Advertisement
ಬಂಟ್ವಾಳ ವಿಧಾನಸಭಾ ಕ್ಷೇತ್ರ ಕೃಷಿ ಪ್ರಧಾನವಾದ ಆರ್ಥಿಕ ವ್ಯವಸ್ಥೆಯದ್ದು. ಅಭಿವೃದ್ಧಿಯಲ್ಲೂ ಕೊಂಚ ಮುಂದಿದೆ. ಕಳೆದ ವಿಧಾನಸಭಾ ಚುನಾವಣೆವರೆಗೂ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ ಸದ್ಯಕ್ಕೆ ಬಿಜೆಪಿ ಬಾವುಟ.
Related Articles
Advertisement
ಆಗಿದೆಯಾ ಆಗಿದೆ, ಇಲ್ಲವಾ ಇಲ್ಲ!ಸದ್ಯದ ಪರಿಸ್ಥಿತಿಯಲ್ಲಿ ಕ್ಷೇತ್ರದ ಅಭಿವೃದ್ಧಿಯ ವಿಷಯ ಆಗಿದೆಯಾ ಎಂದರೆ ಆಗಿದೆ, ಇಲ್ಲವೇ ಎಂದರೆ ಇಲ್ಲ ಎಂಬಂತಿದೆ. ಅದಕ್ಕಿಂತಲೂ ಮುಖ್ಯ ವಾಗಿ ಕೋಮು ಸೂಕ್ಷ್ಮ ಪ್ರದೇಶವಾದ ಇಲ್ಲಿ ಶಾಂತಿ- ಸಹಬಾಳ್ವೆಯ ಸಂಗತಿಯೇ ಪ್ರಮುಖ. ಕುಡಿಯುವ ನೀರಿನ ವಿಷಯಕ್ಕೆ ಬಂದಾಗ ಬಂಟ್ವಾಳ ಇತರ ಎಲ್ಲ ಕ್ಷೇತ್ರಗಳಿಗಿಂತಲೂ ವಿಭಿನ್ನ. ಎಲ್ಲೂ ಇಲ್ಲದ 5 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಇಲ್ಲಿ ಅನುಷ್ಠಾನದಲ್ಲಿವೆ. ಬಂಟ್ವಾಳದ ಮೂಲಕ ಹಾದುಹೋಗುತ್ತಿರುವ ಮಂಗಳೂರು- ಬೆಂಗಳೂರು ಹೆದ್ದಾರಿ ಚತುಷ್ಪಥ ಕಾಮಗಾರಿ ಸಹ ಈ ಕ್ಷೇತ್ರದಿಂದಲೇ ಆರಂಭವಾದದ್ದು. ಮಿನಿ ವಿಧಾನಸೌಧ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಪೂರ್ಣಗೊಂಡಿದ್ದು, ಬಿ.ಸಿ. ರೋಡ್- ಪುಂಜಾಲಕಟ್ಟೆ ಹೆದ್ದಾರಿಯ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಆದರೆ ಚುನಾವಣೆಯಿಂದ ನಮಗೇನೂ ಲಾಭವಿಲ್ಲ, ನಾವು ದುಡಿಯಲೇಬೇಕು ಎಂಬ ಮಾತುಗಳು ಜನರಿಂದ ಕೇಳಿಬರುತ್ತಿದೆ. ರಾಜಕೀಯ ಪಕ್ಷಗಳ ನಾಯಕರು, ಕಾರ್ಯಕರ್ತ ರಲ್ಲಿ ಚುನಾವಣೆಯ ಕಾವು ಕಂಡುಬರುತ್ತಿದೆಯೇ ವಿನಾ ಜನರು ಗಂಭೀರವಾಗಿ ಯೋಚಿಸುತ್ತಿಲ್ಲ. ಕ್ಷೇತ್ರದಲ್ಲಿ ಈಗಾಗಲೇ ಮನೆ ಮನೆ ಮತಪ್ರಚಾರದ ಅಭಿಯಾನ ಚಾಲ್ತಿಯಲ್ಲಿದೆ. ಪುರಸಭೆಗೆ ಆಡಳಿತ ನೀಡಿ!
