ಬಂಟ್ವಾಳ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಗ್ಗೆ 9.55ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ನೇತೃತ್ವದಲ್ಲಿ ಆರಂಭವಾದ ಸಾಮರಸ್ಯ ನಡಿಗೆ ಯಶಸ್ವಿಯಾಗಿ ಮಾಣಿಯಾಗಿ ನೇರಳಕಟ್ಟೆಗೆ ತಲುಪಿತು. ಫರಂಗಿಪೇಟೆಯಿಂದ ನಡಿಗೆ ಆರಂಭಿಸಿದ ಸಚಿವರು ವಿಶ್ರಾಂತಿ ಪಡೆಯದೆ ಮೆಲ್ಕಾರ್ ತನಕ ಸಾಗಿದರು. ಸಾಕಷ್ಟು ಸಂಖ್ಯೆಯಲ್ಲಿ ಜನರು ಸಾಮರಸ್ಯ ನಡಿಗೆಯಲ್ಲಿ ಪಾಲ್ಗೊಂಡಿದ್ದರು. ಜಾಥಾದ ಉದ್ದಕ್ಕೂ ಶಾಂತಿ ಸಾಮರಸ್ಯ ಘೋಷಣೆಗಳನ್ನು ಹೊರತು ಇನ್ಯಾವುದೇ ಘೋಷಣೆಗಳು ಇರಲಿಲ್ಲ.
ಗಂಜಿ ಚಟ್ನಿ ಊಟ
ಫರಂಗಿಪೇಟೆಯಿಂದ ಆರಂಭವಾಗಿದ್ದ ಜಾಥಾ ಬಿ.ಸಿ.ರೋಡ್ ತಲುಪುವಾಗ ಮಧಾಹ್ನ 1.15. ಉರಿಬಿಸಿಲಿನ ಹೊತ್ತಿನ ಸಂದರ್ಭ ಸಚಿವರಿಗೆ ಕೊಡೆಯನ್ನು ಹಿಡಿದು ನೆರಳಿನ ವ್ಯವಸ್ಥೆ ಮಾಡಲಾಗಿತ್ತು. ಮೆಲ್ಕಾರ್‌ಗೆ 2. 30ಕ್ಕೆ ತಲುಪಿ, ಅಲ್ಲಿ ಊಟ ಮಾಡಿದರು. ಬಳಿಕ ಅಲ್ಲಿಂದ ಹೊರಟು ಸಂಜೆ 4ರ ಸುಮಾರಿಗೆ ಕಲ್ಲಡ್ಕ ತಲುಪಿದರು. ಮೆಲ್ಕಾರ್ ಬಿರ್ವ ಸೆಂಟರ್‌ನಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟಕ್ಕೆ ಬೆಳ್ತಿಗೆ ಮತ್ತು ಕುಚ್ಚಲು ಅಕ್ಕಿ ಗಂಜಿ, ತರಕಾರಿ ಸಾರು, ತೊಂಡೆಕಾಯಿ ಕಡ್ಲೆ ಪಲ್ಯ, ಉಪ್ಪಿನಕಾಯಿ, ಚಟ್ನಿ, ಪಾಯಸ ನೀಡಲಾಗಿತ್ತು.
