Advertisement

ಬಂಟ್ವಾಳ: ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಉಪ ತಹಶೀಲ್ದಾರ್

10:13 AM Nov 27, 2020 | mahesh |

ಬಂಟ್ವಾಳ: ಸಾರ್ವಜನಿಕರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಬಂಟ್ವಾಳ ತಾಲೂಕು ಕಚೇರಿಯ ಉಪತಹಶೀಲ್ದಾರೊಬ್ಬರು ಎಸಿಬಿ ಬಲೆಗೆ ಬಿದ್ದ ಘಟನೆ ಗುರುವಾರ ನಡೆದಿದೆ.

Advertisement

ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಪಜೀರು ನಿವಾಸಿ ಅರುಣ್ ರೊಡ್ರಿಗಸ್ ಅವರು ದೂರು ನೀಡಿದ್ದು, ಬೆಂಜನಪದವಿನಲ್ಲಿ ಅವರ ತಾಯಿಯ ಹೆಸರಿನಲ್ಲಿರುವ ಜಾಗವೊಂದರ ಆರ್‌ಟಿಸಿಯಲ್ಲಿ 107/1 ಎಚ್ ಎಂದು ನಮೂದಿಸುವ ಬದಲು 107/14 ಎಂದು ತಪ್ಪಾಗಿ ನಮೂದಾಗಿತ್ತು. ಇದನ್ನು ಸರಿ ಮಾಡುವ ದೃಷ್ಟಿಯಿಂದ ತಾಯಿ ವೆರೋನಿಕ ರೊಡ್ರಿಗಸ್ ಅವರ ಹೆಸರಿನಲ್ಲಿ 2018 ರ ಜೂನ್ 12 ರಂದು ಬಂಟ್ವಾಳ ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಸರಿ ಮಾಡುವಂತೆ ತಹಶೀಲ್ದಾರ್ ಅವರು 2019 ರ ಮೇ 17ರಂದು ಆದೇಶಿಸಿದ್ದರು. ಹೀಗಾಗಿ ಈ ಕಡತವು ಪರಿಶೀಲನೆಗೆ ಮೇರಮಜಲು ಗ್ರಾಮ ಕರಣಿಕರ ಕಚೇರಿಗೆ ಬಂದಿತ್ತು.

ಅಲ್ಲಿಂದ ಶಿಫಾರಸ್ಸು ವರದಿಯೊಂದಿಗೆ ಕಂದಾಯ ನಿರೀಕ್ಷಿಕರ ಕಚೇರಿಗೆ ತೆರಳಿದ್ದು, ಅಲ್ಲಿ ಕಂದಾಯ ನಿರೀಕ್ಷಿಕರು ಒಂದು ವರ್ಷಗಳ ಕಾಲ ತಮ್ಮಲ್ಲೇ ಇಟ್ಟುಕೊಂಡು ಬಳಿಕ ಅನುಮೋದನೆಗೆ ಉಪತಹಶೀಲ್ದಾರ್ ಅವರಿಗೆ ಕಳುಹಿಸಿದ್ದರು. ಆದರೆ ಅವರು ತಿದ್ದುಪಡಿಯ ಕಡತಕ್ಕೆ ಸಹಿ ಹಾಕಿರಲಿಲ್ಲ. ಹೀಗಾಗಿ ದೂರುದಾರರು ಹಲವು ಬಾರಿ ಉಪತಹಶೀಲ್ದಾರ್ ಅವರನ್ನು ಭೇಟಿ ಮಾಡಿ ಕಡತವನ್ನು ಕಳುಹಿಸಿಕೊಡಲು ವಿನಂತಿಸುತ್ತಿದ್ದರು. ಕೊನೆಗೆ ಅವರು ಸಹಿ ಹಾಕುವುದಕ್ಕೆ ಲಂಚದ ಬೇಡಿಕೆ ಇಟ್ಟಿದ್ದು, ನ. 26ರಂದು 1 ಸಾವಿರ ರೂ. ಲಂಚ ಪಡೆದುಕೊಳ್ಳುವ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ದ.ಕ.ಜಿಲ್ಲಾ ಎಸಿಬಿ ಎಸ್‌ಪಿ ಎನ್.ಸಿ.ಬೋಪಯ್ಯ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಕೆ.ಸಿ.ಪ್ರಕಾಶ್ ಅವರ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್‌ಗಳಾದ ಗುರುರಾಜ್ ಹಾಗೂ ಶ್ಯಾಮ್‌ಸುಂದರ್ ಎಚ್.ಎಂ. ಅವರು ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಬಂದಿ ಹರಿಪ್ರಸಾದ್, ಉಮೇಶ್ ಟಿ, ರಾಧಾಕೃಷ್ಣ ಕೆ, ರಾಧಾಕೃಷ್ಣ ಡಿ.ಎ, ಪ್ರಶಾಂತ ಎಂ, ವೈಶಾಲಿ, ರಾಜೇಶ್ ಪಿ, ರಾಕೇಶ್ ವಾಗ್ಮನ್ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next