Advertisement

ಬಂಟ್ವಾಡಿ ಕಿಂಡಿ ಅಣೆಕಟ್ಟಿನಿಂದ ನೆರೆ ನೀರು ಇಳಿಯುತ್ತಿಲ್ಲ

11:59 AM Jul 18, 2022 | Team Udayavani |

ಮರವಂತೆ: ರೈತರ ಅನುಕೂಲಕ್ಕಾಗಿ ದಶಕದ ಹಿಂದೆ ನಿರ್ಮಿಸಿದ ಬಂಟ್ವಾಡಿ ಅಣೆಕಟ್ಟಿನ ನಿರ್ವಹಣೆ ಸಮಸ್ಯೆಯಿಂದ ಈ ಬಾರಿ ಸೌಪರ್ಣಿಕ ನದಿ ಪಾತ್ರದ ಪ್ರದೇಶಗಳಲ್ಲಿ ಮಳೆ ಕಡಿಮೆಯಾದರೂ, ನೆರೆ ನೀರು ಇಳಿಯುತ್ತಿಲ್ಲ. ಈ ಭಾಗದ ನೂರಾರು ಮನೆಗಳ ಜನ ಈ ಕಿಂಡಿ ಅಣೆಕಟ್ಟು ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement

ಹೊಸಾಡು ಗ್ರಾಮದ ಬಂಟ್ವಾಡಿಯಲ್ಲಿ ದಶಕದ ಹಿಂದೆ 12 ಕೋಟಿ ರೂ.ವೆಚ್ಚದಲ್ಲಿ ಮರವಂತೆ, ಕುರು, ಪಡುಕೋಣೆ, ಹಡವು, ಗುಡ್ಡಮ್ಮಾಡಿ ಸೇನಾಪುರ, ಮೊವಾಡಿ, ಬಡಾಕೆರೆ, ಚಿಕ್ಕಳ್ಳಿ, ಆನಗೋಡು ಪ್ರದೇಶದ ಕೃಷಿಕರಿಗೆ ನೀರಾವರಿ ಸೌಲಭ್ಯಕ್ಕಾಗಿ ಸೌಪರ್ಣಿಕಾ ನದಿಗೆ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿತ್ತು. ಆದರೆ ಇದರಿಂದ ರೈತರಿಗೆ, ಸುತ್ತಮುತ್ತಲಿನ ಪರಿಸರದಲ್ಲಿ ನೆಲೆಸಿರುವ ಜನರಿಗೆ ಪ್ರಯೋಜನಕ್ಕಿಂತ ತೊಂದರೆಯೇ ಹೆಚ್ಚಾಗಿದೆ.

ಹಲಗೆ ತಳದಲ್ಲಿ ಬಾಕಿ

ಇಲ್ಲಿನ ಕಿಂಡಿ ಅಣೆಕಟ್ಟಿನ ದೊಡ್ಡ ಕಿಂಡಿಯಲ್ಲಿ 2, ಚಿಕ್ಕ ಕಿಂಡಿಯಲ್ಲಿ 1 ಹಲಗೆ ತಳದಲ್ಲಿ ಹಾಗೆಯೇ ಬಾಕಿ ಉಳಿದು ಕೊಂಡಿದ್ದು, ಇದರಿಂದ ಕಿಂಡಿ ಅಣೆಕಟ್ಟು ಮೇಲ್ಬಾಗದಲ್ಲಿ ಹೂಳು ಶೇಖರಣೆಯಾಗಿ, ನದಿ ಪಾತ್ರದ ಆಳ ತಗ್ಗಿ ಸುತ್ತಮುತ್ತಲ ಪ್ರದೇಶಗಲ್ಲಿ ನೆರೆ ಬರುತ್ತದೆ. ಇನ್ನು 2 ವರ್ಷದ ಹಿಂದೆ 14 ಕಿಂಡಿಗೆ ಅಳವಡಿಸಿದ ಕ್ರಸ್ಟ್‌ ಗೇಟ್‌ ಸಹ ಜಾಮ್‌ ಆಗಿದ್ದು, ಮೇಲಕ್ಕೂ ಏರದೆ ಕೆಳಕ್ಕೂ ಇಳಿಯದೆ, ಮಳೆಗಾದಲ್ಲಿ ನೆರೆ ಉಕ್ಕಲು ಅವಕಾಶ ಮಾಡಿ, ಬೇಸಗೆ ಯಲ್ಲಿ ಸಿಹಿ ನೀರು ಹಿಡಿದಿಡಲು ಸಾಧ್ಯವಾಗದೇ ನಿಷ್ಪ್ರಯೋಜಕವಾಗಿದೆ. ಇದರೊಟ್ಟಿಗೆ ಮಳೆಗೆ ಸೌಪರ್ಣಿಕೆ ನದಿ ಹೊತ್ತು ತರುವ ಕಸಕಡ್ಡಿ, ಮರ ಮಟ್ಟುಗಳೆಲ್ಲ ಅಣೆಕಟ್ಟು ಕಿಂಡಿಯಲ್ಲಿ ಬಾಕಿಯಾಗಿ ನೆರೆ ಏರಲು ಮುಖ್ಯ ಕಾರಣವಾಗಿದೆ. ಈ ಬಗ್ಗೆ ಇಲ್ಲಿನ ರೈತರು, ಸಾರ್ವಜನಿಕರು ಅನೇಕ ಬಾರಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಹೇಳಿದರೂ, ಈ ಬಗ್ಗೆ ಗಮನವೇ ಕೊಡುತ್ತಿಲ್ಲ.

