Advertisement

ಬಂಟ್ವಾಳ ಪುರಸಭೆ ವ್ಯಾಪ್ತಿ: ಘೋಷಣೆಯಾಗದ ವ್ಯಾಪಾರ ವಲಯ

10:51 AM Dec 22, 2022 | Team Udayavani |

ಬಂಟ್ವಾಳ: ಬಂಟ್ವಾಳ ತಾಲೂಕು ಕೇಂದ್ರ ಬಿ.ಸಿ.ರೋಡ್‌ ಸೇರಿದಂತೆ ಪುರಸಭೆ ವ್ಯಾಪ್ತಿಯ ಬಂಟ್ವಾಳ ಪೇಟೆ, ಮೆಲ್ಕಾರ್‌, ಕೈಕಂಬ ಭಾಗದಲ್ಲಿ ಬೀದಿಬದಿ ವ್ಯಾಪಾರದಿಂದಾಗುವ ತೊಂದರೆ ಕುರಿತು ಆರೋಪಗಳು ಕೇಳಿ ಬರುತ್ತಿದ್ದು, ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಿರುವ ಪುರಸಭೆಯು ಅವರಿಗೆ ನಿರ್ದಿಷ್ಟ ವಲಯವನ್ನು ಇನ್ನೂ ಘೋಷಣೆ ಮಾಡದೇ ಇರುವುದರಿಂದ ಅವರು ಫ‌ುಟ್‌ಪಾತ್‌ಗಳಲ್ಲೇ ವ್ಯಾಪಾರ ಮಾಡಬೇಕಾದ ಸ್ಥಿತಿ ಇದೆ.

Advertisement

ಪುರಸಭೆ ವ್ಯಾಪ್ತಿಯ ಪ್ರಮುಖ ಜಂಕ್ಷನ್‌ಗಳು ಸೇರಿದಂತೆ ಹಲವು ಭಾಗಗಳಲ್ಲಿ ದಿನ ಕಳೆದಂತೆ ರಸ್ತೆ ಬದಿಗಳಲ್ಲಿ ಸರಕುಗಳನ್ನಿಟ್ಟು ಮಾರಾಟ ಮಾಡುವ ವ್ಯಾಪಾರಿಗಳ ಸಂಖ್ಯೆ ಹೆಚ್ಚುತ್ತಿದ್ದು, ಪುರಸಭೆಯಿಂದ ಗುರುತಿನ ಚೀಟಿ ಪಡೆದವರ ಜತೆಗೆ ಪಡೆಯದವರು ಕೂಡ ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದಾರೆ. ಬೀದಿ ಬದಿ ವ್ಯಾಪಾರಿಗಳ ವಲಯವಿಲ್ಲದೆ ಅವರನ್ನು ವ್ಯಾಪಾರ ಮಾಡುತ್ತಿರುವ ಸ್ಥಳದಿಂದ ಎಬ್ಬಿಸುವಂತೆಯೂ ಇಲ್ಲ ಎನ್ನಲಾಗುತ್ತಿದೆ.

ಅರ್ಧಕ್ಕೆ ನಿಂತ ವಲಯ ಗುರುತು ಕೆಲಸ ಪುರಸಭೆಯ ಪ್ರತೀ ಸಾಮಾನ್ಯ ಸಭೆಗಳಲ್ಲೂ ಬೀದಿ ಬದಿ ವ್ಯಾಪಾರದ ಕುರಿತು ಸಾಕಷ್ಟು ಚರ್ಚೆ ಯಾಗುತ್ತಿದ್ದು, ನಿರ್ದಿಷ್ಟ ಸ್ಥಳವನ್ನು ಗುರುತು ಮಾಡಿ ಅವರ ವಲಯವನ್ನಾಗಿ ಘೋಷಣೆ ಮಾಡುವ ಕಾರ್ಯ ನಡೆದಿಲ್ಲ. ಈ ಹಿಂದೆ ಪುರಸಭೆ ವ್ಯಾಪ್ತಿಯ ತಲಪಾಡಿ, ಬಂಟ್ವಾಳ ಪೇಟೆಯ ಕೊಟ್ರಮ್ಮನಗಂಡಿ, ಬಡ್ಡಕಟ್ಟೆ ಭಾಗದಲ್ಲಿ ಬೀದಿ ಬದಿ ವ್ಯಾಪಾರಿ ವಲಯ ಮಾಡುವ ಪ್ರಸ್ತಾವವಿದ್ದರೂ ಯಾವುದೂ ಕೂಡ ಅನುಷ್ಠಾನಕ್ಕೆ ಬಂದಿಲ್ಲ.

ಬಿ.ಸಿ.ರೋಡ್‌ನ‌ ತಲಪಾಡಿಯಲ್ಲಿ ವ್ಯಾಪಾರಿ ವಲಯ ಮಾಡುವ ಪ್ರಸ್ತಾವ ಅಂತಿಮಗೊಂಡಿದೆ ಎಂಬ ಮಾತು ಕೇಳಿಬಂದಿದ್ದರೂ, ಅದು ಕೂಡ ಹಾಗೇ ಉಳಿದುಕೊಂಡಿದೆ. ಸಾಮಾನ್ಯವಾಗಿ ಒಂದು ಪ್ರದೇಶವನ್ನು ಬೀದಿ ಬದಿ ವ್ಯಾಪಾರಿಗಳ ವಲಯ ಎಂದು ಘೋಷಣೆ ಮಾಡಿದರೆ ಅದಕ್ಕೆ ಬೇಕಾದ ಮೂಲ ಸೌಕರ್ಯವನ್ನು ನೀಡುವ ಕಾರ್ಯವನ್ನೂ ಪುರಸಭೆ ಮಾಡಬೇಕಾಗುತ್ತದೆ. ಇಲ್ಲದೇ ಇದ್ದರೆ ಬೀದಿ ಬದಿ ವ್ಯಾಪಾರ ಅಧಿನಿಯಮ ಕಾಯ್ದೆಯನ್ನು ಉಲ್ಲಂಘನೆ ಮಾಡಿದಂತಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿದೆ.

