Advertisement

ಬಂಟ್ವಾಳ, ಪಾಣೆಮಂಗಳೂರು ಕಾಂಗ್ರೆಸ್‌ ಕಾರ್ಯಕರ್ತರ ಸಭೆ

01:32 PM Jan 01, 2018 | Team Udayavani |

ಬಂಟ್ವಾಳ: ನಾನು ಜಾತಿವಾದಿ, ಮತೀಯವಾದಿ ಎಂದು ವಿಪಕ್ಷಗಳೂ ಹೇಳಿಲ್ಲ. ನನ್ನನ್ನು ಜಾತ್ಯತೀತವಾದಿ ಎಂದರೆ
ಸಂತೋಷಪಡುತ್ತೇನೆ. ನಾನು ಜನಾರ್ದನ ಪೂಜಾರಿ ಬಗ್ಗೆ ಯಾವುದೇ ಕೆಟ್ಟ ಮಾತು ಆಡಿಲ್ಲ ಎಂದು ಜಿಲ್ಲಾ
ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು. ರವಿವಾರ ಬಿ.ಸಿ. ರೋಡ್‌ ಗಣದಪಡ್ಪು  ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಬಂಟ್ವಾಳ ಮತ್ತು ಪಾಣೆಮಂಗಳೂರು ಕಾಂಗ್ರೆಸ್‌ ಕಾರ್ಯಕರ್ತರ ಸಭೆಯನ್ನು
ಉದ್ದೇಶಿಸಿ ಅವರು ಮಾತನಾಡಿದರು.

Advertisement

ಲೋಕಸಭಾ ಟಿಕೆಟ್‌ಗೆ ಜಿಲ್ಲೆಯಿಂದ ಇಬ್ಬರ ಹೆಸರು ಪ್ರಸ್ತಾವವಾಗಿದ್ದರೂ ಪೂಜಾರಿ ಅವರೊಬ್ಬರದೇ ಹೆಸರು ಕಳುಹಿಸಿದ್ದೆ. ಅವರ ಟಿಕೆಟ್‌ ಕನ್ಫರ್ಮ್ ಆಗಲು ದಿಲ್ಲಿಯಲ್ಲಿ 15 ದಿನ ಕಾದಿದ್ದೆ. ಪೂಜಾರಿ ಗೆಲ್ಲುತ್ತಾರೆ ಎಂದು ನಾನು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಹೇಳಿದ್ದೆ. ಸೋತಾಗ ಎಲ್ಲಿದೆ ನಿಮ್ಮ ರಕ್ತದಲ್ಲಿ ಬರೆದಿರುವ ಮಾತುಗಳು ಎಂದು ಸೊರಕೆ ಅವರು ಪ್ರಶ್ನಿಸಿದ್ದರು ಎಂದರು.

ಜಿಲ್ಲೆಯಲ್ಲಿ ಜನತಾದಳ ಅಥವಾ ಎಸ್‌ಡಿಪಿಐ ಒಂದೂ ಸೀಟನ್ನು ಗೆಲ್ಲಲು ಸಾಧ್ಯವಿಲ್ಲ. ಜಾತ್ಯತೀತ ಮುಸಲ್ಮಾನರು ನನಗೆ ಮತ ನೀಡಿದ್ದರು. ಅದರಿಂದ ಗೆದ್ದಿದ್ದೇನೆ. ನನ್ನೆದುರು ಹಿಂದೆ ಜೆಡಿಎಸ್‌ ನಿಂದ ಮುಸ್ಲಿಂ ಅಭ್ಯರ್ಥಿಯೊಬ್ಬರು ಸ್ಪರ್ಧಿಸಿದ್ದರೂ ಮುಸಲ್ಮಾನರು ಅವರ ಬದಲು ನನಗೇ ಮತ ನೀಡಿದ್ದರು. ಇದು ಮುಸಲ್ಮಾನರ ಜಾತ್ಯತೀತತೆ ಅಲ್ಲವೇ ಎಂದು ರೈ ಪ್ರಶ್ನಿಸಿದರು.

ಹರೀಶ್‌ ಪೂಜಾರಿ, ಅಬ್ದುಲ್ಲ, ಜಲೀಲ್‌, ಇಕ್ಬಾಲ್‌, ನಾಸೀರ್‌, ಅಶ್ರಫ್‌, ಶರತ್‌ ಕೊಲೆಯನ್ನು ಮಾಡಿದವರು ಮತೀಯ
ವಾದಿ ಎರಡು ಸಂಘಟನೆಗಳು. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಗರಿಷ್ಠ ಸಂಖ್ಯೆಯ ಜಿ.ಪಂ. ಸ್ಥಾನಗಳು ಬಂದಿವೆ. ಪುರಸಭೆ, ತಾ.ಪಂ.ಗಳಲ್ಲಿ ಕಾಂಗ್ರೆಸ್‌ ಆಡಳಿತ ಪಡೆದಿದೆ. ಗ್ರಾ.ಪಂ.ಗಳು ಬಹುತೇಕ ಕಾಂಗ್ರೆಸ್‌ ಸುಪರ್ದಿಯಲ್ಲಿವೆ ಎಂದರು.

