ಬಂಟ್ವಾಳ: ಕೋವಿಡ್-19 ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಸಾವು ಸಂಭವಿಸಿರುವ ಬಂಟ್ವಾಳ ಪೇಟೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಬಂಟ್ವಾಳವನ್ನು ಸಂಪರ್ಕಿಸುವ ಎಲ್ಲ ರಸ್ತೆಗಳನ್ನು ಬಂದ್ ಮಾಡಿರುವ ಜತೆಗೆ ಪೇಟೆಯಲ್ಲಿ ಹೆಚ್ಚಿನ ಕಡೆ ರಸ್ತೆಗೆ ಮಣ್ಣು ಹಾಕಿ ಮುಚ್ಚಲಾಗಿದೆ. ಬಂಟ್ವಾಳ ಪೇಟೆಯ ನಿವಾಸಿಗಳನ್ನು ರಸ್ತೆಗೆ ಇಳಿಯದಂತೆ ಸೂಚನೆ ನೀಡಲಾಗಿದ್ದು, ಜತೆಗೆ ಅವರಿಗೆ ಮನೆ ಮನೆಗೆ ಅಗತ್ಯ ವಸ್ತುಗಳ ಪೂರೈಕೆ ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತಿದೆ. ಸುಮಾರು 750 ಮನೆಗಳು ಕ್ವಾರಂಟೈನ್‌ನಲ್ಲಿದ್ದು, ಅಲ್ಲಿನ ಪ್ರತಿಯೊಬ್ಬ ನಿವಾಸಿಯ ಸಂಪೂರ್ಣ ಆರೋಗ್ಯ ಮಾಹಿತಿ ಸಂಗ್ರಹಿಸುವ ಕಾರ್ಯ ಪ್ರಾರಂಭಗೊಂಡಿದೆ.
ಪ್ರಕರಣ ದಾಖಲು
ಕೋವಿಡ್-19ದಿಂದ ಮೃತಪಟ್ಟ ಮಹಿಳೆಗೆ ಚಿಕಿತ್ಸೆ ನೀಡಿದ ಖಾಸಗಿ ವೈದ್ಯರ ವಿರುದ್ಧ ತಾಲೂಕು ಆರೋಗ್ಯಾಧಿಕಾರಿ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಗ್ಯ ಇಲಾಖೆಯು ಮೃತ ಮಹಿಳೆಯ ಪತಿ ಹಾಗೂ ಪುತ್ರನನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಿದ ವೇಳೆ, ಮಹಿಳೆಯು ನ್ಯೂಮೋನಿಯದಿಂದ ಬಳಲುತ್ತಿದ್ದು, ಅವರಿಗೆ ಅನೇಕ ಕಡೆ ಚಿಕಿತ್ಸೆ ಕೊಡಿಸಿದರೂ ಗುಣವಾಗಿರಲಿಲ್ಲ. ಎ. 15ರಂದು ಜ್ವರದ ಹಿನ್ನೆಲೆಯಲ್ಲಿ ಬಂಟ್ವಾಳದ ವೈದ್ಯ ಡಾ| ಸದಾಶಿವ ಶೆಣೈ ಅವರ ಕ್ಲಿನಿಕ್‌ಗೆ ಕರೆದುಕೊಂಡು ಹೋಗಿದ್ದೇವೆ ಎಂದು ತಿಳಿಸಿದ್ದಾರೆ.
ಚಿಕಿತ್ಸೆ ನೀಡಿದ ವೈದ್ಯರು ಕೆಪಿಎಂಇ ಕಾಯ್ದೆ ಪ್ರಕಾರ ಎಲ್ಲ ಸಾಂಕ್ರಾಮಿಕ ಕಾಯಿಲೆಗಳ ಕುರಿತು ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕಿದೆ. ಆದರೆ ವೈದ್ಯರು ರೋಗ ಉಲ್ಬಣಗೊಂಡರೂ ಮೇಲ್ದರ್ಜೆಯ ಆಸ್ಪತ್ರೆಗೆ ತೆರಳುವಂತೆ ನಿರ್ದೇಶನ ನೀಡಿರುವುದಿಲ್ಲ. ಜತೆಗೆ ಜವಾಬ್ದಾರಿಯುತ ವೈದ್ಯರಾಗಿ ಕೊರೊನಾ ಸೋಂಕು ಹರಡದಂತೆ ವಹಿಸಬೇಕಿದ್ದ ಜವಾಬ್ದಾರಿಯಿಂದ ವಿಮುಖರಾಗಿದ್ದಾರೆ ಎಂದು ಟಿಎಚ್‌ಒ ದೂರಿನಲ್ಲಿ ತಿಳಿಸಿದ್ದಾರೆ. ಐಪಿಸಿ 269, 270 ಕಾಯ್ದೆಯಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.