Advertisement

Bantwal: ಶ್ಮಶಾನ ಭೂಮಿಯಲ್ಲಿ 200ಕ್ಕೂ ಅಧಿಕ ಇಂಗುಗುಂಡಿ ರಚನೆ

01:16 PM Sep 23, 2024 | Team Udayavani |

ಬಂಟ್ವಾಳ: ಹರಿದು ನದಿ ಸೇರುವ ನೀರನ್ನು ಹಿಡಿದಿಟ್ಟು ಭೂಮಿಗೆ ಇಳಿಸಿ ಅಂತರ್ಜಲ ಮಟ್ಟ ಹೆಚ್ಚಿಸಲು ಪಣತೊಟ್ಟ ಮಹಿಳೆಯರ ತಂಡವೊಂದು ಗುಡ್ಡ ಪ್ರದೇಶದಲ್ಲಿ ಬರೋಬ್ಬರಿ 200ಕ್ಕೂ ಅಧಿಕ ಇಂಗು ಗುಂಡಿಗಳನ್ನು ರಚಿಸಿ ನೀರಿಂಗಿಸುವಲ್ಲಿ ಯಶಸ್ವಿಯಾಗಿದೆ. ಇದು ಮಣ್ಣಿನ ತೇವಾಂಶ ಕಾಪಾಡುವುದಕ್ಕೂ ಸಹಕಾರಿಯಾಗಿದೆ.

Advertisement

ಬಂಟ್ವಾಳ ತಾಲೂಕಿನ ವಿಟ್ಲಮುಟ್ನೂರು ಗ್ರಾಪಂನ ಚಿಗುರು ಸಂಜೀವಿನಿ ಒಕ್ಕೂ ಟದ 6 ಮಂದಿ ಮಹಿಳೆಯರು ಈ ಸಾಧನೆ ಮಾಡಿದ್ದು, ಪ್ರಸ್ತುತ ಅವರ ಶ್ರಮಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಪಂಚಾಯತ್‌ ವ್ಯಾಪ್ತಿಯ ಕುಂಡಡ್ಕ ಕುಶಾಲನಗರದಲ್ಲಿ 1.80 ಎಕ್ರೆ ಶ್ಮಶಾನ ಮೀಸಲು ಜಾಗವಿದ್ದು, ಅದರಲ್ಲಿ 50 ಸೆಂಟ್ಸ್‌ ವ್ಯಾಪ್ತಿಯಲ್ಲಿ ಶ್ಮಶಾನವಿದೆ. ಉಳಿದ ಜಾಗದಲ್ಲಿ ಗೇರು ನೆಡುತೋಪು ಇದ್ದು, ಇದೇ ಜಾಗದಲ್ಲಿ ಪ್ರಸ್ತುತ ಇಂಗು ಗುಂಡಿಗಳನ್ನು ರಚಿಸಲಾಗಿದೆ.

ನರೇಗಾ: ಇಂಗು ಗುಂಡಿ ರಚನೆ
ಮಹಾತ್ಮಾ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ ಇಂಗುಗುಂಡಿ ನಿರ್ಮಾ ಣಕ್ಕೆ ಗ್ರಾಪಂ ಆಡಳಿತ ಮಂಡಳಿ ನಿರ್ಧರಿ ಸಿದ್ದು, ಅದರಲ್ಲೂ ಮಹಿಳೆಯರಿಗೆ ಉದ್ಯೋಗ ಕೊಡಬೇಕು ಎಂದು ತೀರ್ಮಾ ನಿಸಿದ್ದರು. ಈ ವಿಚಾರವನ್ನು ಸಂಜೀವಿನಿ ಒಕ್ಕೂಟದ ಸದಸ್ಯೆಯರಲ್ಲಿ ತಿಳಿಸಿದಾಗ ಚಿಗುರು ಸಂಜೀವಿನಿ ಒಕ್ಕೂಟದ 6 ಮಂದಿ ಮಹಿಳೆಯರು ತಾವೇ ಇಂಗು ಗುಂಡಿಗಳನ್ನು ರಚಿಸುವುದಾಗಿ ಮುಂದೆ ಬಂದಿದ್ದರು.

