ಬಂಟ್ವಾಳ: ಹಾಡಹಗಲೇ ಯುವಕನ ಮೇಲೆ ದುಷ್ಕರ್ಮಿಗಳು ಮಾರಕಾಯುಧಗಳಿಂದ ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡ ಯುವಕ ಮೃತಪಟ್ಟ ಘಟನೆ ಬಂಟ್ವಾಳದ ಮೆಲ್ಕಾರ್ ಸಮೀಪದ ಗುಡ್ಡೆಯಂಗಡಿ ಎಂಬಲ್ಲಿ ನಡೆದಿದೆ.
ಮೃತಪಟ್ಟ ಯುವಕನನ್ನು ಕಲ್ಕಡ್ಕ ನಿವಾಸಿ ಚೆನ್ನ ಫಾರೂಕ್ ಎಂದು ಗುರುತಿಸಲಾಗಿದೆ. ಈತನ ಹೆಸರು ರೌಡಿಶೀಟರ್ ಪಟ್ಟಿಯಲ್ಲಿತ್ತು ಎಂದು ವರದಿಯಾಗಿದ್ದು, ಆತನ ಸ್ನೇಹಿತನೇ ಕೊಲೆ ಮಾಡಿದ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.
ಫಾರೂಕ್ ನ ಸ್ನೇಹಿತನ ಜೊತೆ ಇತ್ತೀಚಿನ ದಿನಗಳಲ್ಲಿ ಉಂಟಾದ ಮುನಿಸು ಕೊಲೆಗೆ ಕಾರಣವಾಗಿರಬೇಕು ಎನ್ನಲಾಗಿದೆ. ಇಂದು ಸಂಜೆ( ಅ.23) ಕಾರಲ್ಲಿ ಬಂದ ದುಷ್ಕರ್ಮಿಗಳು, ಕೃತ್ಯ ಎಸಗಿದ್ದು ತಲವಾರಿನಿಂದ ಫಾರೂಕ್ ಗೆ ಹಿಗ್ಗಾಮುಗ್ಗ ಕಡಿದಿದ್ದಾರೆ. ಗಂಭೀರ ಗಾಯಗೊಂಡ ಯುವಕನನ್ನು ಪೋಲೀಸರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ , ಎಸ್.ಐ.ಪ್ರಸನ್ನ, ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.