Advertisement

ಆರತಿ ಬೆಳಗಿ ಪುಟಾಣಿಗಳಿಗೆ‌ ಸ್ವಾಗತ

11:46 PM May 29, 2019 | mahesh |

ಬಂಟ್ವಾಳ: ತಾಲೂಕಿನಲ್ಲಿ 60 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೇ 29ರಂದು ಪ್ರಾಥಮಿಕ ಶಾಲಾರಂಭ ಸಂಭ್ರಮವನ್ನು ಆಚರಿಸಿದರು. ಹೊಸ ಬಟ್ಟೆ, ಚೀಲ, ಪುಸ್ತಕ, ನಾಡಿನ ಹಿರಿಯರ ಉಪಸ್ಥಿತಿ, ಶಾಲೆಯ ಶಿಕ್ಷಕ-ಶಿಕ್ಷಕಿಯರ ಅಭಿಮಾನದ ಪ್ರೀತಿಯ ಸವಿನುಡಿ, ಹೆತ್ತವರಿಂದ ಬೆಂಗಾವಲು, ಶಾಲೆಯಲ್ಲಿ ಬೆಳಗ್ಗೆ ಬಂದಾಗ ಸ್ವಾಗತ, ಸಿಹಿ ಹಂಚಿ ಖುಷಿ ಪಡಿಸಿದ್ದಲ್ಲದೆ, ಫೋಟೋ ಕ್ಲಿಕ್ಕಿಸಿಕೊಂಡ ಸಂಭ್ರಮವು ದೊರೆಯಿತು.

Advertisement

ಶಾಲಾ ಪರಿಸರವನ್ನು ಶಾಲಾ ಶಿಕ್ಷಕರು, ಸಿಬಂದಿವರ್ಗ ತಳಿರು ತೋರಣಗಳಿಂದ ಶೃಂಗರಿಸಿದ್ದರು. ಅಜ್ಜಿಬೆಟ್ಟು, ಕಲ್ಲಡ್ಕ ಹಿ.ಪ್ರಾ.ಶಾಲೆಗಳಲ್ಲಿ ಸರಕಾರದ ಆದೇಶ ದಂತೆ ಈಗಾಗಲೇ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲು ಎಲ್ಲ ಸಿದ್ಧತೆ ಮಾಡ ಲಾಗಿದೆ. ದಡ್ಡಲಕಾಡು ಹಿ.ಪ್ರಾ.ಶಾಲೆ ಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣವನ್ನು ನೀಡುತ್ತಿರುವುದರಿಂದ ದಾಖಲೆ ಮಟ್ಟದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಆಗಿದೆ. ಬೊಂಡಾಲ, ದಡ್ಡಲಕಾಡು, ವೀರಕಂಭ ಶಾಲೆಗಳಲ್ಲಿ ವಿಶೇಷ ರೀತಿಯಲ್ಲಿ ಶಾಲಾ ಪ್ರಾರಂಭೋತ್ಸವ ನಡೆಯಿತು.

ಇರಾ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವದಲ್ಲಿ ಮಕ್ಕಳನ್ನು ಸುಂದರ ಉಡುಪುಗಳಿಂದ ಸಿಂಗರಿಸಿ, ವಾದ್ಯ ನುಡಿಸಿ, ಪುಷ್ಪಾರ್ಚನೆ ಮಾಡಿ, ಬಿಸ್ಕಿಟ್ ನೀಡಿ ಸ್ವಾಗತಿಸಲಾಯಿತು. ಶಾಲಾ ಶಿಕ್ಷಕಿಯರು, ಹೆತ್ತವರು ಪಾಲ್ಗೊಂಡಿದ್ದರು. ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ರಝಾಕ್‌ ಕುಕ್ಕಾಜೆ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಶಾಲೆ ನಿಮ್ಮ ದೇಗುಲ, ಇಲ್ಲಿ ನೀವು ಪ್ರಾಥಮಿಕ ಶಿಕ್ಷಣ ಪಡೆದು ಉನ್ನತ ಮಟ್ಟಕ್ಕೆ ಏರಬೇಕು. ಶಾಲೆ, ಊರಿಗೆ ಕೀರ್ತಿ ತರಬೇಕು ಎಂದು ಹಾರೈಸಿದರು.