ಅದರಂತೆ 6 ಅಡಿ ಉದ್ದ, 2 ಅಡಿ ಅಗಲ ಹಾಗೂ 2 ಅಡಿ ಆಳದ ಗುಂಡಿಗಳನ್ನು ಕೊರೆದಿದ್ದಾರೆ. ನರೇಗಾ ಯೋಜನೆಯಡಿ 1 ಗುಂಡಿಗೆ ಪ್ರಸ್ತುತ ಆರ್ಥಿಕ ವರ್ಷದಲ್ಲಿ 300 ರೂ. ನಿಗದಿಪಡಿಸಲಾಗಿದ್ದು, ಕಾಮಗಾರಿ ನಿರ್ವಹಿಸಿದ ಮಹಿಳೆಯರಿಗೆ ನರೇಗಾ ಯೋಜನೆಯಿಂದ ಗ್ರಾಮದಲ್ಲೇ ಉದ್ಯೋಗದ ಅವಕಾಶ ಸಿಕ್ಕಿದೆ. ಮುಂದಿನ ದಿನಗಳಲ್ಲಿ ವೈಯಕ್ತಿಕ ಕಾಮಗಾರಿ ಕೈಗೊಳ್ಳುವವರು ಪಂಚಾಯತ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹಲವು ಕಾಮಗಾರಿಗಳ ನಿರ್ವಹಣೆ
ಇದೇ ಒಕ್ಕೂಟದ ಸದಸ್ಯೆಯರು 2022-2023ರ ಆರ್ಥಿಕ ವರ್ಷದಲ್ಲಿ ಮಾಧವ ನಾಯಕ್‌ ಅವರ ಜಮೀನಿನಲ್ಲಿ 180 ಇಂಗು ಗುಂಡಿ ರಚನೆ, ಕಂಬಳಬೆಟ್ಟು ಅಮೈ ಬಾಲಕೃಷ್ಣ ಗೌಡ ಅವರ ಮನೆ ಬಳಿ ಪರಂಬೂಕು ತೋಡಿನ ಹೂಳೆತ್ತುವ ಕಾಮಗಾರಿ, 2023-24ರಲ್ಲಿ ಹೊಯಿಗೆ ಶಾಂತಿಮಾರುನಲ್ಲಿ ಪರಂಬೋಕು ತೋಡಿನ ಹೂಳೆತ್ತುವ ಕಾಮಗಾರಿಯನ್ನು ನಿರ್ವಹಿಸಿದ್ದರು. ಒಕ್ಕೂಟದ ಸದಸ್ಯರು ಈ ಕೆಲಸದ ಜತೆಗೆ ಬೇಕರಿ ಉತ್ಪನ್ನ ತಯಾರಿ, ಮಲ್ಲಿಗೆ ಕೃಷಿಯಂತಹ ಸ್ವ-ಉದ್ಯೋಗದ ಮೂಲಕ ಬದುಕು ಕಂಡುಕೊಂಡಿದ್ದಾರೆ.

Advertisement

ಸಾರ್ವಜನಿಕರಿಗೆ ಅವಕಾಶ
ಮಳೆ ನೀರನ್ನು ಭೂಮಿಗೆ ಇಂಗಿಸಲು ಇಂಗುಗುಂಡಿ ಸಹಕಾರಿಯಾಗಿದ್ದು, ನರೇಗಾ ಮೂಲಕ ಇಂಗುಗುಂಡಿ ಕಾಮಗಾರಿಯನ್ನು ವೈಯಕ್ತಿಕ ಹಾಗೂ ಸಾರ್ವಜನಿಕವಾಗಿ ಕೈಗೊಳ್ಳಲು ಅವಕಾಶವಿದೆ. ವಿಟ್ಲಮುಟ್ನೂರು ಗ್ರಾಪಂನ ಚಿಗುರು ಸಂಜೀವಿನಿ ಒಕ್ಕೂಟದ ಸದಸ್ಯರು ಇಂಗುಗುಂಡಿ ಕಾಮಗಾರಿ ಮಾಡುವ ಮೂಲಕ ಮಾದರಿಯಾಗಿದ್ದಾರೆ.
-ಸಚಿನ್‌ ಕುಮಾರ್‌, ಕಾರ್ಯನಿರ್ವಹಣಾಧಿಕಾರಿ, ತಾ.ಪಂ.ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next