ನನ್ನ ಜಮೀನಿನ ಬಗ್ಗೆ ಕೆಲವರು ಪ್ರಶ್ನಿಸುತ್ತಾರೆ. ನಾನೊಬ್ಬ ಸಾಮಾನ್ಯ ಕೃಷಿಕ. ಪ್ರಗತಿಪರ ಕೃಷಿಕನಲ್ಲ. ಅಳತೆಮಾಡಿದರೆ ಯಾರ ಬಳಿ ಹೆಚ್ಚು ಜಮೀನಿದೆ ಎಂಬುದು ಗೊತ್ತಾಗುತ್ತ¨ಕಲ್ಲಡ್ಕ ಶ್ರೀರಾಮ ಮಂದಿರದ ಜಾಗ ಪರಂಬೋಕು ಜಮೀನು ಎಂಬುದಕ್ಕೆ ನಮ್ಮಲ್ಲಿ ದಾಖಲೆಗಳಿವೆ. ಆದರೆ, ಆ ಬಗ್ಗೆ ಆಕ್ಷೇಪ ಮಾಡುವುದಿಲ್ಲ ಎಂದರು.

Advertisement

ತಮ್ಮ ಮೇಲೆ ಯಾರೋ ಅಪಪ್ರಚಾರ ಮಾಡುತ್ತಿರುವುದರಿಂದ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳು ಬರುತ್ತಿವೆ. ಇದನ್ನು ಯಾರು ಮಾಡಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಸಚಿವರು ಹೇಳಿದಾಗ, ಸಭೆಯಲ್ಲಿ ಹರಿಕೃಷ್ಣ ಬಂಟ್ವಾಳ್‌ ಅವರಿಗೆ ಧಿಕ್ಕಾರದ ಕೂಗು ಕೇಳಿಬಂತು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌ ಮಾತನಾಡಿ, ಗುಜರಾತ್‌ನಲ್ಲಿ ವಾಮ ಮಾರ್ಗದ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂತು. ಆರೆಸ್ಸೆಸ್‌ಪ್ರಯೋಗದಿಂದ ಜಿಲ್ಲೆಯಲ್ಲಿ ದುಷ್ಕೃತ್ಯಗಳು ನಡೆಯುತ್ತಿವೆ ಎಂದು ಆರೋಪಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಯು.ಬಿ. ವೆಂಕಟೇಶ್‌, ಉಸ್ತುವಾರಿ ಸವಿತಾ ರಮೇಶ್‌, ಎಂ.ಎಲ್‌. ಮೂರ್ತಿ ಮಾತನಾಡಿ, ಚುನಾವಣೆ ಎದುರಿಸಲು ಸಾಕಷ್ಟು ತಯಾರಿಗಳು ಆಗಬೇಕು. ಕಾರ್ಯಕರ್ತರು ಪೂರ್ಣ ಮನಸ್ಸಿನಿಂದ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು.

ಬಿ.ಎಚ್‌. ಖಾದರ್‌, ಮಂಜುಳಾ ಮಾವೆ, ಮಮತಾ ಗಟ್ಟಿ, ಎಂ.ಎಸ್‌. ಮಹಮ್ಮದ್‌, ಬಿ. ಪದ್ಮಶೇಖರ ಜೈನ್‌, ಚಂದ್ರಪ್ರಕಾಶ ಶೆಟ್ಟಿ, ಪಿಯೂಸ್‌ ಎಲ್‌. ರೊಡ್ರಿಗಸ್‌, ಮಲ್ಲಿಕಾ ಶೆಟ್ಟಿ, ಜಯಂತಿ, ಮಾಯಿಲಪ್ಪ ಸಾಲ್ಯಾನ್‌, ಪ್ರಶಾಂತ್‌ ಕುಲಾಲ್‌, ಚಂದ್ರಹಾಸ ಕರ್ಕೇರ, ಪಿ. ರಾಮಕೃಷ್ಣ ಆಳ್ವ, ಮಹಮ್ಮದ್‌ ನಂದರಬೆಟ್ಟು, ವೆಂಕಪ್ಪ ಪೂಜಾರಿ, ಬಿ.ಕೆ. ಇದಿನಬ್ಬ, ಸದಾಶಿವ ಬಂಗೇರ, ಪದ್ಮನಾಭ ರೈ, ಚಂದ್ರಶೇಖರ ಪೂಜಾರಿ, ಐಡಾ ಸುರೇಶ್‌, ಸಾವುಲ್‌ ಹಮೀದ್‌, ವಾಸು ಪೂಜಾರಿ, ಮಲ್ಲಿಕಾ ಪಕ್ಕಳ, ರಾಜಶೇಖರ ನಾಯಕ್‌, ಅಲ್ಬರ್ಟ್‌ ಮಿನೇಜಸ್‌, ವಲಯ, ಬ್ಲಾಕ್‌ ಕಾಂಗ್ರೆಸ್‌ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇತರ ಪಕ್ಷಗಳಿಂದ ಕಾಂಗ್ರೆಸ್‌ ಸೇರಿದ ಹಲವು ಕಾರ್ಯಕರ್ತರನ್ನು ಶಾಲು ಹೊದೆಸಿ, ಗುಲಾಬಿ ಹಾಗೂ ಪಕ್ಷದ ಧ್ವಜ ನೀಡಿ, ಸ್ವಾಗತಿಸಲಾಯಿತು. ಬಿಲ್ಲವ ಸಮಾಜದವರು ಗರಿಷ್ಠ ಸಂಖ್ಯೆಯಲ್ಲಿ ಕಾಂಗ್ರೆಸ್‌ ಸೇರ್ಪಡೆಗೊಂಡರು.