ರವಿವಾರ ಅನಧಿಕೃತ ಸಂತೆ ಬಿ.ಸಿ.ರೋಡ್‌ನ‌ಲ್ಲಿ ಪ್ರತೀ ರವಿವಾರ ನಡೆಯುವ ಅನಧಿಕೃತ ಸಂತೆಯ ಕುರಿತೇ ಸಾಕಷ್ಟು ಆರೋಪಗಳು ಕೇಳಿ ಬರುತ್ತಿದ್ದು, ಅವರಿಗೆ ವ್ಯಾಪಾರ ಮಾಡಲು ಅವಕಾಶ ಕೊಟ್ಟವರು ಯಾರು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಎಲ್ಲಿಂದಲೋ ಬಂದ ವ್ಯಾಪಾರಿಗಳು ಬಿ.ಸಿ.ರೋಡ್‌ನ‌ ಹೆದ್ದಾರಿ ಬದಿ, ಫ್ಲೈಓವರ್‌ ತಳಭಾಗದಲ್ಲಿ ತರಕಾರಿ, ದಿನಸಿ ಸಾಮಗ್ರಿ, ಹಣ್ಣುಹಂಪಲು ವ್ಯಾಪಾರ ಮಾಡುತ್ತಿದ್ದು, ಆದರೆ ಅವರ್ಯಾರು ಕೂಡ ಪುರಸಭೆಯಿಂದ ಗುರುತಿನ ಚೀಟಿ ಪಡೆದ ವ್ಯಾಪಾರಿಗಳಲ್ಲ ಎನ್ನಲಾಗುತ್ತಿದೆ.

Advertisement

ಅವರು ಪುರಸಭೆಯಿಂದ ಲೈಸನ್ಸ್‌ ಪಡೆದ ಅಂಗಡಿಗಳ ಮುಂದೆಯೇ ಅನಧಿಕೃತ ವ್ಯಾಪಾರ ಮಾಡುತ್ತಿದ್ದರೂ ಪುರಸಭೆ ಸುಮ್ಮನಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ರೀತಿಯ ವ್ಯಾಪಾರದಿಂದ ಹೆದ್ದಾರಿ ಬದಿ ನಡೆದುಕೊಂಡು ಹೋಗುವವರಿಗೆ ತೊಂದರೆಯಾಗುವ ಜತೆಗೆ ವಾಹನಗಳ ಪಾರ್ಕಿಂಗ್‌ಗೆ ಅಡ್ಡಿಯಾಗುತ್ತಿದೆ. ಎಲ್ಲೆಂದರಲ್ಲಿ ವ್ಯಾಪಾರ ಮಾಡುವ ಬೀದಿ ಬದಿ ವ್ಯಾಪಾರಿಗಳು ನಿರ್ದಿಷ್ಟ ವಲಯಕ್ಕೆ ಹೋದರೆ ಉಳಿದಂತೆ ಈ ರೀತಿಯ ಅನಧಿಕೃತ ವ್ಯಾಪಾರಗಳಿಗೆ ಬ್ರೇಕ್‌ ಹಾಕುವುದಕ್ಕೆ ಸುಲಭವಾಗಲಿದೆ.

ಅನಧಿಕೃತ ವ್ಯಾಪಾರದ ವಿರುದ್ಧ ಕ್ರಮ ಪ್ರಸ್ತುತ ಗುರುತಿನ ಚೀಟಿ ಪಡೆದಿರುವ ಬೀದಿ ಬದಿ ವ್ಯಾಪಾರಿಗಳಿಂದ ಯಾವುದೇ ಸಮಸ್ಯೆ ಇಲ್ಲ. ಅವರು ಫ‌ುಟ್‌ಪಾತ್‌ ಅತಿಕ್ರಮಿಸಿದ್ದರೆ ಅದನ್ನು ತೆರವು ಮಾಡುತ್ತೇವೆ. ಪ್ರಸ್ತುತ ಗುರುತಿನ ಚೀಟಿ ಪಡೆಯದೆ ಅನಧಿಕೃತ ವ್ಯಾಪಾರ ಮಾಡುತ್ತಿರುವವರಿಂದ ತೊಂದರೆಯಾಗುತ್ತಿದ್ದು, ಅದರ ವಿರುದ್ಧ ಕಾರ್ಯಾಚರಣೆ ನಡೆಸಲಿದ್ದೇವೆ. ವಲಯ ಘೋಷಣೆಯ ಕುರಿತು ಈಗಾಗಲೇ 2-3 ಮೂರು ಸ್ಥಳಗಳನ್ನು ಪರಿಶೀಲನೆ ನಡೆಸಿದ್ದೇವೆ.
-ಮಹಮ್ಮದ್‌ ಶರೀಫ್‌,
ಅಧ್ಯಕ್ಷರು, ಬಂಟ್ವಾಳ ಪುರಸಭೆ

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next