ಬಂಟ್ವಾಳದಲ್ಲಿ ಪುರಸಭೆಯಿದ್ದರೂ ಹಲವು ಸಮಯದಿಂದ ಇಲ್ಲಿ ಆಡಳಿತವಿಲ್ಲ ಎಂಬ ಕೂಗು ನಗರವಾಸಿಗಳಿಂದ ಕೇಳಿಬರುತ್ತಿದೆ. ಹಲವು ತಿಂಗಳ ಹಿಂದೆ ಇಲ್ಲಿ ಚುನಾವಣೆ ನಡೆದಿದ್ದರೂ ಅಧ್ಯಕ್ಷ- ಉಪಾಧ್ಯಕ್ಷ ಮೀಸಲು ಗೊಂದಲದ ಕಾರಣ ಆಡಳಿತ ಮಂಡಳಿಯ ನೇಮಕವಾಗಿಲ್ಲ. ಹೀಗಾಗಿ ಯಾವುದೇ ಕೆಲಸವಾಗುತ್ತಿಲ್ಲ. ಈ ಸಮಸ್ಯೆಯನ್ನು ಯಾರ ಬಳಿ ಹೇಳಬೇಕು ಎಂದು ಪ್ರಶ್ನಿಸುತ್ತಾರೆ ನಾಗರಿಕರು. ಕೃಷಿಗೆ ಕಾಯಕಲ್ಪದ ಕೂಗು
ಕ್ಷೇತ್ರದ ಆರ್ಥಿಕ ಮೂಲ ಕೃಷಿಯೇ ಆಗಿದ್ದು, ಯಾರೇ ಗೆದ್ದರೂ ಕೃಷಿಗೆ ಕಾಯಕಲ್ಪ ನೀಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ, ಸಾಲ ಮನ್ನಾ ಗೊಂದಲ ನಿವಾರಣೆ, ಕಾಡು ಪ್ರಾಣಿ ಹಾವಳಿಗಳಿಂದ ಮುಕ್ತಿ ಹೀಗೆ ಕೃಷಿಕರ ಹತ್ತಾರು ಸಮಸ್ಯೆಗಳನ್ನು ನಿವಾರಿಸುವಂತೆ ಕೃಷಿಕರು ಒತ್ತಾಯಿಸುತ್ತಿದ್ದಾರೆ. ಓಟು ಕೇಳಲು ಅವರೇ ಬರುತ್ತಾರೆ
ಲೋಕಸಭೆಯ ಚುಾವಣೆಯಲ್ಲವೇ, ಗ್ರಾಮೀಣ ಭಾಗದ ಸಮಸ್ಯೆಯ ಬಗ್ಗೆ ಯಾಕೆ ಮಾತನಾಡುತ್ತೀರಿ ಎಂದು ಸೂರಿಕುಮೇರಿನ ನಾಗರಿಕರೊಬ್ಬರ ಬಳಿ ಕೇಳಿದರೆ, “ಯಾವುದೇ ಚುನಾವಣೆ ಯಾಗಲಿ, ಓಟು ಕೇಳಲು ಬರುವವರು ಅವರೇ ಅಲ್ಲವೇ. ಹೀಗಾಗಿ ನಮಗೆ ಚುನಾವಣೆ ಯಾವುದು ಎಂಬುದು ಗೊತ್ತಿಲ್ಲ; ನಮ್ಮ ಸಮಸ್ಯೆ ಪರಿಹಾರವಾಗಬೇಕು’ ಎಂದರು. ಹೆದ್ದಾರಿ ಯಾವಾಗ ಪೂರ್ಣ?
ಹೆದ್ದಾರಿಯ ಬಿ.ಸಿ.ರೋಡು-ಅಡ್ಡಹೊಳೆ ಚತುಷ್ಪಥ ಕಾಮಗಾರಿಯು ಬಂಟ್ವಾಳ ಕ್ಷೇತ್ರದ ಮೂಲಕ ಹಾದು ಹೋಗುತ್ತಿದ್ದು, ಇದು ಯಾವಾಗ ಪೂರ್ಣಗೊಳ್ಳುತ್ತದೆ? ಕಲ್ಲಡ್ಕ ಪೇಟೆಯಲ್ಲಿ ಹೆದ್ದಾರಿ ಸಾಗುತ್ತದೆಯೇ ಎಂಬ ಕುರಿತು ನಮಗೆ ಮಾಹಿತಿ ಇಲ್ಲ. ಸೂರಿಕುಮೇರು, ಪೂರ್ಲಿಪ್ಪಾಡಿ ಭಾಗಗಳಲ್ಲಿ ಅಗೆದು ಹಾಕಿದ್ದಾರೆ. ದ್ವಿಚಕ್ರ ವಾಹನಗಳಲ್ಲಿ ತೆರಳುವ ಸಂದರ್ಭದಲ್ಲಿ ನಮಗೆ ಧೂಳಿನಿಂದ ತೊಂದರೆಯಾಗುತ್ತದೆ. ಹೀಗಾಗಿ ಇದು ಯಾವಾಗ ಪೂರ್ಣಗೊಳ್ಳುತ್ತದೆ ಎಂಬ ಮಾಹಿತಿ ನೀಡಿದರೆ ಉತ್ತಮ ಎಂದು ಕಲ್ಲಡ್ಕದ ಖಾಸಗಿ ಉದ್ಯೋಗಿಯೊಬ್ಬರು ಹೇಳಿದರು. – ಕಿರಣ್ ಸರಪಾಡಿ