ಕಾರ್ಯಕ್ರಮಕ್ಕೆ ಮೊದಲು ಬಿ.ಸಿ. ರೋಡ್‌ನ‌ಲ್ಲಿ ಪಾಣೆಮಂಗಳೂರು ಬ್ಲಾಕ್‌ ಕಾಂಗ್ರೆಸ್‌ ನೂತನ ಕಚೇರಿ ಕಟ್ಟಡವನ್ನು ಟೇಪ್‌ ಕತ್ತರಿಸಿ, ದೀಪ ಬೆಳಗಿಸಿ ಸಚಿವ ರಮಾನಾಥ ರೈ ಉದ್ಘಾಟಿಸಿದರು. ಪಾಣೆಮಂಗಳೂರು
ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಬ್ಟಾಸ್‌ ಅಲಿ ಸ್ವಾಗತಿಸಿ, ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರ್ವಹಿಸಿ,
ವಂದಿಸಿದರು.

ಪೂಜಾರಿ ಹೇಳಿದರೆ ಆಣೆ ಮಾಡುವೆ
ಜನಾರ್ದನ ಪೂಜಾರಿ ಅವರಿಗೆ ನನ್ನಿಂದ ಅವಮಾನ ಆಗಿದೆ ಎಂಬ ಅಪಪ್ರಚಾರದ ಬಳಿಕ ಅವರಲ್ಲಿ ವೈಯಕ್ತಿಕವಾಗಿ
ಮಾತನಾಡಿ, ನಿಮಗೆ ನನ್ನಿಂದ ಏನಾದರೂ ನೋವಾಗಿದ್ದರೆ ಕ್ಷಮಿಸಿ ಎಂದು ಕೇಳಿದ್ದೇನೆ. ಅವರು ಅಂತಹ ಯಾವುದೇ ವಿಚಾರ ಪ್ರಸ್ತಾವಿಸಿಲ್ಲ. ನಾನು ಅವರನ್ನು ನಿಂದಿಸಿಲ್ಲ ಎಂದು ಆಣೆ ಮಾಡಲು ಕೆಲವರು ಕೇಳುತ್ತಾರೆ. ಪೂಜಾರಿ ಅವರ ಕುಟುಂಬಸ್ಥರು, ಮಕ್ಕಳು ಹೇಳಿದರೆ ನಾನು ಅದಕ್ಕೂ ಸಿದ್ಧ. ಇದೇ ಕೊನೆ. ಮುಂದಕ್ಕೆ ಇಂತಹ ಮಾತುಗಳಿಗೆ ಉತ್ತರಿಸುವುದಿಲ್ಲ ಎಂದು ಸಚಿವ ರಮಾನಾಥ ರೈ ತಿಳಿಸಿದರು. 

ಪ್ರತಿ ಚುನಾವಣೆ ಬಂದಾಗಲೂ ಬಿಜೆಪಿ ಅಪಪ್ರಚಾರ ಮಾಡುತ್ತದೆ. ಈಗಲೂ ಅದು ನಡೆಯುತ್ತಿದೆ. ಕಾಂಗ್ರೆಸ್‌ ಕಾರ್ಯಕರ್ತರು ಮನೆಮನೆ ಭೇಟಿ ಕಾರ್ಯಕ್ರಮವನ್ನು ನಿರಂತರ ನಡೆಸಬೇಕು. ಮುಂದಿನ ದಿನಗಳಲ್ಲಿ
ನಾನೇ ಬೂತ್‌ ಮಟ್ಟದಲ್ಲಿ ಕೆಲಸ ಮಾಡುತ್ತೇನೆ. ನಾನು ಶಾಂತಿಗಾಗಿ ನಡೆಸಿದ ಕಾಲ್ನಡಿಗೆ ಜಾಥಾ ಅತ್ಯಂತ
ಯಶಸ್ವಿಯಾಗಿದೆ.
– ರಮಾನಾಥ ರೈ , ಸಚಿವ

Advertisement

Udayavani is now on Telegram. Click here to join our channel and stay updated with the latest news.

Next