Advertisement

ಬಂಟ್ವಾಳದಲ್ಲಿ 3 ರೈತ ಸಂಪರ್ಕ ಕೇಂದ್ರ 2 ತಳಿಯ 135 ಕ್ವಿಂ. ಭತ್ತದ ಬೀಜ ಲಭ್ಯ

10:50 AM May 21, 2019 | pallavi |

ಬಂಟ್ವಾಳ : ಪ್ರಮುಖ ಆಹಾರ ಬೆಳೆ ಎನಿಸಿಕೊಂಡಿರುವ ಭತ್ತದ ಬೆಳೆಯನ್ನು ಉಳಿಸುವ ನಿಟ್ಟಿನಲ್ಲಿ ಸರಕಾರವು ಬೆಳೆ ಗಾರರಿಗೆ ವಿವಿಧ ರೀತಿಯ ಪ್ರೋತ್ಸಾಹ ವನ್ನು ನೀಡುತ್ತಿದ್ದು, ಬೇಡಿಕೆ ಇರುವ ತಳಿಯ ಬೀಜವನ್ನು ಸಂಗ್ರಹಿಸಿ ಸಬ್ಸಿಡಿ ದರದಲ್ಲಿ ಕೃಷಿಕರಿಗೆ ನೀಡುತ್ತದೆ. ಪ್ರಸ್ತುತ ಬಂಟ್ವಾಳ ತಾಲೂಕಿನಲ್ಲಿ ಒಟ್ಟು 135 ಕ್ವಿಂಟಾಲ್ ಭತ್ತದ ಬೀಜ ವಿತರಣೆಗೆ ಸಿದ್ಧಗೊಂಡಿದೆ.

Advertisement

ತಾಲೂಕಿನಲ್ಲಿ ಒಟ್ಟು ಮೂರು ರೈತ ಸಂಪರ್ಕ ಕೇಂದ್ರಗಳಿದ್ದು, ರೈತರು ತಮ್ಮ ಜಮೀನಿನ ಕುರಿತು ಮಾಹಿತಿ ನೀಡಿ ಬೀಜ ಪಡೆಯಬಹುದಾಗಿದೆ. ಭತ್ತದ ಬೀಜವನ್ನು ಹೊರತು ಪಡಿಸಿದರೆ ಉಳಿದಂತೆ ಯಾವುದೇ ಬೀಜಕ್ಕೆ ಬೇಡಿಕೆ ಇಲ್ಲ ಎಂದು ಕೃಷಿ ಇಲಾಖೆ ಮಾಹಿತಿ ನೀಡುತ್ತದೆ. ಪ್ರಸ್ತುತ ಭತ್ತದ ಬೀಜ ದಾಸ್ತಾನಾಗಿದ್ದರೂ, ಬೆಳೆಗಾರರು ಮುಂಗಾರಿನ ಬಳಿಕವೇ ರೈತ ಸಂಪರ್ಕ ಕೇಂದ್ರದತ್ತ ಆಗಮಿಸಲಿದ್ದಾರೆ.

120 ಪ್ಲಸ್‌ 15 ಕ್ವಿಂಟಾಲ್

ಬಂಟ್ವಾಳ ತಾಲೂಕಿನ ಬಂಟ್ವಾಳ ಕಸ್ಬಾ, ಪಾಣೆಮಂಗಳೂರು ಹಾಗೂ ವಿಟ್ಲ ಹೋಬಳಿಗಳಲ್ಲಿರುವ ರೈತ ಸಂಪರ್ಕ ಕೇಂದ್ರ ಗಳಲ್ಲಿ ಭತ್ತದ ಬೀಜವನ್ನು ಸಂಗ್ರಹಿಸಿಟ್ಟುಕೊಳ್ಳಲಾ ಗಿದ್ದು, ತಾಲೂಕಿನಲ್ಲಿ ಒಟ್ಟು 2 ತಳಿಯ ಬೀಜ ಬೆಳೆಗಾರರಿಗೆ ಬಿತ್ತನೆಗೆ ಲಭ್ಯವಿದೆ.

ಅಂದರೆ 120 ಕ್ವಿಂಟಾಲ್ ಎಂಓ4 (ಭದ್ರಾ) ತಳಿ ಹಾಗೂ 15 ಕ್ವಿಂಟಾಲ್ ಬಿಳಿ ಜಯ ಸೇರಿ ತಾಲೂಕಿನಲ್ಲಿ ಒಟ್ಟು 135 ಕ್ವಿಂಟಾಲ್ ಭತ್ತದ ಬೀಜ ದಾಸ್ತಾನಿರಿಸ ಲಾಗಿದೆ. ಅಂದರೆ ಕಳೆದ ವರ್ಷದ ಬೇಡಿಕೆ ಯನ್ನು ಗಮನಿಸಿ ಈ ಬಾರಿ ಬೀಜ ಸಂಗ್ರಹಿ ಸಲಾಗುತ್ತದೆ. ಬಂಟ್ವಾಳ ಕಸ್ಬಾ ಹಾಗೂ ಪಾಣೆಮಂಗಳೂರು ಸಂಪರ್ಕ ಕೇಂದ್ರದಲ್ಲಿ ತಲಾ 50 ಕ್ವಿ. ಎಂಓ4(ಭದ್ರಾ) ಹಾಗೂ ವಿಟ್ಲ ಕೇಂದ್ರದಲ್ಲಿ 20 ಕ್ವಿ. ಎಂಓ4(ಭದ್ರಾ) ದಾಸ್ತಾನಿದೆ.