ಜಾಥಾ ಉದ್ಘಾಟನೆ ಬಳಿಕ ಬಂದ ಸಚಿವ ಯು.ಟಿ.ಖಾದರ್ ನೇರವಾಗಿ ಜಾಥಾದಲ್ಲಿ ಪಾಲ್ಗೊಂಡರು. ವಿವಿಧ ಪಕ್ಷಗಳ ನಾಯಕರಾದ ಅಮರನಾಥ ಶೆಟ್ಟಿ, ಶ್ರೀರಾಮ ರೆಡ್ಡಿ, ವಸಂತ ಆಚಾರಿ, ವಿ. ಕುಕ್ಯಾನ್, ಶಾಸಕರಾದ ಟಿ. ಶಕುಂತಳಾ ಶೆಟ್ಟಿ, ವಸಂತ ಬಂಗೇರ, ಜೆ. ಆರ್.ಲೋಬೋ, ಮೊಯಿದಿನ್ ಬಾವಾ, ಅಭಯಚಂದ್ರ ಜೈನ್, ಐವನ್ ಡಿ’ಸೋಜಾ, ಮೇಯರ್ ಕವಿತಾ ಸನಿಲ್, ನಟ ಪ್ರಕಾಶ್ ರೈ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಬಿ. ಪದ್ಮಶೇಖರ ಜೈನ್, ಮಮತಾ ಡಿ.ಎಸ್. ಗಟ್ಟಿ, ಮಂಜುಳ ಮಾವೆ, ಎಂ.ಎಸ್. ಮಹಮ್ಮದ್, ಶಾಹುಲ್ ಹಮೀದ್, ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಟಾಸ್ ಅಲಿ, ಕೆ. ಸಂಜೀವ ಪೂಜಾರಿ, ಪ್ರಭಾಕರ ಪ್ರಭು, ಧನಲಕ್ಷ್ಮೀ ಸಿ. ಬಂಗೇರ, ಎ. ಉಸ್ಮಾನ್ ಕರೋಪಾಡಿ, ರತ್ನಾವತಿ, ಮಂಜುಳ, ಪದ್ಮಾವತಿ ಬಿ. ಪೂಜಾರಿ, ಮಲ್ಲಿಕಾ ವಿ. ಶೆಟ್ಟಿ, ಗಾಯತ್ರಿ ಸಪಲ್ಯ, ಶಿವಪ್ರಸಾದ್, ಪದ್ಮಶ್ರೀ, ಸವಿತಾ ಹೇಮಂತ ಕರ್ಕೇರ, ಮಂಜುಳಾ ಕುಶಲ ಎಂ., ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ, ಮಾಯಿಲಪ್ಪ ಸಾಲ್ಯಾನ್, ಕೆ.ಪದ್ಮನಾಭ ರೈ, ರಾಜವರ್ಮ ಬಲ್ಲಾಳ್, ಡಾ| ಸಿದ್ದನಗೌಡ ಪಾಟೀಲ್, ರಾಜಶೇಖರ ಕೋಟ್ಯಾನ್, ವಾಸುದೇವ ಬೋಳಾರ, ಟಿ. ನಾರಾಯಣ ಪೂಜಾರಿ, ಪಕ್ಷ ಪ್ರಮುಖರಾದ ಅಶೋಕ್ ಕುಮಾರ್ ಬರಿಮಾರು, ಜಗನ್ನಾಥ ಚೌಟ, ಬಿ.ಕೆ. ಇದಿನಬ್ಬ, ಕಣಚೂರು ಮೋನು, ರವಿಕಿರಣ್ ಪುಣಚ, ಚಂದು ಎಲ್., ರಘು ಎಕ್ಕಾರ್, ದೇವದಾಸ್ ಸಹಿತ ಅನೇಕ ಪ್ರಮುಖರು ಜತೆಗಿದ್ದರು. ಸಾಮರಸ್ಯ ನಡಿಗೆ ಸೌಹಾರ್ದದೆಡೆಗೆ ಎಂಬ ಘೋಷಣೆ ಇದ್ದ ಬಿಳಿಯ ಟೊಪ್ಪಿಯನ್ನು ಎಲ್ಲರಿಗೂ ನೀಡಲಾಗಿತ್ತು.