ಹತ್ತಾರು ಊರಿಗೆ ಸಮಸ್ಯೆ

Advertisement

ಬಂಟ್ವಾಡಿಯ ಕಿಂಡಿ ಅಣೆಕಟ್ಟಿನ ಅವ್ಯವಸ್ಥೆಯಿಂದಾಗಿ ನಾವುಂದದ ಸಾಲುºಡ, ಅರೆಹೊಳೆ, ಕಂಡಿಕೇರಿ, ಬಾಂಗಿನ್‌ ಮನೆ, ಮರವಂತೆ, ಸೇನಾಪುರ, ಬಡಾಕೆರೆ, ಪಡುಕೋಣೆ, ಹಡವು, ಚಿಕ್ಕಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ನೆರೆಗೆ ತುತ್ತಾಗುತ್ತಿದೆ. ಅದರಲ್ಲೂ ಸಾಲುºಡ, ಅರೆಹೊಳೆ, ಚಿಕ್ಕಳ್ಳಿ ಜನರಿಗೆ ಕಳೆದ 15 ದಿನಗಳಿಂದ ಜಲದಿಗ½ಂಧನ ವಿಧಿಸಿದಂತಾಗಿದೆ. ಇಲ್ಲೆಲ್ಲ ಪ್ರತಿ ವರ್ಷ ನೆರೆ ಬಂದರೂ, ಮಳೆ ಕಡಿಮೆಯಾದ ಬಳಿಕ ಇಳಿಯುತ್ತಿತ್ತು. ಆದರೆ ಈ ಬಾರಿ ಮಳೆ ಕಡಿಮೆಯಾಗಿ 2 ದಿನ ಕಳೆದರೂ, ನೆರೆ ನೀರು ಮಾತ್ರ ಇಳಿಯುತ್ತಿಲ್ಲ. ಇದರಿಂದಾಗಿ ಚಿಕ್ಕ ಮಳೆಗೂ ನೆರೆ ನೀರು ಹೆಚ್ಚುತ್ತದೆ. ಅದಲ್ಲದೆ ಇಲ್ಲಿನ ಎಕರೆಗಟ್ಟಲೆ ಭತ್ತದ ಕೃಷಿ ನಾಶವಾಗಿದೆ.

ಪ್ರಯೋಜನವೇ ಇಲ್ಲ: ಬಂಟ್ವಾಡಿ ಕಿಂಡಿ ಅಣೆಕಟ್ಟಿನಿಂದ ನಮಗೆ ಇಲ್ಲಿಯವರೆಗೆ ಯಾವುದೇ ಪ್ರಯೋಜನವೂ ಆಗಿಲ್ಲ. ಈಗ ನೆರೆ ನೀರು ಇಳಿಯದಕ್ಕೂ ಆ ಡ್ಯಾಂನಲ್ಲಿ ತಳದಲ್ಲಿರುವ ಹಲಗೆ ತೆಗೆಯದಿರುವುದೇ ಕಾರಣ. ಇದರಿಂದಾಗಿ ಸಾಲುºಡ, ಅರೆಹೊಳೆ, ಬಡಾಕೆರೆ ಭಾಗದಲ್ಲಿ ನೆರೆ ನೀರು ಇಳಿಯುತ್ತಿಲ್ಲ. ಸಂಬಂಧಪಟ್ಟವರು ಕೂಡಲೇ ಈ ಬಗ್ಗೆ ಗಮನಹರಿಸಿ, ಸರಿಪಡಿಸಬೇಕು. –ರಾಜೇಶ್‌ ಸಾಲ್ಖುಡ, ಸ್ಥಳೀಯ ಗ್ರಾ.ಪಂ. ಸದಸ್ಯರು

ಗಮನಕ್ಕೆ ತರಲಾಗುವುದು: ಬಂಟ್ವಾಡಿ ಕಿಂಡಿ ಅಣೆಕಟ್ಟು ತಳಭಾಗದಲ್ಲಿ ಬಾಕಿಯಾದ ಹಲಗೆ ಹಾಗೂ ಸ್ವಯಂಚಾಲಿತ ಗೇಟ್‌ ಸರಿಪಡಿಸುವ ಬಗ್ಗೆ ಸಣ್ಣ ನೀರಾವರಿ ಇಲಾಖೆ ಗಮನಕ್ಕೆ ತಂದು ಪರಿಶೀಲನೆ ಮಾಡುವಂತೆ ಪತ್ರ ಬರೆಯಲಾಗುವುದು. ಈ ಕಿಂಡಿ ಅಣೆಕಟ್ಟಿನ ಸಮರ್ಪಕ ನಿರ್ವಹಣೆ ಮಾಡುವಂತೆ ಸಂಬಂಧಪಟ್ಟವರಿಗೆ ಸೂಚಿಸಿ, ನೆರೆ ಹಾಗೂ ಉಪ್ಪು ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು.-ಕಿರಣ್‌ ಜಿ.ಗೌರಯ್ಯ, ಬೈಂದೂರು ತಹಶೀಲ್ದಾರ್‌

ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next