Advertisement
ಬಂಟ್ವಾಳ ತಾಲೂಕಿನ ಕಲ್ಲಡ್ಕ ಮತ್ತು ಇತರ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲು ಗುರುವಾರ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ ಅವರು ಮಂಗಳೂರಿನ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಎಲ್ಲ ಪ್ರಕರಣಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ವಿಶೇಷ ತಂಡಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದವರು ವಿವರಿಸಿದರು.
ಘಟನಾವಳಿಗೆ ಸಂಬಂಧಿಸಿ ಸಮಗ್ರ ತನಿಖೆ ನಡೆಸಲಾಗುವುದು. ದುಷ್ಕೃತ್ಯ ಎಸಗುವವರು, ಸಂಚು ರೂಪಿಸಿದವರು, ಪ್ರೋತ್ಸಾಹ ಮತ್ತು ಬೆಂಬಲ ನೀಡುವವರ ಸಹಿತ ಎಲ್ಲರನ್ನೂ ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಮುನ್ನೆಚ್ಚರಿಕೆಯ ಕ್ರಮವಾಗಿ ರೌಡಿಗಳ ಮತ್ತು ಶಂಕಿತರ ಮೇಲೆ ನಿಗಾ ಇರಿಸಲಾಗುವುದು. ಅಹಿತಕರ ಘಟನೆ ಮರುಕಳಿಸದಂತೆ ಸೂಕ್ತ ಕ್ರಮ ಜರಗಿಸಲಾಗುವುದು. ಆರೋಪಿಗಳ ಶೀಘ್ರ ಪತ್ತೆಗೆ ರಾತ್ರಿ ಹಗಲು ಕಣ್ಗಾವಲು ಇರಿಸಲಾಗಿದೆ ಎಂದರು. ಹೆಚ್ಚುವರಿ ಪೊಲೀಸ್
ಬಂದೋಬಸ್ತು ಕರ್ತವ್ಯಕ್ಕಾಗಿ ಉಡುಪಿ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಂದ ಪೊಲೀಸರನ್ನು ಕರೆಸಲಾಗಿದೆ. ದಕ್ಷಿಣ ಕನ್ನಡ ಪೊಲೀಸ್ ವ್ಯಾಪ್ತಿಯಲ್ಲಿ 12 ಹಾಗೂ ಮಂಗಳೂರು ಕಮಿಷನರೆಟ್‌ನಲ್ಲಿ 6 ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಸಹಿತ ಕರಾವಳಿ ಜಿಲ್ಲೆಗಳಲ್ಲಿ ಯಾವುದೇ ತುರ್ತು ಪರಿಸ್ಥಿತಿಗೆ ಸ್ಪಂದಿಸಲು ಅನುಕೂಲವಾಗುವಂತೆ ಪೊಲೀಸ್ ವ್ಯವಸ್ಥೆಯನ್ನು ಚುರುಕು ಗೊಳಿಸಲಾಗುವುದು. ಕಾನೂನು ಸುವ್ಯವಸ್ಥೆ ಹದಗೆಡಿಸಲು ಅವಕಾಶ ಕೊಡುವುದಿಲ್ಲ ಎಂದರು.
Related Articles
Advertisement
ಎಸ್‌ಪಿ ವರ್ಗಾವಣೆ, ಅಡಿಶನಲ್ ಎಸ್‌ಪಿಗೆ ರಜೆ ಸರಕಾರದ ನಿರ್ಧಾರ ಜಿಲ್ಲಾ ಪೊಲೀಸ್ ಅಧೀಕ್ಷಕ ಭೂಷಣ್ ಜಿ. ಬೊರಸೆ ಅವರ ವರ್ಗಾವಣೆ ಹಾಗೂ ಅಡಿಶನಲ್ ಎಸ್‌ಪಿ ವೇದಮೂರ್ತಿ ಅವರನ್ನು ರಜೆಯಲ್ಲಿ ತೆರಳುವಂತೆ ಕಳುಹಿಸಿರುವುದು ಸರಕಾರದ ನಿರ್ಧಾರ. ವರ್ಗಾವಣೆ ಮಾಡಲಾದ ಎಸ್‌ಪಿ ಅವರ ಸ್ಥಾನಕ್ಕೆ ಹೊಸ ಎಸ್‌ಪಿ ಬಂದು ಅಧಿಕಾರ ಸ್ವೀಕರಿಸಿದ್ದಾರೆ ಎಂದು ಎಡಿಜಿಪಿ ತಿಳಿಸಿದರು. ಯಾವುದೇ ಪೊಲೀಸ್ ಅಧಿಕಾರಿ ತಪು ಎಸಗಿದರೆ ಕ್ರಮ ಜರಗಿಸಲಾಗುವುದು ಎಂದು ಆಲೋಕ್ ಮೋಹನ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಉಪಸ್ಥಿತರಿದ್ದರು.
ಅಶ್ರಫ್ ರೌಡಿ ಶೀಟರ್ ಅಲ್ಲಬುಧವಾರ ಬೆಂಜನಪದವಿನಲ್ಲಿ ದುಷ್ಕರ್ಮಿಗಳಿಂದ ಕೊಲೆಯಾದ ಅಶ್ರಫ್ ಕಳಾಯಿ ರೌಡಿ ಶೀಟರ್ ಆಗಿರಲಿಲ್ಲ. ಅವರ ಮೇಲೆ ಹಳೆಯ ಒಂದು ಕೇಸು ಮಾತ್ರ ಇದೆ ಎಂಬ ಮಾಹಿತಿ ಇದೆ. ಆ ಪ್ರಕರಣ ಯಾವುದೆಂದು ಪರಿಶೀಲಿಸಿ ತಿಳಿಸಲಾಗುವುದು ಎಂದು ಎಡಿಜಿಪಿ ವಿವರಿಸಿದರು. ಅಶ್ರಫ್ ಕಳಾಯಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಮತ್ತು ಮಂಗಳೂರು ನಗರ ಪೊಲೀಸರ ಪ್ರತ್ಯೇಕ ತಂಡಗಳು ಪ್ರತ್ಯೇಕ ಪ್ರತ್ಯೇಕವಾಗಿ ತನಿಖೆ ನಡಸುತ್ತಿವೆ ಎಂದು ತಿಳಿಸಿದರು. ಕಮಿಷನರೆಟ್ ವ್ಯಾಪ್ತಿಯಲ್ಲೂ ನಿಷೇಧಾಜ್ಞೆ
ಸಿಆರ್‌ಪಿಸಿ ಸೆಕ್ಷನ್ 144 ಅನ್ವಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾರಿಯಲ್ಲಿರುವ ನಿಷೇಧಾಜ್ಞೆಯನ್ನು ಗುರುವಾರ ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಗೂ ಅನ್ವಯಿಸಲಾಗಿದೆ. ಅದರನ್ವಯ 5ಕ್ಕಿಂತ ಹೆಚ್ಚು ಮಂದಿ ಅಕ್ರಮ ಕೂಟ ಸೇರುವುದನ್ನು ನಿರ್ಬಂಧಿಸಲಾಗಿದೆ. ಧಾರ್ಮಿಕ ಕಾರ್ಯಕ್ರಮಗಳಿಗೆ ವಿನಾಯಿತಿ ಇದೆ ಎಂದು ಎಡಿಜಿಪಿ ತಿಳಿಸಿದರು.