ಸಿಹಿಯೂಟ

ಶಾಲೆಯ ಆರಂಭದ ದಿನದಂದು ಶಾಲೆಯ ಎಲ್ಲ ಮಕ್ಕಳಿಗೆ ಬಿಸಿಯೂಟ, ಸಿಹಿಯೂಟ ವ್ಯವಸ್ಥೆ ಮಾಡಲಾಗಿತ್ತು. ತಾಲೂಕಿಗೆ ಕೊರತೆ ಆಗುವ 102 ಹೊಸ ಗೌರವ ಶಿಕ್ಷಕರ ನೇಮಕಾತಿ ಆದೇಶ ಆಗಿದೆ. ಕುಡಿಯುವ ನೀರಿನ ಕೊರತೆ ಎದುರಿಸುವ ಶಾಲೆಗಳ ಮುಖ್ಯಸ್ಥರು ಸಾಧ್ಯವಿರುವ ಮೂಲಗಳಿಂದ ನೀರು ಸಂಗ್ರಹಿಸುವ ಕ್ರಮ ತೆಗೆದುಕೊಂಡು ಅವಶ್ಯ ಹಂಚಿಕೆಯನ್ನು ಬಳಸಿಕೊಳ್ಳುವಂತೆಯೂ ತಾ.ಪಂ. ಕಾ.ನಿ. ಅಧಿಕಾರಿಯವರು ಸೂಚಿಸಿದ್ದಾರೆ.

Advertisement

ತಾ|ನಲ್ಲಿ ಈಗಾಗಲೇ ಹೆಚ್ಚುವರಿ ಶಿಕ್ಷಕರ ಲಿಸ್ಟ್‌ ಕಳೆದ ಶೈಕ್ಷಣಿಕ ವರ್ಷದಲ್ಲಿ ಮಾಡಲಾಗಿತ್ತು. ಅನಂತರ ಸರಕಾರದ ಸೂಚನೆಯಂತೆ ಯಾವುದೇ ವರ್ಗಾವಣೆ ನಡೆದಿರಲಿಲ್ಲ. ಪ್ರಸ್ತುತ 31 ಶಿಕ್ಷಕರಿಗೆ ತಾಲೂಕು ವ್ಯಾಪ್ತಿಯಲ್ಲಿ ವರ್ಗಾವಣೆ ಆದೇಶ ಆಗಿದೆ. ಅದು ಹೆಚ್ಚುವರಿ ಆದೇಶದ ಕಳೆದ ವರ್ಷದ ಕ್ರಮದಲ್ಲಿ ಆಗಿದೆ. ಪ್ರಸ್ತುತ ವರ್ಷದ ಹೊಸ ಸೇರ್ಪಡೆಯಾಗಿ ಮಕ್ಕಳ ಸಂಖ್ಯೆ ಹೆಚ್ಚಾದಲ್ಲಿ ಅಂತಹ ಶಾಲೆಯ ಶಿಕ್ಷಕರ ವರ್ಗಾವಣೆ ಮಾಹಿತಿ ಸಿಕ್ಕಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

ಮೂಲ ಸೌಕರ್ಯ

ತಾ|ನಲ್ಲಿ ಸರಕಾರಿ, ಅನುದಾನಿತ, ಅನುದಾನ ರಹಿತ ಒಟ್ಟು 404 ಶಾಲೆಗಳಲ್ಲಿ ಸರಕಾರಿ ಪ್ರಾಥಮಿಕ ಶಾಲೆ 195, ಸರಕಾರಿ ಪ್ರೌಢಶಾಲೆ 37, ಖಾಸಗಿ ಅನುದಾನಿತ/ರಹಿತ ಶಾಲೆಗಳು 172 ಇದ್ದು, ಮೇ 29ರಂದು ಶಾಲಾ ಪ್ರಾರಂಭೋತ್ಸವ ನಡೆದಿದೆ. ಸುಮಾರು 60 ಸಾವಿರ ವಿದ್ಯಾರ್ಥಿಗಳು ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಸಿಆರ್‌ಪಿ/ ಬಿಆರ್‌ಪಿ 14 ತಂಡಗಳನ್ನು ರಚಿಸಿದ್ದು, ಅವರು ಎಲ್ಲ ಶಾಲೆಗಳಿಗೆ ಮೇ 29ರಿಂದ ಜೂ. 8ರ ತನಕ ಭೇಟಿ ನೀಡಿ ವೇಳಾಪಟ್ಟಿ ಪರಿಶೀಲನೆ, ಮೂಲ ಸೌಕರ್ಯ, ಕುಂದುಕೊರತೆ ಪರಿಶೀಲನೆ ಮಾಡಿ ವರದಿ ಸಲ್ಲಿಸುವರು. ಅದರಂತೆ ಮುಂದಿನ ಕ್ರಮಗಳ ಬಗ್ಗೆ ಸರಕಾರಕ್ಕೆ ಮಾಹಿತಿ ಸಲ್ಲಿಸಲಾಗುವುದು.
– ಎನ್‌. ಶಿವಪ್ರಕಾಶ್‌,ಕ್ಷೇತ್ರ ಶಿಕ್ಷಣಾಧಿಕಾರಿ, ಬಂಟ್ವಾಳ
Advertisement

Udayavani is now on Telegram. Click here to join our channel and stay updated with the latest news.

Next