Advertisement

ಒಟ್ಟು 15 ಕ್ವಿಂಟಾಲ್ ಬಿಳಿ ಜಯ ಭತ್ತದ ತಳಿಯಲ್ಲಿ ಬಂಟ್ವಾಳ ಕಸ್ಬಾದಲ್ಲಿ 10 ಕ್ವಿ. ಹಾಗೂ ಪಾಣೆಮಂಗಳೂರು ಕೇಂದ್ರದಲ್ಲಿ 5 ಕ್ವಿ. ಬೀಜ ಸಂಗ್ರಹಿಸಲಾಗಿದೆ. ವಿಟ್ಲದಲ್ಲಿ ಬೇಡಿಕೆ ಕಡಿಮೆ ಇರುವುದರಿಂದ ಕೇವಲ ಎಂಓ4(ಭದ್ರಾ) ತಳಿ ಮಾತ್ರ ಇರುತ್ತದೆ. ಉಳಿದಂತೆ ಬೆಳೆಗಾರರೇ ತಮಗೆ ಬೇಕಾದ ಭತ್ತದ ಬೀಜ ತಯಾರಿಸುತ್ತಾರೆ. ಜತೆಗೆ ಪರಸ್ಪರ ಹಂಚಿಕೊಳ್ಳುತ್ತಾರೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಟಾರ್ಗೆಟ್ ಹೀಗಿದೆ

ದ.ಕ. ಜಿಲ್ಲೆಯ ಇತರ ತಾಲೂಕುಗಳಿಗೆ ಹೋಲಿಸಿದರೆ ಬಂಟ್ವಾಳ ತಾಲೂಕಿಗೆ ಭತ್ತದ ಬೇಸಾಯದ ಕುರಿತು ಹೆಚ್ಚಿನ ಗುರಿ ನೀಡಲಾಗಿದ್ದು, ಮುಂಗಾರಿಗೆ 5,000 ಹೆಕ್ಟೇರ್‌, ಹಿಂಗಾರಿಗೆ 1,500 ಹೆಕ್ಟೇರ್‌ ಹಾಗೂ ಬೇಸಗೆಯ ಬೆಳೆಗೆ 450 ಹೆಕ್ಟೇರ್‌ ಟಾರ್ಗೆಟ್ ನೀಡಲಾಗಿದೆ. ಹೀಗಾಗಿ ತಾಲೂಕಿನಲ್ಲಿ ಹೆಚ್ಚಿನ ಭತ್ತದ ಬೀಜವನ್ನು ಸಂಗ್ರಹ ಮಾಡಿಟ್ಟುಕೊಳ್ಳಲಾಗುತ್ತದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

5 ಸಾವಿರ ಹೆಕ್ಟೇರ್‌ ಗುರಿ

ಮುಂಗಾರು ಆರಂಭವಾದ ಬಳಿಕವೇ ಭತ್ತದ ಬೀಜಗಳಿಗೆ ಬೇಡಿಕೆ ಬರುತ್ತಿದ್ದು, ಪ್ರಸ್ತುತ ನಮ್ಮ ತಾಲೂಕಿನಲ್ಲಿ ಒಟ್ಟು 135 ಕ್ವಿಂಟಾಲ್ ಭತ್ತದ ಬೀಜವನ್ನು ಸಂಗ್ರಹಿಸಿಟ್ಟುಕೊಳ್ಳಲಾಗಿದ್ದು, ಕಳೆದ ವರ್ಷ ಖರ್ಚಾದಷ್ಟು ಬೀಜವನ್ನು ಈ ಬಾರಿಯೂ ಸಂಗ್ರಹಿಸಿಡಲಾಗಿದೆ. ಈ ಬಾರಿ ತಾಲೂಕಿಗೆ 5 ಸಾವಿರ ಹೆಕ್ಟೇರ್‌ನಷ್ಟು ಗುರಿ ನೀಡಲಾಗಿದ್ದು, ಅಷ್ಟೇ ಪ್ರಮಾಣದಲ್ಲಿ ಭತ್ತವನ್ನು ಬೆಳೆಯಲಾಗುತ್ತದೆ.
– ಕೆ. ನಾರಾಯಣ ಶೆಟ್ಟಿ ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ಬಂಟ್ವಾಳ
ಕಿರಣ್‌ ಸರಪಾಡಿ
Advertisement

Udayavani is now on Telegram. Click here to join our channel and stay updated with the latest news.

Next