ಹಾಗೂ ಪಿ.ಎಂ.ಅಶ್ರಫ್‌ ಮಾತನಾಡಿ, ಬಂಗ್ಲೆಗುಡ್ಡೆಯಲ್ಲಿ ಅಂಗನವಾಡಿ ಕೇಂದ್ರ ಹಾಗೂ ಹಾಸ್ಟೆಲ್‌ ಪೊದೆಗಳಿಂದ ಆವರಿಸಿದೆ. ತೆರವಾಗಬೇಕು. ಪಾಣೆಮಂಗಳೂರು ಆಲಡ್ಕದಲ್ಲಿ ಒಳಚರಂಡಿಯಲ್ಲಿ ಕೊಳಚೆ ನೀರು ಬ್ಲಾಕ್‌ ಆಗಿ ದುರ್ನಾತ ಬೀರುತ್ತಿದೆ ಸಮಸ್ಯೆ ಪರಿಹಾರ ಮಾಡಿ ಎಂದರು.

ಪೈಪ್‌ಲೈನ್‌ ಕೆಟ್ಟರೆ ಎಲ್ಲಿ ಮಾತನಾಡಲಿ
ದಾಮೋದರ ಅವರು ಮಾತನಾಡಿ, ಪುರಸಭಾ ವ್ಯಾಪ್ತಿಯ ಸಮಗ್ರ ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್‌ ಕೆಟ್ಟು ಹೋದರೆ ಯಾರಲ್ಲಿ ಮಾತನಾಡಬೇಕು.ಅವರಲ್ಲಿ ಕೇಳಿದರೆ ಇವರಲ್ಲಿ ಕೇಳಿ ಎಂಬ ಉತ್ತರವಷ್ಟೆ ಬರುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next