ದಾರಿ ಉದ್ದಕ್ಕೂ ಜಾಥಾದಲ್ಲಿ ಭಾಗವಹಿಸಿದವರಿಗೆ ತಿನ್ನಲು ಬಿಸ್ಕತ್, ಕುಡಿಯುವ ನೀರನ್ನು ವಾಹನದ ಮೂಲಕ ವಿತರಿಸಲಾಗಿತ್ತು. ತುಂಬೆಯಲ್ಲಿ ಬಾದಾಮಿ ಹಾಲು, ಕೈಕಂಬದಲ್ಲಿ ಕಲ್ಲಂಗಡಿ ಜ್ಯೂಸ್, ಬಿ.ಸಿ.ರೋಡ್, ಪಾಣೆಮಂಗಳೂರಲ್ಲಿ ಮಜ್ಜಿಗೆ ವಿತರಿ ಸಲಾಗಿತ್ತು. ರಸ್ತೆಯ ಒಂದೇ ಬದಿಯಲ್ಲಿ ಜಾಥಾ ಚಲಿಸುವಂತೆ ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.ಫರಂಗಿ ಪೇಟೆಯಲ್ಲಿ ವೇದಿಕೆಯಿಂದ ಗಣ್ಯರು ಇಳಿಯುತ್ತಿದ್ದಂತೆ ಪೊಲೀಸರು ಹೈವೇಯಲ್ಲಿ ವಾಹನ ಸಂಚಾರ ನಿರ್ಬಂಧಿಸಿದರು. ಇದರಿಂದ ಸ್ವಲ್ಪ ಹೊತ್ತು ಸಂಚಾರ ಅಡಚಣೆ ಉಂಟಾಗಿತ್ತು.
ಭದ್ರತಾ ವ್ಯವಸ್ಥೆ
ಜಿಲ್ಲಾ ಪೊಲೀಸ್ ಅಧೀಕ್ಷಕ ಸುಧೀರ್ ಕುಮಾರ್ ರೆಡ್ಡಿ ಭದ್ರತಾ ವ್ಯವಸ್ಥೆಯ ಬಗ್ಗೆ ಸ್ಥಳದಲ್ಲಿದ್ದು ನಿರ್ದೇಶನ ನೀಡುತ್ತಿದ್ದರು. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಕೂಡ ಜಾಥಾದ ಶಾಂತಿ-ಸುವ್ಯವಸ್ಥೆ ಪರಿಶೀಲಿಸಿದ್ದರು. ಬಂಟ್ವಾಳ ನಗರ, ಗ್ರಾಮೀಣ ಮತ್ತು ಜಿಲ್ಲೆಯ ವಿವಿಧ ಠಾಣೆಗಳಿಂದ ಹೆಚ್ಚುವರಿ ಪೊಲೀಸರನ್ನು ಭದ್ರತೆಗೆ ಬಳಸಲಾಗಿತ್ತು. ಡಿವೈಎಸ್‌ಪಿ, ಅಡಿಷನಲ್ ಎಸ್‌ಪಿ, ಇನ್‌ಸ್ಪೆಕ್ಟರ್‌ಗಳನ್ನು ನಿಯೋಜಿಸಿದ್ದು, ಆಯಕಟ್ಟಿನ ಸ್ಥಳಗಳಲ್ಲಿ ಗನ್ ಸಹಿತ ಪೊಲೀಸ್ ಸಿಬಂದಿ ಕಾರ್ಯ ನಿರತರಾಗಿದ್ದರು. ನಗರ ಕೇಂದ್ರಗಳಲ್ಲಿ ಎರಡೆರಡು ಪ್ಲಟೂನ್ ಪೊಲೀಸ್ ತುಕಡಿಗಳನ್ನು, ಕ್ಷಿಪ್ರ ಕಾರ್ಯಾಚರಣೆ ಪಡೆ, ಆರೋಗ್ಯ ಇಲಾಖೆಯ ಆ್ಯಂಬುಲೆನ್ಸ್, ಅಗ್ನಿ ಶಾಮಕ ದಳ ಜತೆಗಿತ್ತು.
ವದಂತಿ
ಬೆಳಗ್ಗೆ ಫರಂಗಿ ಪೇಟೆ ಬಳಿ ಬಸ್ಸುಗಳ ಮೇಲೆ ಕಲ್ಲು ತೂರಲಾಗಿದೆ ಎಂಬ ವದಂತಿ ಕೇಳಿಬಂದಿತ್ತು. ಆದರೆ ಇದನ್ನು ಪೊಲೀಸರಾಗಲೀ ಅಥವಾ ಜಿಲ್ಲಾಡಳಿತವಾಗಲೀ ದೃಢಪಡಿಸಲಿಲ್ಲ. ಬಂಟ್ವಾಳ ನಗರ ಅಥವಾ ಗ್ರಾಮಾಂತರ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿಲ್ಲ.