ಪುಂಜಾಲಕಟ್ಟೆ: ಕೊರೊನಾ ಸಂಕಷ್ಟದಲ್ಲಿ ದೇಶವನ್ನು ಉಳಿಸಿದ ನಾಯಕ ನರೇಂದ್ರ ಮೋದಿ ಎಂಬ ಖುಷಿ ನಮಗಿದೆ. ಅಂತಹ ಮಹಾನ್ ವ್ಯಕ್ತಿ ಪ್ರಧಾನಿಯಾಗಿರುವ ಸಂದರ್ಭದಲ್ಲಿ ಶಾಸಕನಾಗಿ ಕ್ಷೇತ್ರದ ಜನತೆಯ ಸೇವೆ ಮಾಡುವ ಭಾಗ್ಯ ಸಿಕ್ಕಿರುವುದು ನನ್ನ ಭಾಗ್ಯ ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಅವರು ಅರಳ ಬಿಜೆಪಿ ಮಹಾಶಕ್ತಿ ಕೇಂದ್ರದಲ್ಲಿ ನಡೆದ ಬಿಜೆಪಿ ಪ್ರಮುಖ ಕಾರ್ಯಕರ್ತರ ಚುನಾವಣ ಸಭೆಯಲ್ಲಿ ಮಾತನಾಡಿದರು.
ಮೋದಿ ನೇತೃತ್ವದಲ್ಲಿ ಜಗತ್ತಿನ ಅತ್ಯಂತ ಕಡಿಮೆ ಹಣದುಬ್ಬರ ಇರುವ ದೇಶ ಭಾರತವಾಗಿದ್ದು, ಕೊರೊನಾ ಬಳಿಕದ ದಿನಗಳಲ್ಲಿ ಅರ್ಥಿಕ ವ್ಯವಸ್ಥೆಯಲ್ಲಿ ಸುಧಾರಣೆ ತಂದಿರುವ ಕೀರ್ತಿ ಬಿಜೆಪಿ ಡಬ್ಬಲ್ ಇಂಜಿನ್ ಸರಕಾರಕ್ಕೆ ಸಲ್ಲುತ್ತದೆ ಎಂದು ಅವರು ಹೇಳಿದರು.
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಬುಡಾ ಅಧ್ಯಕ್ಷ ದೇವದಾಸ್ ಶೆಟ್ಟಿ, ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ, ಕ್ಷೇತ್ರದ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ದಂಬೆದಾರ್, ಗ್ರಾಮ ಪಂಚಾಯತ್ ಅಧ್ಯಕ್ಷ ಲಕ್ಷ್ಮೀಧರ ಶೆಟ್ಟಿ, ಸದಸ್ಯರಾದ ತುಂಗಮ್ಮ, ಧನ್ಯಾ, ಚಂದ್ರಹಾಸ ಪೂಜಾರಿ, ಶಕ್ತಿ ಕೇಂದ್ರದ ಪ್ರಮುಖ್ ಯೋಗೀಶ್ ಕೆ., ಬೂತ್ ಅಧ್ಯಕ್ಷ ರಂಜನ್ ಕುಮಾರ್ ಶೆಟ್ಟಿ, ಪ್ರಮುಖರಾದ ಬಾಲಕೈಷ್ಣ ಶೆಟ್ಟಿ ಸಂಗಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.
ನಿರೀಕ್ಷೆಗೂ ಮೀರಿದ ಅಭಿವೃದ್ಧಿ
ರಾಜಕೀಯ ಅನುಭವವಿಲ್ಲದ ಪ್ರಥಮ ಅವಧಿಯಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿ ಮಾಡಿದ್ದು, ಮುಂದಿನ ಅವಧಿಯಲ್ಲಿ ಅದ್ಭುತ ರೀತಿಯಲ್ಲಿ ಬಂಟ್ವಾಳ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಾರ್ಯಗಳನ್ನು ಮಾಡಿತೋರಿಸುತ್ತೇನೆ ಎಂದು ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.