ಬಂಟ್ವಾಳ: ತಾಲೂಕಿನಾದ್ಯಂತ ಪರಿಸ್ಥಿತಿ ಶಾಂತವಾಗಿದ್ದು ನಗರದಲ್ಲಿ ವಾಹನ ಸಂಚಾರ ಎಂದಿನಂತಿದೆ. ಆದರೆ ಬಹುತೇಕ ಅಂಗಡಿಮುಂಗಟ್ಟುಗಳು ಮುಚ್ಚಿದ್ದವು. ಅಟೋರಿಕ್ಷಾಗಳು ರಸ್ತೆಗೆ ಇಳಿದಿಲ್ಲ. ಬಸ್ ನಿಲ್ದಾಣದಲ್ಲಿ ಖಾಸಗಿ ಸರ್ವಿಸ್ ಬಸ್‌ಗಳ ಸಂಖ್ಯೆ ಕಡಿಮೆ ಇತ್ತು. ಜನ ಸಂಚಾರ ವಿರಳವಾಗಿದ್ದು ವ್ಯವಹಾರ ಕಡಿಮೆ ಇತ್ತು.
ಹೆದ್ದಾರಿಯ ಎಲ್ಲೆಂದರಲ್ಲಿ, ಪ್ರಮುಖವಾಗಿ ಪ್ರಾರ್ಥನಾ ಮಂದಿರ, ಗುಡಿಗಳ ಎದುರು ಪೊಲೀಸ್ ಸಿಬಂದಿ ನಾಕಾಬಂದಿ ನಡೆಸುತ್ತಿದ್ದಾರೆ. ತಾಲೂಕು ಕೇಂದ್ರ ಬಿ.ಸಿ.ರೋಡ್‌ನಲ್ಲಿ ಹತ್ತಕ್ಕೂ ಅಧಿಕ ಪೊಲೀಸ್ ವಾಹನಗಳು ಬೀಡುಬಿಟ್ಟಿವೆ. ಸೂಕ್ಷ್ಮ ಸ್ಥಳದಲ್ಲಿ ಹತ್ತಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.
ಬಿ.ಸಿ.ರೋಡ್ ಫ್ಲೆ$çಓವರ್‌ನ ಅಡಿಯಲ್ಲಿ ಹೊರಜಿಲ್ಲೆಯಿಂದ ಬಂದಿರುವ ಪೊಲೀಸರ ವಾಹನಗಳನ್ನು ನಿಲುಗಡೆ ಮಾಡಿದ್ದು ಪರಿಸ್ಥಿತಿಗೆ ತಕ್ಕಂತೆ ತೆರಳಲು ಸಿದ್ಧತೆಯಲ್ಲಿ ಇದ್ದಾರೆ.
ಕೈಕಂಬದಲ್ಲಿಯೂ ಜು. 9ರಂದು ಜನಸಂಚಾರ ಕಡಿಮೆ ಇತ್ತು. ಜನರು ಭಯದಿಂದಲೇ ಇಲ್ಲಿ ದೂರದಿಂದ ಸ್ಥಳವೀಕ್ಷಣೆ ನಡೆಸಿ ಬಳಿಕ ತೆರಳುತ್ತಿದ್ದಾರೆ.
ಕಲ್ಲೆಸೆತ, ವಾಹನ ಜಖಂ ಪ್ರಕರಣಕ್ಕೆ ಸಂಬಂಧಿಸಿ ಸುಮಾರು 10ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.