ಬಿ.ಸಿ.ರೋಡ್ : ಸಂಸ್ಕಾರ ಮತ್ತು ಸಂಘಟನೆ ಸಮುದಾಯದ ಶಕ್ತಿ. ಸಂಘಟಿತ ಶ್ರಮದಿಂದ ಗುರಿ ಸಾಧನೆಯಲ್ಲಿ ಸಫಲತೆ ಗಳಿಸಲು ಸಾಧ್ಯ ಎಂದು ಕರಿಂಜೆ ಶ್ರೀ ಲಕ್ಷ್ಮೀ ಸತ್ಯನಾರಾಯಣ ವೀರಾಂಜನೇಯ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ನುಡಿದರು. ಅವರು ಕಂದೂರು ಶ್ರೀ ಗುರು ಮಾಚಿದೇವ ಸಮುದಾಯ ಭವನದಲ್ಲಿ ಜರಗಿದ ಬಂಟ್ವಾಳ ತಾ| ಮಡಿವಾಳರ ಸಮಾಜ ಸೇವಾ ಸಂಘದ 26ನೇ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸಮ್ಮಾನ ಕಾರ್ಯಕ್ರಮದಲ್ಲಿ ಅಶೀರ್ವಚನ ನೀಡಿದರು.
ಮುಖ್ಯ ಅತಿಥಿಯಾಗಿದ್ದ ನಿವೃತ್ತ ಸೇನಾಧಿಕಾರಿ ವಸಂತ ಕಾಯರ್‌ಮಾರ್ ಮಾತನಾಡಿ, ಸಮಾಜಮುಖಿ ಚಿಂತನೆ ಮೈಗೂಡಿಸಿಗೊಂಡು ಸಾಧ್ಯವಾದಷ್ಟು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಾಗ ಸಮಾಜದ ಋಣ ತೀರಿಸಲು ಸಾಧ್ಯ. ಭಾರತೀಯ ಸೇನೆಯಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳಿದ್ದು, ಯುವಕರು ಈ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದವರು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ವಿಟ್ಲ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ನಾರಾಯಣ ಯಾನೆ ಬಟ್ಟು ಸ್ವಾಮಿ, ವಿಜಯ ಬ್ಯಾಂಕ್ ನಿವೃತ್ತ ಮ್ಯಾನೇಜರ್ ರವೀಂದ್ರ ಕಟೀಲು ಅವರು ಸಂಘಟನೆಯ ಮಹತ್ವ ವಿವರಿಸಿದರು. ದ.ಕ. ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಪ್ರಕಾಶ್ ಬಿ.ಎನ್. ಮಾತನಾಡಿ ಬಂಟ್ವಾಳ ತಾ| ಮಡಿವಾಳರ ಸಂಘದ ಕಾರ್ಯ ಚಟುವಟಿಕೆ ಶ್ಲಾಘಿಸಿ ಸಮುದಾಯ ಶೈಕ್ಷಣಿಕ, ಅರ್ಥಿಕ, ರಾಜಕೀಯವಾಗಿ ಸಶಕ್ತತೆ ಸಾಧಿಸಿದಾಗ ನಿಜವಾದ ಅಭಿವೃದ್ಧಿ ಸಾಕಾರಗೊಳ್ಳುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ತಾ| ಮಡಿವಾಳರ ಸಮಾಜಸೇವಾ ಸಂಘದ ಅಧ್ಯಕ್ಷ ಎನ್.ಕೆ. ಶಿವ ಅವರು ಸಂಘದ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ವಿವರಿಸಿ, ಇದಕ್ಕೆ ಸಮುದಾಯದ ಸದಸ್ಯರು ಪೂರ್ಣ ಸಹಕಾರ ನೀಡಬೇಕೆಂದರು. ಬಂಟ್ವಾಳ ಮಡಿವಾಳ ಯುವಬಳಗದ ಅಧ್ಯಕ್ಷ ನವೀನ್ ವಿಟ್ಲ ಉಪಸ್ಥಿತರಿದ್ದರು. ವಿಟ್ಲ ಸಹಕಾರಿ ಬ್ಯಾಂಕಿನ ನಿರ್ದೇಶಕ ಕೃಷ್ಣ ಬನಾರಿ, ದೈವ ಪರಿಚಾರಕ ತಿಮ್ಮ ಮಡಿವಾಳ ಕಾವು ವಿಟ್ಲಪಟ್ನೂರು, ಸಾಮಾಜಿಕ ಕಾರ್ಯಕರ್ತೆ ಭವ್ಯಾರಾಣಿ ಪಿ.ಸಿ.. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕೇಶವ ಕುಂದರ್ ಅವರನ್ನು ಸಮ್ಮಾನಿಸಲಾಯಿತು. ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣೆ, ಟೋಟ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಂಘದ ಗೌರವಾಧ್ಯಕ್ಷ ಸೋಮಪ್ಪ ಮಾಸ್ಟರ್ ಸ್ವಾಗತಿಸಿದರು. ಕೋಶಾಧಿಕಾರಿ ಪುಷ್ಪರಾಜ ಕೆ. ಕುಕ್ಕಾಜೆ ಲೆಕ್ಕಪತ್ರ ಹಾಗೂ ಕಾರ್ಯದರ್ಶಿ ಹರೀಶ್ ಟೈಲರ್ ಮಂಕುಡೆ ವರದಿ ಮಂಡಿಸಿದರು. ಪದ್ಮನಾಭ ಮಂಕುಡೆ ವಂದಿಸಿದರು. ವೆಂಕಟೇಶ ಅನಂತಾಡಿ, ಪುಷ್ಪರಾಜ ಕೆ. ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು. ಬಂಟ್ವಾಳ ತಾ| ಮಡಿವಾಳರ ಸಮಾಜಸೇವಾ ಸಂಘ ಹಾಗೂ ಬಂಟ್ವಾಳ ಮಡಿವಾಳ ಯುವಬಳಗದ ವತಿಯಿಂದ ಉಚಿತ ವೈದ್ಯಕೀಯ, ದಂತ ತಪಾಸಣೆ ಶಿಬಿರ ಹಾಗೂ ಕ್ಷೇಮ ಹೆಲ್ತ್‌ಕಾರ್ಡ್ ವಿತರಣೆ ನಡೆಯಿತು.
ಸಮಾಜಮುಖಿ ಚಿಂತನೆ ಬೆಳೆಸಿ
ಸಂಸ್ಕಾರ, ಸಂಘಟನೆಯ ತಳಹದಿಯಲ್ಲಿ ಸಮಾಜಮುಖಿ ಚಿಂತನೆಗಳೊಂದಿಗೆ ಮುನ್ನಡೆದಾಗ ಸಮುದಾಯದ ಸರ್ವಾಂಗೀಣ ಅಭಿವೃದ್ದಿ ಸಾಕಾರಗೊಳ್ಳುತ್ತದೆ. ಮಡಿವಾಳ ಸಮಾಜ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸಮೃದ್ಧ ಸಮಾಜವಾಗಿ ಮೂಡಿಬರಬೇಕು.
– ಶ್ರೀ ಮುಕ್ತಾನಂದ ಸ್ವಾಮೀಜಿ